ಸಾರಾಂಶ
ಶುಚಿಯಾದ ಸಮಾಧಾನಕರ ಬದುಕಿಗೆ ಬೇಕಾಗುವ ಎಲ್ಲ ಮಾರ್ಗದರ್ಶನ ವಚನಗಳಲ್ಲಿದೆ. ಇಂತಹ ವಚನಗಳ ಪ್ರಚಾರ ಪ್ರಸಾರಕ್ಕಾಗಿಯೇ ಶರಣ ಸಾಹಿತ್ಯ ಪರಿಷತ್ತು ಸೇವೆ ಸಲ್ಲಿಸುತ್ತಿದೆ. ಮಕ್ಕಳು ಯುವಕರಿಗೆ ವಚನಗಳನ್ನು ತಲುಪಿಸುವ ಕಾರ್ಯ ಆಗಬೇಕಿದೆ.
ಹಾವೇರಿ: ಸ್ವಸ್ಥ ಬದುಕಿನ ಸಪ್ತ ಸೂತ್ರ ಹಾಗೂ ಸನ್ಮಾರ್ಗದ ಚಿಂತನೆಗಳು ವಚನಗಳಲ್ಲಿ ಅತ್ಯಂತ ಸರಳವಾಗಿ ಅಭಿವ್ಯಕ್ತಿಯಾಗಿದ್ದು, ಇವುಗಳನ್ನು ಬದುಕಿಗೆ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ ಎಂದು ನಿವೃತ್ತ ಪ್ರಾಧ್ಯಾಪಕ ಕೊಟ್ರೇಶ ಬಿಜಾಪೂರ ತಿಳಿಸಿದರು.ನಗರದ ಭಗತ್ ಸಮೂಹ ಸಂಸ್ಥೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದ್ವೇಷ, ಅಸೂಯೆಯಿಂದ ದೂರವಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ವೈಷಮ್ಯರಹಿತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ ಎಂದರು.
ಶುಚಿಯಾದ ಸಮಾಧಾನಕಕರ ಬದುಕಿಗೆ ಬೇಕಾಗುವ ಎಲ್ಲ ಮಾರ್ಗದರ್ಶನ ವಚನಗಳಲ್ಲಿದೆ. ಇಂತಹ ವಚನಗಳ ಪ್ರಚಾರ ಪ್ರಸಾರಕ್ಕಾಗಿಯೇ ಶರಣ ಸಾಹಿತ್ಯ ಪರಿಷತ್ತು ಸೇವೆ ಸಲ್ಲಿಸುತ್ತಿದೆ. ಮಕ್ಕಳು ಯುವಕರಿಗೆ ವಚನಗಳನ್ನು ತಲುಪಿಸುವ ಕಾರ್ಯ ಆಗಬೇಕಿದೆ ಎಂದರು.ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಜಿಲ್ಲಾಧ್ಯಕ್ಷ ಜಗದೀಶ ಹತ್ತಿಕೋಟಿ ಮಾತನಾಡಿ, ಜ್ಞಾನವೇ ನಿಜವಾದ ಗುರು. ಅರಿವು, ಸದಾಚಾರ ಮೂಡಿಸುವವನೆ ನಿಜವಾದ ಗುರು ಸ್ಥಾನಕ್ಕೆ ಯೋಗ್ಯ. ಗುರು ಅಂದರೆ ಬೆಳಕು. ಅರಿವಿನ ಕಣ್ಣಿನಿಂದ ನೋಡಿದರೆ ಎಲ್ಲವೂ ಸರಿಯಾಗಿ ಕಾಣಬಲ್ಲದು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಭಗತ್ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಸತೀಶ ಅವರು, ಶರಣರ ಇತಹಾಸ ಎಲ್ಲರೂ ಅರಿಯೋಣ. ಅವರ ಸತ್ವಯುತ ಬೋಧನೆಗಳು ಅತ್ಯಂತ ಸರಳ ಹಾಗೂ ಸಮಾಜಮುಖಿಯಾಗಿವೆ. ಎಲ್ಲ ಮನೆ- ಮನಗಳು ವಚನಗಳತ್ತ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ, ನಿವೃತ್ತ ಉಪನ್ಯಾಸಕ ಎಸ್.ಆರ್. ಮಠಪತಿ, ಶಸಾಪ ಉಪಾಧ್ಯಕ್ಷೆ ಅನಿತಾ ಉಪಲಿ ಅತಿಥಿಗಳಾಗಿದ್ದರು. ವೀಣಾ ಇಪ್ಪಿಕೊಪ್ಪ ವಚನ ಪ್ರಾರ್ಥಿಸಿದರು. ಉಪನ್ಯಾಸಕಿ ದೀಪಾ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜಪ್ಪ ಕೆ. ನಿರೂಪಿಸಿದರು. ಉಪನ್ಯಾಸಕಿ ಆಸ್ಮಾ ತಳಕಲ್ಲ ವಂದಿಸಿದರು.