ಸಾರಾಂಶ
ಶಿರಹಟ್ಟಿ: ವಿಶ್ವಗುರು ಜಗಜ್ಯೋತಿ ಬಸವೇಶ್ವರರು ಮತ್ತೆ ಅವತರಿಸಿ ಬಂದು ಜನರನ್ನು ಉದ್ಧಾರ ಮಾಡಲಿ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಆಶಾವಾದ ವ್ಯಕ್ತಪಡಿಸಿದರು.
ಜಗಜ್ಯೋತಿ ಬಸವೇಶ್ವರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶನಿವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದರು. ಕನ್ನಡ ನಾಡಿನಲ್ಲಿ ೧೨ನೇ ಶತಮಾನ ಸುವರ್ಣಯುಗವಾಗಿದೆ. ಸಂಸ್ಕೃತದ ಪ್ರಭಾವ ಇದ್ದ ಕಾಲದಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಕನ್ನಡದಲ್ಲಿ ವಚನಗಳನ್ನು ರಚಿಸಿದ ಕೀರ್ತಿ ಶಿವಶರಣರಿಗೆ ಸಲ್ಲುತ್ತದೆ.ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಕೆಲಸದ ಮಹತ್ವವನ್ನು ತಿಳಿಸಿಕೊಟ್ಟಿರುವ ಬಸವಣ್ಣ ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡಿದ್ದರು. ಇದರಿಂದ ಅಕ್ಕಮಹಾದೇವಿ, ನೀಲಾಂಬಿಕೆ, ಮುಕ್ತಾಯಕ್ಕ ಮೊದಲಾದ ಶಿವಶರಣರು ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳಲ್ಲಿ ಸಾರಿದ್ದಾರೆ ಎಂದರು.೮೦೦ ವರ್ಷಗಳ ಹಿಂದೆ ಕಲ್ಯಾಣದಲ್ಲಿ ಕ್ರಾಂತಿ ಮಾಡಿದ ಬಸವಣ್ಣ ಮತ್ತೆ ಹುಟ್ಟಿ ಬಂದು ಇಂದಿನ ಪೀಳಿಗೆಯನ್ನು ಉದ್ಧಾರ ಮಾಡಬೇಕಾಗಿದೆ. ೧೨ನೇ ಶತಮಾನದಲ್ಲಿ ಯಾವುದೇ ಕಾನೂನುಗಳನ್ನು ಮಾಡದೇ ಜನರ ಮನ ಪರಿವರ್ತನೆಯಿಂದ ಆಡಳಿತ ನಡೆಸಿದ ವ್ಯಕ್ತಿ ಬಸವಣ್ಣ. ಸಮಾಜದಲ್ಲಿನ ಮೇಲು, ಕೀಳು, ಹೆಣ್ಣು-ಗಂಡು ಎಂಬ ಭೇದ ಭಾವವನ್ನು ತೊರೆದು ಸಮಾನತೆ ತೋರಿಸಿದ ಮಹಾನ್ ಚೇತನ ಬಸವಣ್ಣ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಸವಣ್ಣನವರು ವರ್ಣರಹಿತ, ವರ್ಗರಹಿತ, ಲಿಂಗಭೇದರಹಿತ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದರು. ಕೇವಲ ಆಚಾರ ವಿಚಾರಗಳಲ್ಲಿ ಪ್ರಾಮಾಣಿಕರಾಗಿರದೇ ದಿನ ನಿತ್ಯದ ಕೆಲಸಗಳಲ್ಲಿ ಪ್ರಾಮಾಣಿಕರಾಗಿರಬೇಕು. ದುಡಿಮೆ ಶಿವಪೂಜೆಗೆ ಸಮಾನ ಎಂದ ವಿಶ್ವಗುರು ಬಸವಣ್ಣನವರು, ತನ್ನ ತಾನರಿಯದೊಡೆ ಅದೇ ದೇವರು ಎಂದು ಸಾರಿದರು. ಲಿಂಗ ದೇವರಲ್ಲ ಅದು ಅರಿವಿನ ಕುರುಹು ಎಂಬುದನ್ನು ಜನಕ್ಕೆ ತೋರಿಸಿಕೊಟ್ಟರು ಎಂದರು.