ಇಸ್ರೋ ನಿವೃತ್ತ ವಿಜ್ಞಾನಿ ಕುಮಾರ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರಾತ್ಯಕ್ಷಿಕೆಗಳು ನೋಡುಗರ ಗಮನ ಸೆಳೆದವು.
ಕನ್ನಡಪ್ರಭ ವಾರ್ತೆ ಶಿರಾ
ವಿಜ್ಞಾನ ಯುಗದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಆವಿಷ್ಕಾರಗಳು ಮನುಷ್ಯನ ಜೀವನಕ್ಕೆ ಪೂರಕವಾಗಿರಬೇಕು ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮೇಳ, ವಸ್ತು ಪ್ರದರ್ಶನ ಹಾಗೂ ಮೌಲ್ಯಯುತ ಶಿಕ್ಷಣ ಕಾರ್ಯಾಗಾರದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ಇತಿಹಾಸ ಮತ್ತು ಪುರಾಣದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ, ಅದನ್ನು ನೋಡುವ ರೀತಿ ಮತ್ತು ಅರ್ಥೈಸಿಕೊಳ್ಳುವ ದೃಷ್ಟಿಕೋನ ಮುಖ್ಯವಾಗಿದೆ ಎಂದರು. ಸಮಾಜ ಸೇವಕ ಕಿರಣ್ ಗೌಡ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಬಗ್ಗೆ ವಿಶೇಷ ಗೌರವವಿದೆ, ನಿಮ್ಮ ಬಗ್ಗೆ ನಂಬಿಕೆ ಇಟ್ಟು ತಮ್ಮ ಮಕ್ಕಳ ಭವಿಷ್ಯವನ್ನು ನಿಮ್ಮ ಕೈಯಲ್ಲಿ ಇಟ್ಟಿದ್ದಾರೆ. ಅವರಿಗೆ ಅರಿವಿನ ಜೊತೆಗೆ ನೈತಿಕ ಶಿಕ್ಷಣ ನೀಡುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಮಾಧವ ರೆಡ್ಡಿ ಮಾತನಾಡಿ, ವಿಜ್ಞಾನಿಗಳು ಜನ ಕಲ್ಯಾಣಕ್ಕಾಗಿ ಅಣುಬಾಂಬ್ ಸೃಷ್ಟಿ ಮಾಡಿದರು. ಆದರೆ ಅದನ್ನು ದೇಶದ ವಿನಾಶಕ್ಕಾಗಿ ಬಳಕೆ ಮಾಡಿಕೊಳ್ಳಬಾರದು. ಅದೇ ರೀತಿ ಇಂದು ಎಐ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗಿದ್ದು ಅದನ್ನು ಜನೋಪಕಾರಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದರು.
ಇಸ್ರೋ ನಿವೃತ್ತ ವಿಜ್ಞಾನಿ ಕುಮಾರ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರಾತ್ಯಕ್ಷಿಕೆಗಳು ನೋಡುಗರ ಗಮನ ಸೆಳೆದವು.ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಜಿಕೆವಿಕೆ ನಿವೃತ್ತ ಅಧಿಕಾರಿ ಎ.ಆರ್.ಶ್ರೀನಿವಾಸಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಶಿಕ್ಷಣ ಸಂಪನ್ಮೂಲ ವ್ಯಕ್ತಿ ರಂಗಯ್ಯ, ಮುಖಂಡ ಮಾನಂಗಿ ರಾಮು ಸೇರಿದಂತೆ ಹಲವಾರು ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.