ಸಮಾಜದಲ್ಲಿ ಕೋಮು ಸೌಹಾರ್ದ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಅಗತ್ಯ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ವೈವಿಧ್ಯಮಯ ಹಿನ್ನೆಲೆಯ ಸಾಹಿತಿಗಳನ್ನು ಗುರುತಿಸಿ ಗೌರವಿಸುವುದು ಮಹತ್ವದ ಸಂಗತಿಯಾಗಿದೆ. ಸಾಹಿತ್ಯ ಮತ್ತು ಕಾವ್ಯಗಳು ಜನರ ನಡುವೆ ಪ್ರೀತಿ, ಸಹೋದರತ್ವ ಹಾಗೂ ಪರಸ್ಪರ ಗೌರವವನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ. ಹಾಸನ ಜಿಲ್ಲೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಶ್ರೀಮಂತಿಕೆಯನ್ನು ಹೊಂದಿದೆ.
ಕನ್ನಡಪ್ರಭ ವಾರ್ತೆ ಹಾಸನ
ಸಾಹಿತ್ಯ ಮತ್ತು ಕಾವ್ಯಗಳು ಸಮಾಜದಲ್ಲಿ ಪ್ರೀತಿ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ. ಸಾಹಿತ್ಯ ಸಾಧಕರನ್ನು ಗುರುತಿಸಿ ಗೌರವಿಸುವ ಸಮ್ಮೇಳನಗಳು ಹೊಸ ತಲೆಮಾರಿನ ಬರಹಗಾರರಿಗೆ ಪ್ರೇರಣೆ ನೀಡುತ್ತವೆ ಎಂದು ರಾಯಚೂರು ಕುಲಪತಿ ಡಾ. ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.ನಗರದ ಸಂಸ್ಕೃತ ಭವನದಲ್ಲಿ ಮಾಣಿಕ್ಯ ಪ್ರಕಾಶನದ ೧೧ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಮಾಣಿಕ್ಯ ಸಂಭ್ರಮ-೨೦೨೬ ಕಾರ್ಯಕ್ರಮದಲ್ಲಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿದ ನಂತರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕೋಮು ಸೌಹಾರ್ದ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಅಗತ್ಯ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ವೈವಿಧ್ಯಮಯ ಹಿನ್ನೆಲೆಯ ಸಾಹಿತಿಗಳನ್ನು ಗುರುತಿಸಿ ಗೌರವಿಸುವುದು ಮಹತ್ವದ ಸಂಗತಿಯಾಗಿದೆ. ಸಾಹಿತ್ಯ ಮತ್ತು ಕಾವ್ಯಗಳು ಜನರ ನಡುವೆ ಪ್ರೀತಿ, ಸಹೋದರತ್ವ ಹಾಗೂ ಪರಸ್ಪರ ಗೌರವವನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ. ಹಾಸನ ಜಿಲ್ಲೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಶ್ರೀಮಂತಿಕೆಯನ್ನು ಹೊಂದಿದೆ. ಎಸ್. ಎಲ್. ಭೈರಪ್ಪ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕಾವ್ಯವು ಕೇವಲ ಪದಗಳ ಜೋಡಣೆಯಲ್ಲ, ಅದು ಬದುಕಿನ ಅನುಭವಗಳು, ಸಾಮಾಜಿಕ ಸಮಸ್ಯೆಗಳು ಹಾಗೂ ಮಾನವ ಸಂಬಂಧಗಳನ್ನು ಪ್ರತಿಬಿಂಬಿಸುವ ಸೃಜನಶೀಲ ಅಭಿವ್ಯಕ್ತಿಯಾಗಿದೆ ಎಂದರು. ಕನ್ನಡದ ವರಕವಿ ದ.ರಾ. ಬೇಂದ್ರೆಯವರ ಕಾವ್ಯವನ್ನು ಉಲ್ಲೇಖಿಸಿದ ಅವರು, ಕವಿಗಳು ತಮ್ಮ ಸುತ್ತಲಿನ ಬದುಕನ್ನು ಸೂಕ್ಷ್ಮವಾಗಿ ಗಮನಿಸಿ, ಸಾಮಾಜಿಕ ಅಸಮಾನತೆಗಳು ಮತ್ತು ಮಾನವೀಯ ಸಂಬಂಧಗಳನ್ನು ಬರಹಗಳ ಮೂಲಕ ಅಭಿವ್ಯಕ್ತಿಸಬೇಕು. ಡಿಜಿಟಲ್ ಯುಗದಲ್ಲಿಯೂ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ, ಓದುವ ಅಭ್ಯಾಸವನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಕೇವಲ ಓದುವ ಅಭ್ಯಾಸಗಳ ಬದಲಾವಣೆಯ ಆಧಾರದಲ್ಲಿ ಅಳೆಯಬಾರದು. ಪುಸ್ತಕ ಪ್ರಕಟಣೆ, ಹೊಸ ಬರಹಗಾರರ ಪ್ರವೇಶ ಹಾಗೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನಡೆಯುತ್ತಿರುವ ಪ್ರಯೋಗಗಳನ್ನು ಗಮನಿಸಬೇಕು. ಕನ್ನಡ ಸಾಹಿತ್ಯದ ಸೃಜನಶೀಲತೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಸಮ್ಮೇಳನಾಧ್ಯಕ್ಷೆ ಡಾ. ಎಚ್. ಕೆ. ಹಸೀನಾ ಮಾತನಾಡಿ, ಬಸವಣ್ಣ, ಕನಕದಾಸರು, ವಿಶ್ವಶಾಂತಿ, ಸಮಾನತೆ ಹಾಗೂ ಬಹುತ್ವ ಸಂಸ್ಕೃತಿಯ ಆಶಯಗಳನ್ನು ಸಮಾಜಕ್ಕೆ ತಲುಪಿಸುವ ಶಕ್ತಿ ಸಾಹಿತ್ಯ ಮತ್ತು ಕಾವ್ಯಕ್ಕಿದೆ. ಸೂಫಿ ಸಂತರು ಹಾಗೂ ಕುವೆಂಪು ಸೇರಿದಂತೆ ಅನೇಕ ಮಹನೀಯರು ತಮ್ಮ ಬರಹಗಳ ಮೂಲಕ ಸಮಾನತೆ, ವಿಶ್ವಮಾನವತೆ ಮತ್ತು ಮಾನವೀಯತೆಯ ಸಂದೇಶ ಸಾರಿದ್ದಾರೆ. ಸಾಹಿತ್ಯವು ಅನ್ಯಾಯ, ಅಸಮಾನತೆ ಮತ್ತು ಮೌಢ್ಯಗಳನ್ನು ಪ್ರಶ್ನಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಬಲ ಸಾಧನವಾಗಿದೆ ಎಂದರು. ಜನಪದ ಸಾಹಿತ್ಯದಲ್ಲಿಯೂ ಬದುಕಿನ ಆಳವಾದ ಅನುಭವಗಳು, ಪ್ರೀತಿ, ಕಾಳಜಿ ಮತ್ತು ಜೀವನ ಮೌಲ್ಯಗಳು ಅಡಕವಾಗಿವೆ. ತಾಯಂದಿರು ಮಕ್ಕಳಿಗೆ ಹಾಡುತ್ತಿದ್ದ ಜನಪದ ಹಾಡುಗಳಲ್ಲಿ ಬದುಕಿನ ಅನೇಕ ಪಾಠಗಳು ಅಡಗಿವೆ. ಇಂತಹ ಜನಪದ ಪರಂಪರೆಯನ್ನು ಅಧ್ಯಯನ ಮಾಡುವ ಮೂಲಕ ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬಹುದು. ಹೊಸ ಬರಹಗಾರರಿಗೆ ಅವಕಾಶ ಕಲ್ಪಿಸುವುದು, ವಿಭಿನ್ನ ವಿಚಾರಧಾರೆಗಳಿಗೆ ವೇದಿಕೆ ಒದಗಿಸುವುದು ಮತ್ತು ಬಹುತ್ವ ಸಂಸ್ಕೃತಿಯನ್ನು ಗೌರವಿಸುವುದು ಇಂದಿನ ಅಗತ್ಯವಾಗಿದೆ. ಮಾಣಿಕ್ಯ ಪ್ರಕಾಶನದಂತಹ ಸಂಸ್ಥೆಗಳು ಸಾಹಿತಿಗಳು, ಕವಿಗಳು ಮತ್ತು ಚಿಂತಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಪಿ. ಕೃಷ್ಣೇಗೌಡ ಮಾತನಾಡಿ, ಶಾಲಾ ಹಂತದಿಂದಲೇ ಮಕ್ಕಳಲ್ಲಿ ಕನ್ನಡ ಓದು ಮತ್ತು ಬರವಣಿಗೆಯ ಅಭ್ಯಾಸ ಬೆಳೆಸಬೇಕು. ಸಾಮಾಜಿಕ ಮಾಧ್ಯಮಗಳನ್ನು ಕನ್ನಡ ಸಾಹಿತ್ಯದ ಪ್ರಸಾರಕ್ಕೆ ಬಳಸಿಕೊಂಡು ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.ಇದೆ ವೇಳೆ ಹೊಯ್ಸಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಸಾಂಸ್ಕೃತಿಕ ರಾಜ್ಯ ಪ್ರಶಸ್ತಿ ಹಾಗೂ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಬಳಿಕ ಕೃತಿ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ನಡೆಯಿತು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಮೈಸೂರಿನ ಸಾಹಿತಿ ಟಿ. ಸತೀಶ್ ಜವರೇಗೌಡ, ಸಾಹಿತಿ ಹಾಗೂ ಪತ್ರಕರ್ತ ನಾಗರಾಜ್ ಹೆತ್ತೂರು, ಸಮಾಜ ಸೇವಕ ಗಣೇಶ್ ತಮ್ಲಾಪುರ, ಆಲೂರು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವರದರಾಜು ಡಿ.ಎಂ., ನಾಗರಾಜ್ ದೊಡ್ಡಮನಿ, ಮಾಣೀಕ್ಯ ಪ್ರಕಾಶನ ಪ್ರಕಾಶಕರು ದೀಪಾ ಉಪ್ಪಾರ್ ಇತರರು ಉಪಸ್ಥಿತರಿದ್ದರು. ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಸಂಘಟಕ ಜಾವಗಲ್ ಪ್ರಸನ್ನಕುಮಾರ್ ಕಾರ್ಯಕ್ರಮ ನಿರೂಪಿಸಿದರು.