ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬುಧವಾರ ಬೈಕ್ ರ್‍ಯಾಲಿಗೆ ಅತಿಕ್ ಮಹೇಬೂಬ್ ಸಾಬ್ ಶೇಕ್ ಅವರಿಂದ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕಮಲನಗರ
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬುಧವಾರ ಬೈಕ್ ರ್‍ಯಾಲಿಗೆ ಅತಿಕ್ ಮಹೇಬೂಬ್ ಸಾಬ್ ಶೇಕ್ ಅವರಿಂದ ಚಾಲನೆ ನೀಡಲಾಯಿತು.ಕಮಲನಗರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಕ್ ಮಹೇಬೂಬ ಸಾಬ್ ಅವರು ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರು ಮಾನವೀಯತೆ, ಶಾಂತಿ, ಸಹೋದರತ್ವ ಹಾಗೂ ಸೌಹಾರ್ದತೆಯ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.
ಈದ್ ಮಿಲಾದ್ ಅಂಗವಾಗಿ ಪಟ್ಟಣದ ಸೈಯದ್ ಪಾಷಾ ದರ್ಗಾದಿಂದ ಬೈಕ್ ರ್‍ಯಾಲಿ ಆರಂಭಗೊಂಡಿತು. ಬೈಕ್‌ಗಳ ಮೇಲೆ ಧ್ವಜಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಮುಸ್ಲಿಂ ಸಮುದಾಯದವರು ಶಾಂತಿಯುತವಾಗಿ ಪಾಲ್ಗೊಂಡರು. ಕಿರಿಯರಿಂದ ಹಿರಿಯರವರೆಗೆ ವಿವಿಧ ವಯೋಮಾನದವರು ಉತ್ಸಾಹದಿಂದ ಭಾಗವಹಿಸಿದ್ದರು.ರ್‍ಯಾಲಿಯು ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ್ ವೃತ್ತ, ಬೀದರ್ - ನಾಂದೇಡ್ ರಾಷ್ಟ್ರೀಯ ಹೆದ್ದಾರಿ- 50ರ ಮೂಲಕ ಅಲ್ಲಮಪ್ರಭು ವೃತ್ತ, ಸಿಂಧೆ ಪೆಟ್ರೋಲ್ ಪಂಪ್, ಸೋನಾಳ ಮುಖ್ಯರಸ್ತೆ ಹಾಗೂ ಶಿವಾಜಿ ವೃತ್ತದ ಮೂಲಕ ಸಾಗಿ ಸೈಯದ್ ಪಾಷಾ ದರ್ಗಾಕ್ಕೆ ತಲುಪಿತು. ರ್‍ಯಾಲಿಯುದ್ದಕ್ಕೂ ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶಗಳನ್ನು ಸಾರಲಾಯಿತು. ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶದೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಜರ ಬಾಗವಾನ್, ಸೈಯದ್ ಉಸ್ಮಾನ್, ಮತೀನ ಬಾಗಮಾರು, ಜಾವೀದ್ ಪಠಾಣ, ಸೈಯದ್, ಇಲಾಹಿ ಶೇಖ, ಸಮೀರ್ ಖುರೇಶಿ, ಅಕ್ರಂ ಬಾಗವಾನ, ಅವಿನಾಶ ಸಿಂಧೆ, ಸುರೇಶ ಕಾಂಬಳೆ, ಸುನೀಲ ಮೇತ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.