ಸಾರಾಂಶ
ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ನಿರ್ವಹಣೆಯ ಸಂತೇಮರಹಳ್ಳಿಯಲ್ಲಿರುವ ಅರ್ಚರಿ,ಫೆನ್ಸಿಂಗ್ ಕ್ರೀಡಾ ನಿಲಯಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ನಿರ್ವಹಣೆಯ ಸಂತೇಮರಹಳ್ಳಿಯಲ್ಲಿರುವ ಅರ್ಚರಿ,ಫೆನ್ಸಿಂಗ್ ಕ್ರೀಡಾ ನಿಲಯಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.ಬೆಳಗ್ಗೆಯೇ ಕ್ರೀಡಾನಿಲಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅವರನ್ನು ನಿಲಯದ ಕ್ರೀಡಾಪಟುಗಳು ಬರಮಾಡಿಕೊಂಡರು. ಪ್ರತಿಯೊಬ್ಬರು ಜಿಲ್ಲಾಧಿಕಾರಿಗೆ ತಮ್ಮ ಪರಿಚಯ ಮಾಡಿಕೊಂಡರು. ಕ್ರೀಡಾಪಟುಗಳೊಂದಿಗೆ ಜಿಲ್ಲಾಧಿಕಾರಿಗಳು ಕ್ರೀಡಾ ನಿಲಯದಲ್ಲಿಯೇ ಬೆಳಗಿನ ಉಪಹಾರ ಸೇವಿಸಿದರು. ಇದೇ ವೇಳೆ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು. ಇದಕ್ಕಾಗಿ ದಿನನಿತ್ಯ ತಪ್ಪದೇ ಶ್ರಮವಹಿಸಿ ತರಬೇತಿ ಪಡೆಯಬೇಕು. ಕ್ರೀಡಾನಿಲಯದಲ್ಲಿ ಯಾವುದೇ ತೊಂದರೆ ಸಮಸ್ಯೆಗಳು ಇದ್ದರೆ ಮುಕ್ತವಾಗಿ ಹೇಳಬೇಕು. ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಎಲ್ಲ ಸೌಲಭ್ಯಗಳನ್ನು ಉತ್ತಮವಾಗಿ ಒದಗಿಸಲಾಗುತ್ತಿದೆ. ಈ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಷ್ಟ್ರಮಟ್ಟದಲ್ಲಿ ಕೀರ್ತಿ ತರುವಂತಾಗಬೇಕು ಎಂದದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನುದಾನದಲ್ಲಿ ಅಂದಾಜು 2 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಫೆನ್ಸಿಂಗ್ ಒಳಾಂಗಣ ಕ್ರೀಡಾಂಗಣದ ಕಾಮಗಾರಿಯನ್ನು ಪರಿಶೀಲಿಸಿದರು. ನಿರ್ಮಾಣದ ಹೊಣೆ ನಿರ್ವಹಿಸುತ್ತಿರುವ ಕೆ.ಆರ್.ಐ.ಡಿ.ಎಲ್ ಸಂಸ್ಥೆ ಅಧಿಕಾರಿಗಳು ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಳ್ಳಬೇಕು. ನವೆಂಬರ್ ಅಂತ್ಯದೊಳಗೆ ಕೆಲಸ ಪೂರ್ಣಗೊಳಿಸಬೇಕು. ಅರ್ಚರಿ ಉಗ್ರಾಣ ಮತ್ತು ರೇಂಜ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಿ ಇಲಾಖೆಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಿರುವ ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳ ಅಭಿವೃದ್ಧಿ ಅನುದಾನ ವ್ಯರ್ಥವಾಗಬಾರದು. ಕಾಮಗಾರಿಗೆ ನಿಗದಿಪಡಿಸಿರುವ ಹಣವನ್ನು ವೆಚ್ಚ ಮಾಡಿ ಕ್ರೀಡಾಂಗಣ ಕಾಮಗಾರಿಯನ್ನು ಪೂರ್ಣಗೊಳಿಸಿ ಕ್ರೀಡಾಪಟುಗಳು ಕ್ರೀಡಾಸಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ಕೆ. ಸುರೇಶ್, ಕೆ.ಆರ್.ಐ.ಡಿ.ಎಲ್ ಕಾರ್ಯಪಾಲಕ ಎಂಜಿನಿಯರ್ ತಿಪ್ಪಾರೆಡ್ಡಿ, ಕ್ರೀಡಾ ತರಬೇತುದಾರರಾದ ಸುಜಿತ್, ಪವನ್ ಕುಮಾರ್, ಗೋಪಾಲ್, ನಿಲಯ ಪಾಲಕರಾದ ಅರ್ಜುನ್ ದೊರೆ, ಮಂಜುನಾಥ್ ಇದ್ದರು.