ಜಗತ್ತಿನ ಚರಾಚರ ವಸ್ತುಗಳಲ್ಲಿ ಭಗವಂತನನ್ನು ಕಾಣುತ್ತಿದ್ದೇನೆ ಎಂಬ ಭಾವನೆ ಬಂದರೆ ಮನುಷ್ಯನಿಗೆ ಯಾವುದು ಬೇಕಿಲ್ಲ. ಒಳ್ಳೆಯ ಕೆಲಸವನ್ನು ಮಾಡುವ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣ ಜೀವನದಲ್ಲಿ ಯಶಸ್ಸು ನೆಮ್ಮದಿ ನೀಡಲಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಜಗತ್ತಿನ ಚರಾಚರ ವಸ್ತುಗಳಲ್ಲಿ ಭಗವಂತನನ್ನು ಕಾಣುತ್ತಿದ್ದೇನೆ ಎಂಬ ಭಾವನೆ ಬಂದರೆ ಮನುಷ್ಯನಿಗೆ ಯಾವುದು ಬೇಕಿಲ್ಲ. ಒಳ್ಳೆಯ ಕೆಲಸವನ್ನು ಮಾಡುವ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣ ಜೀವನದಲ್ಲಿ ಯಶಸ್ಸು ನೆಮ್ಮದಿ ನೀಡಲಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು. ಅವರು ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದ ಪ್ರಸಿದ್ಧ ಶ್ರೀ ಅಂಬಾದೇವಿ ಅಮ್ಮನವರ ೨೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ಲೋಕ ಕಲ್ಯಾಣಾರ್ಥ ಹೋಮ ಪೂರ್ಣಾಹುತಿ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಬಲಿಷ್ಠ ರಾಷ್ಟ್ರಗಳು ಯುದ್ಧ ಮಾಡುತ್ತಿದ್ದರು, ಭಾರತೀಯರಲ್ಲಿರುವ ಆತ್ಮವಿಶ್ವಾಸದ ಬದುಕು, ಭಗವಂತ ಮೇಲೆ ಇಟ್ಟಿರುವ ಅಚಲ ನಂಬಿಕೆ ಭರತ ಖಂಡದ ರಕ್ಷಣೆ ಮಾಡುತ್ತಿದೆ. ಜಗತ್ತಿನ ಎಲ್ಲಾ ದುಷ್ಟ ಶಕ್ತಿಗಳನ್ನು ಸಂಹರಿಸಲು ಬ್ರಹ್ಮ ಶಕ್ತಿ, ಶಿವಶಕ್ತಿ, ವಿಷ್ಣುಶಕ್ತಿ ಎಲ್ಲ ಒಗ್ಗೂಡಿ ಆದಿಶಕ್ತಿ ರೂಪ ತಾಳಿ ಜಗತ್ತಿನ ಕಂಟಕ ದೂರ ಮಾಡಿದ ಶಕ್ತಿ ಆದಿಶಕ್ತಿಗೆ ಸಲ್ಲುತ್ತದೆ. ಹೊಸಹಳ್ಳಿ ಶ್ರೀ ಅಂಬಾದೇವಿ ಶಕ್ತಿ ದೇವತೆಯಾಗಿದ್ದು ಭಕ್ತರ ಇಷ್ಟಾರ್ಥ ಈಡೇರಿಸುವ ಸುಕ್ಷೇತ್ರವಾಗಿ ರೂಪುಗೊಂಡಿದೆ. ಆದಿಶಕ್ತಿ ನಾಡಿನ ರೈತ ಹಾಗೂ ಜನಸಾಮಾನ್ಯರ ಜೀವನದಲ್ಲಿ ಸುಭಿಕ್ಷೆ ಕರುಣಿಸಿ, ನೆಮ್ಮದಿ ಆರೋಗ್ಯ ನೀಡಲಿ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ ಮಾತನಾಡಿ ಹೊಸಹಳ್ಳಿಯಲ್ಲಿ ನೆಲೆಗೊಂಡಿರುವ ಶ್ರೀ ಅಂಬಾದೇವಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ಶಕ್ತಿ ದೇವತೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ನಂಜಾವಧೂತ ಶ್ರೀಗಳು ನೀರಾವರಿ ಮತ್ತು ರೈತರ ಬಗ್ಗೆ ಇಟ್ಟಿರುವ ಕಾಳಜಿ ಮೆಚ್ಚುವಂತಹದ್ದು, ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿಯಲು ಶ್ರೀಗಳ ನೀರಾವರಿ ಹಾಕ್ಕೋತ್ತಾಯ ದಿನ ಪ್ರೇರಣೆ ಎಂದರು.

ಶ್ರೀ ಅಂಬಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಎಚ್.ಎಂ. ಶಶಿಧರ, ಹೊಸಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ರಾಮಚಂದ್ರಪ್ಪ, ಮುಖಂಡ ಸಿದ್ದಲಿಂಗಪ್ಪ, ಪ್ರವೀಣ್ ಹುಲಿಕುಂಟೆ, ಸೋಮಶೇಖರ್, ನಟರಾಜು, ಪರಮೇಶ್, ಮಂಜುನಾಥ್, ಲಿಂಗೇಗೌಡ, ಕ್ಯಾದಿಗುಂಟೆ ಮುದ್ದರಾಜು ಸೇರಿದಂತೆ ಹಲವರು ಹಾಜರಿದ್ದರು.