ಮನುಷ್ಯ ವ್ಯಸನಗಳಿಂದ ದೂರಾಗಿ ಸದ್ಗುಣಗಳನ್ನು ಅಳವಡಿಸಿಕೊಂಡರೇ ನೆಮ್ಮದಿಯಿಂದ ಬದುಕು ಸಾಗಿಸಬಹುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬ್ಯಾಡಗಿ: ಮನುಷ್ಯ ವ್ಯಸನಗಳಿಂದ ದೂರಾಗಿ ಸದ್ಗುಣಗಳನ್ನು ಅಳವಡಿಸಿಕೊಂಡರೇ ನೆಮ್ಮದಿಯಿಂದ ಬದುಕು ಸಾಗಿಸಬಹುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕಲ್ಲೇದೇವರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿವರ್ತನೆಯಡೆಗೆ ಧರ್ಮಜಾಗೃತಿ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ, ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ವ್ಯರ್ಥವೆಂದು ತಿಳಿದು ಕೇವಲ ಸಂಪತ್ತು ಮತ್ತು ಇಷ್ಟಾರ್ಥದ ಕಡೆಗೆ ಮಾತ್ರ ಗಮನ ಹರಿಸುತ್ತಾನೆ. ಆದರೆ ಮೊದಲನೇ ಧರ್ಮ ಹಾಗೂ ಕೊನೆಯ ಮೋಕ್ಷದ ಕಡೆಗೆ ಗಮನ ಹರಿಸುವುದಿಲ್ಲ. ಸುಖ, ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಯಾವತ್ತೂ ಮರೆಯಬಾರದು, ಧರ್ಮ ಮಾರ್ಗದಲ್ಲಿ ನಡೆದರೆ ಉಳಿದ ಮೂರು ಪುರುಷಾರ್ಥಗಳು ಲಭಿಸುವುದರಲ್ಲಿ ಸಂಶಯವಿಲ್ಲ. ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧವಾಗುತ್ತದೆ. ಸತ್ಯ ಶುದ್ಧಕಾಯಕದಿಂದ ಬದುಕು ಸುಂದರ ಸುಭದ್ರವಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಲ್ಲಾಪುರದ ಗುರುಮಹಾಂತಯ್ಯ ಶಾಸ್ತ್ರೀಜಿಯಿಂದ ಪ್ರವಚನ ಸಂಗೀತ ಜರುಗಿತು. ಷಣ್ಮುಖಪ್ಪ ಕಮ್ಮಾರ ತಬಲಾ ಸಾಥ್ ನೀಡಿದರು. ಸಮಾರಂಭದಲ್ಲಿ ಜಗದೀಶ ಹೊನ್ನಪ್ಪನವರ, ಕುಮಾರ ಹುಲ್ಮನಿ, ರಾಮಣ್ಣ ಅಳಲಗೇರಿ, ಫಕ್ಕಿರೇಶ ಹೊನ್ನಪ್ಪನವರ, ಈರಣ್ಣ ಹಿರೇಮಠ, ಅಶೋಕ ನವಣೇರ, ಚನ್ನಬಸಪ್ಪ ಚೂರಿ, ಕಲ್ಲಪ್ಪ ಕದರಮಂಡಲಗಿ, ಪ್ರವೀಣ ಹೊನ್ನಪ್ಪನವರ, ಕಲ್ಲಪ್ಪ ನರಸಿಪುರ, ಕಲ್ಲಪ್ಪ ಹುಲ್ಮನಿ, ಬರಮಪ್ಪ ಹಾವನೂರ, ಶಂಭುಗೌಡ್ರ, ಮಂಜು ಪೂಜಾರ, ನಾಗರಾಜ ಸುಗ್ನಳ್ಳಿ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗಿಯಾಗಿದ್ದರು. ಗ್ರಾಮದ ಹುಲ್ಮನಿ, ಕದರಮಂಡಲಗಿ, ನರಸಿಪುರ ಮನೆತನದವರಿಂದ ಶ್ರೀಗಳಿಗೆ ನಾಣ್ಯಗಳ ತುಲಾಭಾರ ನೆರವೇರಿಸಿದರು. ನಂತರ ಅನ್ನದಾಸೋಹ ಜರುಗಿತು. ಕಲ್ಲೇದೇವರ, ನೆಗಳೂರ, ಕನವಳ್ಳಿ, ಗುತ್ತಲ ಗ್ರಾಮಗಳಿಂದ ಭಕ್ತಾಧಿಗಳು ಆಗಮಿಸಿದ್ದರು.