ಸಿದ್ದಾಪುರ ತಾಲೂಕಿನ ವಾಜಗದ್ದೆಯ ಶ್ರೀ ದುರ್ಗಾ ವಿನಾಯಕ ಸಭಾಭವನದಲ್ಲಿ ಹುಲಿಮನೆ ಸೀತಾರಾಮಶಾಸ್ತ್ರಿ ಸ್ಮರಣೆಯಲ್ಲಿ ಹಮ್ಮಿಕೊಂಡಿದ್ದ ಮೂರುದಿನಗಳ ಜಿಲ್ಲಾ ರಂಗೋತ್ಸವಕ್ಕೆ ಹಿರಿಯ ರಂಗಕರ್ಮಿ ರಾಮಕೃಷ್ಣ ಭಟ್ಟ ದುಂಡಿ ಚಾಲನೆ ನೀಡಿದರು.

ಸಿದ್ದಾಪುರ: ವಿಸ್ಮೃತಿಗೆ ಸರಿದ ನಮ್ಮ ಪೌರಾಣಿಕ, ಐತಿಹಾಸಿಕ ಸಂದರ್ಭಗಳ ನೆನಪುಗಳ ಮರುಸ್ಥಾಪನೆಯಾಗಬೇಕಿದೆ. ಅಂಥ ಮಹತ್ತರ ಕಾರ್ಯವನ್ನು ನಮ್ಮ ಗ್ರಾಮೀಣ ಭಾಗದ ರಂಗತಂಡಗಳು ಮಾಡುತ್ತಿರುವುದು ಭರವಸೆಯ ಸಂಗತಿ ಎಂದು ಹಿರಿಯ ರಂಗಕರ್ಮಿ, ರಂಗನಿರ್ದೇಶಕ, ಸಂಘಟಕ ರಾಮಕೃಷ್ಣ ಭಟ್ಟ ದುಂಡಿ ಮಂಚಿಕೇರಿ ಹೇಳಿದರು.

ರಂಗಸೌಗಂಧ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ತಾಲೂಕಿನ ವಾಜಗದ್ದೆಯ ಶ್ರೀ ದುರ್ಗಾ ವಿನಾಯಕ ಸಭಾಭವನದಲ್ಲಿ ಹುಲಿಮನೆ ಸೀತಾರಾಮಶಾಸ್ತ್ರಿ ಸ್ಮರಣೆಯಲ್ಲಿ ಹಮ್ಮಿಕೊಂಡಿದ್ದ ಮೂರುದಿನಗಳ ಜಿಲ್ಲಾ ರಂಗೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತಕ್ಕೆ ಪೌರಾಣಿಕ, ಐತಿಹಾಸಿಕ, ಸ್ವಾತಂತ್ರ್ಯ ಆಂದೋಲನಗಳಂಥ ಅದ್ಭುತವಾದ ನೆನಪಿನ ಸರಪಣಿಗಳಿವೆ. ಇಂಥ ಯಾವ ಪರಂಪರೆಯಿಲ್ಲದ ಜಗತ್ತಿನ ಉಳಿದ ದೇಶಗಳು ದಾರ ಹರಿದ ಗಾಳಿಪಟದಂತೆ ಆಗಿದ್ದರೂ ಭಾರತ ಜಗತ್ತಿಗೆ ಶಾಂತಿ ನೀಡಲು ಈ ಕಾರಣದಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಈಗಿನ ತಲೆಮಾರು ಪುರಾಣ, ಇತಿಹಾಸಗಳ ಕುರಿತು ಅಲಕ್ಷ್ಯ ತಾಳಿ, ಮರೆತುಬಿಟ್ಟಿದೆ. ಉತ್ತಮ ಮೌಲ್ಯಗಳು ನೇಪಥ್ಯಕ್ಕೆ ಸರಿದ ಈ ಸಂಕ್ರಮಣ ಕಾಲದಲ್ಲಿ ನಮಗಿರುವ ಆಸರೆ ಸಾಹಿತ್ಯ ಮತ್ತು ರಂಗಭೂಮಿಯಂಥ ಕಲೆಗಳು. ನಮ್ಮನ್ನು ಎಚ್ಚರಿಸುವ, ಸಮಾಜಕ್ಕೆ ದಿಕ್ಕು ತೋರಿಸುವ ಕಾರ್ಯ ಇವುಗಳಿಂದ ಸಾಧ್ಯ. ಗ್ರಾಮೀಣ ಭಾಗದಲ್ಲಿ ಪೌರಾಣಿಕ, ಐತಿಹಾಸಿಕ ಸಂಗತಿಗಳನ್ನು ವ್ಯವಸ್ಥಿತವಾಗಿ ನಿರೂಪಿಸುವ ಇಂಥ ರಂಗ ಚಟುವಟಿಕೆ ದೇಶ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಎಷ್ಟೇ ಕಷ್ಟವಾದರೂ ಇಂಥ ಕಾರ್ಯಗಳು ಮುಂದುವರಿಯಬೇಕು. ಯಾವ ಸಂವಹನ ಸೌಲಭ್ಯ, ಸೌಕರ್ಯಗಳಿಲ್ಲದ ಕಾಲದಲ್ಲಿ ನಾಟಕ ಕಂಪನಿ ಕಟ್ಟಿ ನಾಡಿನಲ್ಲಿ ಮನೆಮಾತಾದ ರಂಗಭೂಮಿಯ ದಂತಕಥೆ ಸೀತಾರಾಮ ಶಾಸ್ತ್ರಿಗಳ ಮಹತ್ತರ ಕೊಡುಗೆ ಮರೆಯಲಾಗದ್ದು ಎಂದರು.

