ಸಾರಾಂಶ
ಹಿರೇಕೆರೂರು: ಮೀಸಲಾತಿ ನಮ್ಮ ಧ್ಯೇಯ ಆಗಬಾರದು. ಅದು ಜೀವನದ ಒಂದು ಭಾಗವಾಗಬೇಕು. ಸ್ವಾಭಿಮಾನದ ಬದುಕು ನಮ್ಮದಾಗಬೇಕು. ಸ್ವಂತ ಶ್ರಮದಿಂದ ಮುಂದೆ ಬರಬೇಕು. ದುಡಿಮೆಯ ಲವಲೇಶ ಇರಬೇಕು. ಸಾಧನೆ ಎಂಬುದು ಮುಮ್ಮುಖವಾಗಿರಬೇಕೇ ಹೊರತು ಹಿಮ್ಮುಖವಾಗಬಾರದು ಎಂದು ತಿಪ್ಪಯಿಕೊಪ್ಪದ ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ತಿಳಿಸಿದರು.ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಸಭಾ ಭವನದಲ್ಲಿ ತಾಲೂಕು ಪಂಚಮಸಾಲಿ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಸ್ಕಾರ ಮುಖ್ಯ. ಅದನ್ನು ಮಕ್ಕಳಿಗೆ ತಿಳಿಸಬೇಕು. ಓದಿದವನು ಕೆಟ್ಟವನಾಗಬಹುದು. ಆದರೆ ಸಂಸ್ಕಾರ ಇದ್ದವರು ಕೆಟ್ಟವನಾಗಲು ಸಾಧ್ಯವಿಲ್ಲ. ಮೊಬೈಲ್‌ಗಳು ಮಕ್ಕಳ ಮಾನಸಿಕ ಸ್ಥಿತಿಯನ್ನು ಹಾಳು ಮಾಡುತ್ತಿವೆ. ಜ್ಞಾನ ನದಿ ಇದ್ದಂತೆ. ನದಿ ಹೇಗೆ ಸಮುದ್ರ ಸೇರುವ ವರೆಗೆ ನಿರಂತರ ಹರಿಯುತ್ತದೆಯೋ ಹಾಗೆ ವಿದ್ಯಾರ್ಥಿಗಳ ಪರಿಶ್ರಮ ಉತ್ತಮ ಸ್ಥಾನಮಾನಗಳನ್ನು ಗಳಿಸುವ ವರೆಗೂ ನಿರಂತರವಾಗಿರಬೇಕು ಎಂದರು.ಸಾಹಿತಿ ಡಾ. ನಿಂಗಪ್ಪ ಚಳಗೇರ ಮಾತನಾಡಿ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಮನೆ ಮತ್ತು ಸಮಾಜ ಪರಿಣಾಮ ಬೀರುತ್ತವೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಮಾರ್ಗದರ್ಶನ ಬೇಕು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬೆಳೆಯಲು ಮೊದಲು ಸಮಾಜದ ಸಂಘಟನೆ ಆಗಬೇಕು ಎಂದರು.ಕಾರ್ಯಕ್ರಮದಲ್ಲಿ ತಾಲೂಕಾ ಅಧ್ಯಕ್ಷ ಎಂ.ಎಂ. ಹುಲ್ಮನಿ. ಹರಿಹರ ಪಂಚಮಸಾಲಿ ಪೀಠದ ಧರ್ಮದರ್ಶಿ ಮಹೇಶ ಹಾವೇರಿ, ಎಸ್.ಆರ್. ಅಂಗಡಿ, ಕಂಠಾಧರ ಅಂಗಡಿ, ಎನ್.ಎಸ್. ಹೆಗ್ಗೇರಿ, ಸೋಮಣ್ಣ ಬೆಣ್ಣಿ, ಹೊಳೆಯಪ್ಪ ಸೂರದ, ಮಲ್ಲೇಶಪ್ಪ ಹಾದ್ರಿಹಳ್ಳಿ, ನೀಲಮ್ಮ ಹೊಸಮನಿ, ಶೋಭಾ ಅಂಗಡಿ, ಚಂದ್ರಕಲಾ ಕೋಡಿಗೌಡ್ರ, ಬಸಮ್ಮ ಅಬಲೂರ, ಪೂಜಾ ಅಂಗಡಿ, ಎಂ.ಜಿ. ಈಸರಗೌಡ್ರ, ಎಂ.ಬಿ. ಮುದಕನಗೌಡ್ರ, ಜಿ.ವಿ. ಅಂಗಡಿ, ಬಸವರಾಜ ಗೊಡಚಿಕೊಂಡ, ನಾಗರಾಜ ಪುರದ, ಸತೀಶ ಕೋರಿಗೌಡ್ರ, ಪ್ರವೀಣ ಅಬಲೂರ, ಈರಣ್ಣ ಕಾಟೇನಹಳ್ಳಿ, ನವೀನ ಕಣವಿ ಇತರರು ಇದ್ದರು.