ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಮ್ಮ ಹಿರಿಯರು ಹೇಳುವಂತೆ ಜೀವನ ಅರ್ಥಪೂರ್ಣವಾಗಿ, ಸದುದ್ದೇಶದೊಂದಿಗೆ, ತೃಪ್ತಿಕರ ಹಾಗೂ ಸಂಪೂರ್ಣವಾಗಿರಬೇಕು ಎಂದು ವೈದ್ಯ ಡಾ.ಪ್ರಶಾಂತ ಕಟಕೋಳ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದಲ್ಲಿ ನಾಲ್ಕನೇ ಗೋಷ್ಠಿ ಯೋಗ ಜೀವನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯ ಇತರರಿಗೆ ಎಷ್ಟು ಉಪಯುಕ್ತವಾಗಿದ್ದಾನೆ ಎನ್ನುವುದರ ಮೇಲೆ ಆತನ ಜೀವನದ ಮೌಲ್ಯ ತಿಳಿಯುತ್ತದೆ. ಹೊರತು ಆತ ಎಷ್ಟು ಹಣ ಮಾಡಿದ್ದಾನೆ, ಎಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎನ್ನುವುದರ ಮೇಲೆ ಅಲ್ಲ. ಮನುಷ್ಯ ತನ್ನ ಸ್ವಹಿತಕ್ಕಾಗಿ ಬಳಸುವುದನ್ನು ಕಾಮ ಎಂದು ಕರೆಯಲಾಗಿದೆ. ಪರರ ಉಪಯೋಗಕ್ಕಾಗಿ ಬಳಸುವುದನ್ನು ಮೋಕ್ಷ ಎನ್ನಲಾಗಿದೆ. ಹಾಗಾಗಿ ನಾವು ಪರೋಪಕಾರಿ ಜೀವನವನ್ನು ಅಳವಡಿಸಿಕೊಂಡು ಬದುಕನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಮನಸ್ಸಿನಲ್ಲಿ ಜ್ಞಾನಿ ಮತ್ತು ಅಜ್ಞಾನಿಗಳ ವಾಸವಿರುತ್ತದೆ. ನಮ್ಮ ತಲೆಯೊಳಗೆ ಎಲ್ಲವನ್ನು ಹಾಕಿಕೊಳ್ಳಬಾರದು. ನಮಗೆ ಯಾವುದು ಅವಶ್ಯವೋ ಅದನ್ನು ಮಾತ್ರ ತಲೆಯೊಳಗೆ ಹಾಕಿಕೊಳ್ಳಬೇಕು. ಅದಕ್ಕಾಗಿ ನಮಗೆ ಜ್ಞಾನ ಅವಶ್ಯ. ಆ ಜ್ಞಾನವನ್ನು ನಾವು ವಿದ್ಯಾರ್ಥಿ ಜೀವನದಲ್ಲಿಯೇ ಸಂಪಾದಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆಯೇ ನಮಗೆ ಅತೀ ಮುಖ್ಯವಾಗಿರುತ್ತದೆ. ಕಾಮ, ಕ್ರೋಧ, ಮಧ ಮೋಹವನ್ನು ಮನಸ್ಸಿನಿಂದ ದೂರ ಇಟ್ಟು ಅಧ್ಯಯನ ಮಾಡುವಂತೆ ತಿಳಿಸಿದರು.ನರರೋಗ ಶಸ್ತ್ರ ಚಿಕಿತ್ಸಕ ಡಾ.