ಸರ್ಕಾರ ಕ್ರಾಂತಿಯೋಗಿ ಬಸವಣ್ಣನವರು ಪ್ರತಿಪಾದಿಸಿದ ಸಾರ್ವತ್ರಿಕ ಮೌಲ್ಯಗಳಾದ ಜಾತಿ ರಹಿತ ಸಮಾಜ, ಕಾಯಕದ ಮಹತ್ವ ಮತ್ತು ವರ್ಗ ರಹಿತ ಸಮಾಜ ಸಂವಿಧಾನದ ಆಶಯಗಳಿಗೆ ಅವರ ಚಿಂತನೆಗಳು ಸಮರ್ಥನೀಯವಾದ ನೆಲೆ ಒದಗಿಸಿರುವ ಹಿನ್ನೆಲೆ ಅರಿತ ಸರ್ಕಾರ ಇವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸಂತಸದ ಸಂಗತಿ ಎಂದರು.
ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಕೆ. ಲಮಾಣಿ ಉಪನ್ಯಾಸ ನೀಡಿ ಮಾತನಾಡಿ, ಅನುಭವ ಮಂಟಪ ಸ್ಥಾಪಿಸಿದ ಜಂಗಮ ಚಳುವಳಿಯ ನೇತಾರ ಬಸವಣ್ಣನವರು ಕವಿ, ತತ್ವಜ್ಞಾನಿ, ಸಮಾಜ ಸುಧಾರಕ ಎಲ್ಲವೂ ಆಗಿದ್ದರು. ಹುಟ್ಟಿ ಬೆಳೆದು ಸಾಧಿಸಿದ್ದೆಲ್ಲ ೧೨ನೇ ಶತಮಾನದಲ್ಲಿ. ಆದರೆ ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ನೀಡಿದ ಮಾರ್ಗದರ್ಶನ ಇಂದಿಗೂ ಅನುಸರಣೀಯ ಎಂದರು.ಕಾಯಕವೇ ಕೈಲಾಸವೆಂದ ಬಸವಣ್ಣ ಜಾತಿ ತಾರತಮ್ಯ, ಡಾಂಭಿಕ ಭಕ್ತಿ ಎಲ್ಲದರ ವಿರುದ್ಧ ತಿರುಗಿ ಬಿದ್ದವರು. ತಮ್ಮದೇ ಆದ ರೀತಿಯಲ್ಲಿ ದಮನಕ್ಕೊಳಗಾದವರ ಧ್ವನಿಯಾಗಿ ನಿಂತಿದ್ದರು. ಎಲ್ಲರಲ್ಲೂ ದುಡಿಯುವ ಛಲ ಹುಟ್ಟು ಹಾಕಿದರು. ಅನುಭವ ಮಂಟಪ ಸ್ಥಾಪಿಸಿ ಅದರಲ್ಲಿ ಎಲ್ಲರೂ ವಿಚಾರ ವಿನಿಮಯ ಮಾಡಲು ವೇದಿಕೆ ಕಲ್ಪಿಸಿದರು ಎಂದು ಹೇಳಿದರು.
ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಕೌಸಿಕ ದಳವಾಯಿ, ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ವಡವಿ, ಮುತ್ತು ಮಜ್ಜಗಿ, ಮರಿಗೌಡ ಸುರಕೋಡ, ಅಕಬರ ಯಾದಗೀರಿ, ಈರಣ್ಣ ಚವ್ಹಾಣ, ಸಂತೋಷ ಅಸ್ಕಿ ಸೇರಿ ಅನೇಕರು ಇದ್ದರು.