ಟಿ.ಎಸ್.ಎಸ್. ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಮಾತನಾಡಿ, ರಂಗಸೌಗಂಧ ಸಂಸ್ಥೆ ಕಳೆದ ಎರಡು ದಶಕಗಳಿಂದ ನಿರಂತರವಾಗಿ ರಂಗಭೂಮಿಯ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ನಮ್ಮ ನೆಲದವರಾದ ಸೀತಾರಾಮ ಶಾಸ್ತ್ರಿಗಳ ನೆನಪು ಶಾಶ್ವತವಾಗಿ ಉಳಿಸುವ ದೃಷ್ಟಿಯಿಂದ ಸಿದ್ದಾಪುರದಲ್ಲಿ ಅವರ ಹೆಸರಿನ ರಂಗಮಂದಿರ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದರು. ರಂಗ ಸಂಘಟಕ ಶ್ರೀಕಾಂತ ಶಾನಭಾಗ ಹಾರ್ಸಿಕಟ್ಟಾ ಮಾತನಾಡಿ, ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಸೀತಾರಾಮ ಶಾಸ್ತ್ರಿಗಳ ಕುಟುಂಬ ಕೊಟ್ಟಿರುವ ಕೊಡುಗೆಗಳು ಅತ್ಯುತ್ತಮವಾದದ್ದು. ರಂಗಸೌಗಂಧದ ಜತೆಗಿನ ತನ್ನ ನಂಟು ಎರಡು ದಶಕಗಳದ್ದು. ರಂಗಸೌಗಂಧದ ನಾಟಕಗಳು ನಗರ ಪ್ರದೇಶಗಳಲ್ಲೂ ಪ್ರದರ್ಶನಗೊಳ್ಳಬೇಕು ಎಂದರು.

ಶ್ರೀ ದುರ್ಗಾ ವಿನಾಯಕ ದೇವಸ್ಥಾನದ ಮೊಕ್ತೇಸರ ಶ್ರೀಧರ ಎಂ. ಹೆಗಡೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಿರಿಯ ರಂಗಸಂಘಟಕ ಆರ್.ಎಲ್. ಭಟ್ಟ ಕುಂಬಾರಕುಳಿ ಮಂಚಿಕೇರಿ ಉಪಸ್ಥಿತರಿದ್ದರು.

ರಂಗಸೌಗಂಧದ ಮುಖ್ಯಸ್ಥ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಾಜಾರಾಮ ಭಟ್ಟ ಹೆಗ್ಗಾರಳ್ಳಿ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ಕಾರ್ಯಕ್ರಮ ನಿರೂಪಿಸಿದರು. ಆನಂತರ ಮಗೇಗಾರಿನ ಶ್ರೀ ಮಹಾಗಣಪತಿ ನಾಟ್ಯ ಕಲಾಸಂಘದವರಿಂದ ಪೌರಾಣಿಕ ಸಂಗೀತ ನಾಟಕ ಹರಣ ಪ್ರದರ್ಶನಗೊಂಡಿತು.