ಮಯೂರ ಕಾಕು ಮಾತನಾಡಿ, ನನಗೆ ಬಾಲ್ಯದಿಂದಲೇ ಯೋಗ ಮಾಡುವುದನ್ನು ನಮ್ಮ ಅಜ್ಜಿ ಕಲಿಸಿಕೊಟ್ಟಿದ್ದರು. ಶಸ್ತ್ರ ಚಿಕಿತ್ಸೆ ಅವಶ್ಯವಾಗಿದ್ದ ವ್ಯಕ್ತಿಯೊಬ್ಬರಿಗೆ ನಾನು ಯೋಗದ ಬಗ್ಗೆ ತಿಳಿಸಿ ಯೋಗ ಮಾಡಿಸಲು ಶುರು ಮಾಡಿದೆ. ಅಲ್ಲಿಂದ ಇಲ್ಲಿವರೆಗೂ ೧೩ ವರ್ಷಗಳಾಗಿವೆ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಅವಶ್ಯಕತೆಯೇ ಬಿದ್ದಿಲ್ಲ. ಹಾಗಾಗಿ ಎಲ್ಲರೂ ಯೋಗವನ್ನು ಅಭ್ಯಾಸವಾಗಿ ರೂಡಿಸಿಕೊಳ್ಳಿ ಅದರಿಂದ ಯಾವುದೇ ರೋಗಗಳು ಬರುವುದಿಲ್ಲ ಎಂದು ವಿವರಿಸಿದರು.ಗದಗನ ಅಭಿನವ ಶಿವಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಭಗವಂತನ ಸ್ವರೂಪಿಯಾಗಿ ಮನುಕುಲದ ಉದ್ಧಾರಕ್ಕಾಗಿ ಮನುಷ್ಯ ಜನ್ಮ ತಾಳಿ ಬಂದಿದ್ದರು. ಅವರ ಶಕ್ತಿ ದೈವದತ್ತವಾಗಿ ಬಂದಿರುವಂತಹದ್ದು, ಅದು ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಸಿದ್ದೇಶ್ವರ ಶ್ರೀಗಳು ವೈರಾಗ್ಯದ ಪ್ರತಿನಿಧಿ, ಅವರಲ್ಲಿ ವೈರಾಗ್ಯ ಬರಲು ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳು ಕಾರಣರು. ಸಂಪತ್ತು ಸಿಗುತ್ತದೆ ಆದರೆ ಗುರು ಸಿಗುವುದಿಲ್ಲ ಗುರು ಸಿಕ್ಕಾಗ ನಾವು ಎಲ್ಲವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಮಾತನಾಡಿ, ಅಷ್ಟಾಂಗ ಯೋಗ ಜೀವನದ ಕುರಿತಾಗಿ ವಿವರಿಸಿದರು. ಈ ವೇಳೆ ಭಕ್ತರಿಗೆ ಪ್ರಾಯೋಗಿಕವಾಗಿ ಯೋಗ ಹಾಗೂ ಧ್ಯಾನ ಮಾಡಿಸಿದರು.ಜ್ಞಾನೋಗಾಶ್ರಮದ ಶ್ರದ್ಧಾನಂದ ಸ್ವಾಮೀಜಿಗಳು ಯೋಗ ಜೀವನದ ಕುರಿತು ಕವನ ವಾಚನ ಮಾಡಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ ಸೇರಿದಂತೆ ಆಶ್ರಮದ ಭಕ್ತರು, ಸ್ವಾಮೀಜಿಗಳು ಉಪಸ್ಥಿತರಿದ್ದರು.ಕೋಟ್‌ಮನುಷ್ಯ ಇತರರಿಗೆ ಎಷ್ಟು ಉಪಯುಕ್ತವಾಗಿದ್ದಾನೆ ಎನ್ನುವುದರ ಮೇಲೆ ಆತನ ಜೀವನದ ಮೌಲ್ಯ ತಿಳಿಯುತ್ತದೆ. ಹೊರತು ಆತ ಎಷ್ಟು ಹಣ ಮಾಡಿದ್ದಾನೆ, ಎಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎನ್ನುವುದರ ಮೇಲೆ ಅಲ್ಲ. ಮನುಷ್ಯ ತನ್ನ ಸ್ವಹಿತಕ್ಕಾಗಿ ಬಳಸುವುದನ್ನು ಕಾಮ ಎಂದು ಕರೆಯಲಾಗಿದೆ. ಪರರ ಉಪಯೋಗಕ್ಕಾಗಿ ಬಳಸುವುದನ್ನು ಮೋಕ್ಷ ಎನ್ನಲಾಗಿದೆ.ಡಾ.ಪ್ರಶಾಂತ ಕಟಕೋಳ, ವೈದ್ಯ