ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಾನು ಇಂದು ಭಾಗಿಯಾಗಿದ್ದೇನೆ. ಮುಂದೆ 75ನೇ ವರ್ಷದ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹ, ಪ್ರೀತಿ ಉಸಿರಾಗಿರಬೇಕು. ಉಸಿರು ಇರುವವರೆಗೂ ಸ್ನೇಹ ಜೀವಂತವಾಗಿರಬೇಕು ಎಂದು ಹಿರಿಯ ನಟ ಶ್ರೀನಾಥ್ ಹೇಳಿದರು.

ನಗರದ ವಿನಾಯಕ ನಗರದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ ೫೦ನೇ ವರ್ಷದ ಗಣೇಶೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಡಳಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ ನಾವೆಲ್ಲರೂ ಪಯಣ ಮಾಡುತ್ತಿದ್ದೇವೆ. ಸ್ನೇಹ ನಮ್ಮೆಲ್ಲರ ಜೀವನದ ಅವಿಭಾಜ್ಯವಾಗಬೇಕು. ಪ್ರತಿಯೊಬ್ಬರೂ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸದಿಂದ ಬಾಳ್ವೆ ನಡೆಸಿದರೆ ಸಮಾಜ ಸುಭಿಕ್ಷವಾಗಿರುತ್ತದೆ ಎಂದು ತಿಳಿಸಿದರು.

ಮನುಷ್ಯನಿಗೆ ಆಸೆ ಇರಬೇಕು, ದುರಾಸೆ ಇರಬಾರದು. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.

ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಾನು ಇಂದು ಭಾಗಿಯಾಗಿದ್ದೇನೆ. ಮುಂದೆ 75ನೇ ವರ್ಷದ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇಷ್ಟು ವರ್ಷಗಳಲ್ಲಿ ಕರ್ನಾಟಕದ ಜನತೆ ಪ್ರೀತಿ, ವಿಶ್ವಾಸವನ್ನು ಸಂಪಾದನೆ ಮಾಡಿದ್ದೇನೆ. ಇನ್ನೂ ಅವರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಮಾಡುತ್ತೇನೆ. ಮುಂದೆಯೂ ನನಗೆ ರಾಜ್ಯದ ಜನತೆ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದಬೇಕು ಎಂದು ಅವರು ಹೇಳಿದರು.

ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ಅಧ್ಯಕ್ಷ ಪ್ರಭು ಮಾತನಾಡಿ, ನಾವು ಚಿಕ್ಕವರಿದ್ದಾಗಲೂ ಹಿರಿಯ ನಟ ಶ್ರೀನಾಥ್ ಅವರನ್ನು ಸಿನಿಮಾಗಳಲ್ಲಿ ನೋಡುತ್ತಾ ಬಂದಿದ್ದೇವೆ. ಅವರ ಸಿನಿಮಾಗಳ ಹಾಡು, ಸಾಹಿತ್ಯ ಇಂದಿನ ಸಿನಿಮಾಗಳಲ್ಲಿ ಕಂಡು ಬರುತ್ತಿಲ್ಲ ಎಂದು ಸ್ಮರಿಸಿದರು.

ನಮ್ಮ ಮಂಡಳಿ ಕಾರ್ಯಕ್ರಮಗಳಿಗೆ ಶ್ರೀನಾಥ್ ಬಂದು ಭಾಗವಹಿಸಿ ವಿಘ್ನೇಶ್ವರ ಆಶೀರ್ವಾದ ಪಡೆದು ಹೋಗುತ್ತಾರೆ. ಅವರು ಇನ್ನು ನೂರು ಕಾಲ ಬಾಳಿ ಬದುಕಲಿ. ಗಣಪತಿ ಅವರಿಗೆ ಆಯುರ್ ಆರೋಗ್ಯ ದಯಪಾಲಿಸಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಹಿರಿಯ ನಟ ಶ್ರೀನಾಥ್ ಅವರು ಸಿನಿಮಾ ಹಾಡಿಗೆ ಹೆಜ್ಜೆ ಹಾಕು ಮೂಲಕ ನೆರೆದಿದ್ದ ಪ್ರೇಕ್ಷಕರು, ಭಕ್ತಾದಿಗಳು ಹಾಗೂ ಅಭಿಮಾನಿಗಳನ್ನು ರಂಜಿಸಿದರು.

ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ಅಧ್ಯಕ್ಷ ಪ್ರಭು, ಉಪಾಧ್ಯಕ್ಷ ಟಿ.ಎಚ್. ಪ್ರಸನ್ನಕುಮಾರ್, ಕಾರ್ಯದರ್ಶಿ ಜಿ.ಎಸ್. ಸಿದ್ದರಾಜು, ಸಹ ಕಾರ್ಯದರ್ಶಿ ಕಲ್ಯಾಣ್‌ಕುಮಾರ್, ಖಜಾಂಚಿ ಎಂ.ಎನ್. ಉಮಾಶಂಕರ್, ಪ್ರಚಾರ ಸಮಿತಿಯ ರೇಣುಕ ಪರಮೇಶ್, ನಿರ್ದೇಶಕರಾದ ರಾಘವೇಂದ್ರ, ಕೆ.ನರಸಿಂಹಮೂರ್ತಿ, ಜಿ.ಸಿ. ವಿರೂಪಾಕ್ಷ, ಡಾ.ಅನುಸೂಯ ರುದ್ರಪ್ರಸಾದ್, ಜಗಜ್ಯೋತಿ ಸಿದ್ದರಾಮಯ್ಯ, ಟಿ.ಎಚ್. ಮಹೇಶ್, ಪದ್ಮರಾಜು ಟಿ.ಕೆ., ಎಚ್.ಆರ್. ನಾಗೇಶ್, ಟಿ.ಆರ್. ನಟರಾಜು, ಇಂದ್ರಾಣಿ ಪ್ರಕಾಶ್, ಆದರ್ಶ, ಸುರೇಶ್‌ಕುಮಾರ್, ಟಿ.ಎಂ. ಕುಮಾರಸ್ವಾಮಿ, ಎ.ಆರ್. ಶ್ರೀನಾಥ್, ಜಿ.ಸಿ. ಬಸವರಾಜು, ಚಿಕ್ಕಣ್ಣ, ಕೋರಿ ಮಂಜುನಾಥ್, ಆಡಿಟರ್ ಆಂಜಿನಪ್ಪ, ಬಾವಿಕಟ್ಟೆ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.