ದೇಶದ ಗಡಿಗಳಲ್ಲಿ ಹಗಲು- ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುವ ಸೈನಿಕರು ತಮ್ಮ ಕುಟುಂಬಗಳಿಂದ ದೂರವಿದ್ದು ರಾಷ್ಟ್ರದ ಸುರಕ್ಷತೆ ಕಾಪಾಡುತ್ತಿದ್ದಾರೆ. ಪ್ರತಿಕೂಲ ಹವಾಮಾನ, ಕಠಿಣ ಭೌಗೋಳಿಕ ಪರಿಸ್ಥಿತಿ ಹಾಗೂ ನಿರಂತರ ಭದ್ರತಾ ಸವಾಲುಗಳ ನಡುವೆಯೂ ಯೋಧರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾರೆ. ಇಂತಹ ಸೈನಿಕರ ತ್ಯಾಗ ಮತ್ತು ಸೇವೆಯನ್ನು ಪ್ರತಿಯೊಬ್ಬ ನಾಗರಿಕನೂ ಗೌರವಿಸಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಕೆಜಿಎಫ್
ದೇಶದ ಪ್ರತಿಯೊಬ್ಬ ಭಾರತೀಯನ ಮನದಲ್ಲೂ ನೋವು ಮತ್ತು ಆಕ್ರೋಶ ಮೂಡಿಸಿದ ಪಹಲ್ಗಾಂ ಭಯೋತ್ಪಾದಕ ದಾಳಿ ಎಂದಿಗೂ ಮರೆಯಲಾಗದ ಕಹಿ ಘಟನೆಯಾಗಿದೆ ಎಂದು ಮೇಜರ್ ಮದನ್ ಕುಮಾರ್ ತಿಳಿಸಿದರು.ನಗರದ ಕಿಂಗ್ ಜಾರ್ಜ್ ಹಾಲ್ ಸಭಾಂಗಣದಲ್ಲಿ ರೋಟ್ ಟ್ರ್ಯಾಕ್ ವತಿಯಿಂದ ಆಯೋಜಿಸಲಾಗಿದ್ದ ಆಪರೇಷನ್ ಸಿಂದೂರ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ದುರ್ಘಟನೆಗೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂದೂರ ದೇಶದ ಭದ್ರತೆ, ಸೈನಿಕರ ಧೈರ್ಯ, ಸೇನಾ ಸಾಮರ್ಥ್ಯ ಹಾಗೂ ರಾಷ್ಟ್ರದ ಸಂಕಲ್ಪವನ್ನು ಜಗತ್ತಿಗೆ ಪರಿಚಯಿಸಿದ ಮಹತ್ವದ ಕಾರ್ಯಾಚರಣೆಯಾಗಿದೆ ಎಂದು ಮೇಜರ್ ಮದನ್ ಕುಮಾರ್ ಹೇಳಿದರು.ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿ ದೇಶದ ಜನರ ಮನಸ್ಸಿಗೆ ಆಳವಾದ ನೋವನ್ನುಂಟುಮಾಡಿತು. ಪ್ರವಾಸಕ್ಕೆ ತೆರಳಿದ್ದ ಅಮಾಯಕ ಜನರ ಮೇಲೆ ನಡೆದ ದಾಳಿ ಮಾನವೀಯತೆಯನ್ನೇ ಪ್ರಶ್ನಿಸುವಂತಿತ್ತು. ಈ ಘಟನೆಯು ದೇಶದ ಭದ್ರತೆ ಹಾಗೂ ಗಡಿಗಳ ರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು.
ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಕೈಗೊಂಡ ನಿರ್ಧಾರಗಳು, ಕಾರ್ಯಾಚರಣೆಯ ಉದ್ದೇಶ ಮತ್ತು ಸೇನೆಯ ಕಾರ್ಯವೈಖರಿಯ ಕುರಿತು ಯುವಕರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.೨೦೨೫ರ ಏಪ್ರಿಲ್ ೨೨ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂ ಸಮೀಪದ ಬೈಸರನ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೬ ಮಂದಿ ಮೃತಪಟ್ಟಿದ್ದರು. ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ದಾಳಿಯ ನಂತರ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ದೇಶದಾದ್ಯಂತ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ೨೦೨೫ರ ಮೇ ೭ರಂದು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಆರಂಭಿಸಿದವು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಿದರು. ದೇಶಸೇವೆಗೆ ಯುವಕರು ಸಿದ್ಧರಾಗಲಿ:
ಇಂದಿನ ಯುವಕರು ದೇಶದ ಭವಿಷ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಶಸೇವೆಗೆ ಸಿದ್ಧರಾಗಬೇಕು ಎಂದು ಮೇಜರ್ ಮದನ್ ಕುಮಾರ್ ಕರೆ ನೀಡಿದರು.ದೇಶಸೇವೆ ಎಂದರೆ ಕೇವಲ ಸೇನೆಗೆ ಸೇರುವುದಷ್ಟೇ ಅಲ್ಲ, ಸಮಾಜದ ಹಿತಕ್ಕಾಗಿ ದುಡಿಯುವುದು, ಕಾನೂನನ್ನು ಗೌರವಿಸುವುದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಪ್ರಮುಖ ಅಂಶಗಳಾಗಿವೆ ಎಂದರು.
ಗಡಿಯಲ್ಲಿ ಕಾಯುವ ಯೋಧರನ್ನು ಗೌರವಿಸಿ:ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಭಾರತೀಯ ಯೋಧರು ನಡೆಸಿದ ಆಪರೇಷನ್ ಸಿಂದೂರ ದೇಶದ ಇತಿಹಾಸದಲ್ಲಿ ಮರೆಯಲಾಗದ ಘಟನೆಯಾಗಿದೆ ಎಂದು ಹೇಳಿದರು.
ದೇಶದ ಗಡಿಗಳಲ್ಲಿ ಹಗಲು- ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುವ ಸೈನಿಕರು ತಮ್ಮ ಕುಟುಂಬಗಳಿಂದ ದೂರವಿದ್ದು ರಾಷ್ಟ್ರದ ಸುರಕ್ಷತೆ ಕಾಪಾಡುತ್ತಿದ್ದಾರೆ. ಪ್ರತಿಕೂಲ ಹವಾಮಾನ, ಕಠಿಣ ಭೌಗೋಳಿಕ ಪರಿಸ್ಥಿತಿ ಹಾಗೂ ನಿರಂತರ ಭದ್ರತಾ ಸವಾಲುಗಳ ನಡುವೆಯೂ ಯೋಧರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾರೆ. ಇಂತಹ ಸೈನಿಕರ ತ್ಯಾಗ ಮತ್ತು ಸೇವೆಯನ್ನು ಪ್ರತಿಯೊಬ್ಬ ನಾಗರಿಕನೂ ಗೌರವಿಸಬೇಕು ಎಂದು ಹೇಳಿದರು.ಮಾಜಿ ಶಾಸಕ ಸಂಪಂಗಿ ಮಾತನಾಡಿ, ಪಹಲ್ಗಾಂ ಭಯೋತ್ಪಾದಕ ದಾಳಿ ಇಂದಿಗೂ ಮರೆಯಲಾಗದ ನೋವಿನ ಘಟನೆಯಾಗಿದೆ. ಅಮಾಯಕ ಜನರ ಜೀವಗಳನ್ನು ಬಲಿಪಡೆದ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕೆಂಬ ದೃಢ ನಿಲುವನ್ನು ದೇಶ ಹೊಂದಿತ್ತು ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಕಾರ್ಯಾಚರಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯ ಸ್ವಾತಂತ್ರ್ಯ ಮತ್ತು ಅಧಿಕಾರ ನೀಡಿದ್ದರಿಂದ ಆಪರೇಷನ್ ಸಿಂದೂರ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು ಎಂದು ಸಂಪಂಗಿ ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಯೋಧ ಕಾರ್ತಿಕೇಯನ್, ಬಾಬಿ ಸುರೇಶ್, ಹೇಮಂತ್, ಅಜಯ್, ಹರ್ಷ ,ಬದರಿ ಶಿವ ಸೇರಿ ಇತರರು ಉಪಸ್ಥಿತರಿದ್ದರು.