ನಮ್ಮಲ್ಲಿ ಶಿಕ್ಷಣಕ್ಕೆ ಕೊರತೆ ಇಲ್ಲ. ಸಂಸ್ಕಾರಕ್ಕೆ ಕೊರತೆ ಇದೆ. ಪ್ರತಿಯೊಬ್ಬರೂ ಸಂಸ್ಕಾರಯುತರಾಗಬೇಕು. ಭಗವದ್ಗೀತೆಯಲ್ಲಿ ಎಲ್ಲವೂ ಇದೆ.

ಭಗವದ್ಗೀತೆ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಭಟ್ಕಳ

ನಮ್ಮಲ್ಲಿ ಶಿಕ್ಷಣಕ್ಕೆ ಕೊರತೆ ಇಲ್ಲ. ಸಂಸ್ಕಾರಕ್ಕೆ ಕೊರತೆ ಇದೆ. ಪ್ರತಿಯೊಬ್ಬರೂ ಸಂಸ್ಕಾರಯುತರಾಗಬೇಕು. ಭಗವದ್ಗೀತೆಯಲ್ಲಿ ಎಲ್ಲವೂ ಇದೆ. ಭಗವದ್ಗೀತೆ ಸಾರ ತಿಳಿದುಕೊಂಡರೆ ನಮ್ಮೆಲ್ಲಾ ಸಮಸ್ಯೆಗೆ ಪರಿಹಾರ ದೊರಕುವುದು ಎಂದು ಹೊನ್ನಾವರದ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠದ ವ್ಯವಸ್ಥಾಪಕ ರಾಘವೇಂದ್ರ ಎಚ್.ಆರ್. ಹೇಳಿದರು.

ಪಟ್ಟಣದ ಗುರುಸುಧೀಂದ್ರ ಕಾಲೇಜಿನ ಶ್ರೀಧರ ಸ್ವಾಮಿ ಸಭಾಭವನದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ ಮತ್ತು ಗಜಾನನ ಗಣಪತಿ ಕೊಲ್ಲೆ ರಾಯ್ಕರ ಟ್ರಸ್ಟ್‌ ವತಿಯಿಂದ ನಡೆದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಪ್ರಾಥಮಿಕ ಶಿಕ್ಷಣ ಅತೀ ಅಗತ್ಯ. ಇದು ಸರಿಯಾಗಿ ಸಿಕ್ಕರೆ ಮುಂದಿನ ಎಲ್ಲಾ ಹಂತದ ಶಿಕ್ಷಣ ಸುಲಭವಾಗಲಿದೆ. ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ಕಲಿತ ವಿದ್ಯೆ ಜೀವನದ ಕೊನೆಯವರೆಗೂ ನೆನಪಿರಲಿದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಭಗವದ್ಗೀತೆಯನ್ನು ಎಲ್ಲರೂ ಅರಿತುಕೊಳ್ಳಬೇಕು. ಇದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಎಲ್ಲಾ ಸಮಸ್ಯೆಗೂ ಇದರಲ್ಲಿ ಪರಿಹಾರ ಸಿಗಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ವ್ಯವಸ್ಥಾಪಕ ರಾಜೇಶ ನಾಯಕ ಮಾತನಾಡಿ, ಭಗವದ್ಗೀತೆಯ 18 ಅಧ್ಯಾಯವನ್ನೂ ಅರ್ಥ ಮಾಡಿಕೊಳ್ಳಬೇಕು. ಭಗವದ್ಗೀತೆಯನ್ನು ಬೇರೆ ದೇಶದವರು ಇಷ್ಟ ಪಡುತ್ತಿದ್ದಾರೆ. ಇದರಲ್ಲಿ ಮನುಷ್ಯನ ಬದುಕಿನ ಎಲ್ಲಾ ಸಮಸ್ಯೆಗೂ ಪರಿಹಾರ ಇದೆ ಎಂದರು.

ಇನ್ನೋರ್ವ ಅತಿಥಿ ಖೇದಾರ ಕೊಲ್ಲೆ ಮಾತನಾಡಿ, ಭಗವದ್ಗೀತೆ ಓದಿದರೆ ಹೆಚ್ಚಿನ ಜ್ಞಾನ ಲಭ್ಯವಾಗುತ್ತದೆ. ಇದು ವ್ಯಕ್ತಿತ್ವದ ಪರಿಚಯ ಮಾಡುತ್ತದೆ. ಭಗವದ್ಗೀತೆ ಬಗ್ಗೆ ಜಾಗೃತಿ ಮೂಡುತ್ತಿದೆ. ವಿದ್ಯಾರ್ಥಿಗಳು ಭಗವದ್ಗೀತೆ ಕಂಠಪಾಠವನ್ನು ಅತ್ಯುತ್ತಮವಾಗಿ ಮಾಡಿದ್ದು, ಇದರ ಅರ್ಥವನ್ನೂ ಸಹ ತಿಳಿದುಕೊಳ್ಳಬೇಕೆಂದರು.

ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ರಮೇಶ ಖಾರ್ವಿ ಮಾತನಾಡಿದರು. ಭಗವದ್ಗೀತೆ ಸ್ಪರ್ಧೆಯಲ್ಲಿ ಬೈಂದೂರಿನಿಂದ ಗೋಕರ್ಣದ ವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರಿಂದ 120ಕ್ಕೂ ಹೆಚ್ಚು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಜ್ಞಾನೇಶ್ವರಿ ಶಿಕ್ಷಣ ಮತ್ತು ನ್ಯೂ ಇಂಗ್ಲಿಷ್ ಪಿಯು ಕಾಲೇಜು ಪ್ರಾಚಾರ್ಯ ವೀರೇಂದ್ರ ಶಾನಭಾಗ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಶಿವಾನಂದ ಭಟ್ಟ ನಿರೂಪಿಸಿದರು.