ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಎಲ್ಲಾ ತಂತ್ರಜ್ಞಾನಕ್ಕೂ ಮೀರಿದ ಕರಕುಶಲತೆ ವಿಶ್ವಕರ್ಮ ಜನಾಂಗದವರಲ್ಲಿತ್ತು. ಅವರಲ್ಲಿರುವ ಕರಕುಶಲತೆ ಯಾವ ಎಂಜಿನಿಯರುಗಳಿಗೂ ಕೂಡ ಕಡಿಮೆ ಇಲ್ಲ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಬಿ.ಪಿ ಕೃಷ್ಣೇಗೌಡ ಅವರು ಹೇಳಿದ್ದಾರೆ.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಶ್ವಕರ್ಮ ಶ್ರೀ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಲ್ಪಕಲೆಗೆ ಸಮಾಜದಲ್ಲಿ ಬಹಳ ಗೌರವವಿದೆ, ಇತ್ತೀಚೆಗೆ ಕರಕುಶಲತೆಗಳು, ಶಿಲ್ಪಗಳನ್ನು ಕೆತ್ತುವ ಕಲೆ ಕಡಿಮೆಯಾಗುತ್ತಿದೆ ಎಂದರು.
ನಗರಸಭೆಯ ಅಧ್ಯಕ್ಷ ಚಂದ್ರೇಗೌಡ ಅವರು ಮಾತನಾಡಿ, ಇಂದಿನ ದಿನಮಾನದಲ್ಲಿ ಎಲ್ಲಾ ರೀತಿಯ ಯಂತ್ರಗಳು, ಸಲಕರಣೆಗಳು, ತಂತ್ರಜ್ಞಾನವಿದ್ದರೂ ಶಿಲ್ಪಕಲೆಗಳನ್ನು ಅತ್ಯಂತ ಸುಂದರವಾಗಿ ಕೆತ್ತುವುದು ಕಷ್ಟಸಾಧ್ಯವಾಗಿದೆ. ಆದರೆ ಆ ಕಾಲದಲ್ಲೇ ಅಷ್ಟೊಂದು ಸುಂದರವಾದ ಕೆತ್ತನೆಯ ಮೂಲಕ ದೇವಾಲಯಗಳನ್ನು ನಿರ್ಮಾಣ ಮಾಡಿ ಜಗತ್ತಿನ ಕಣ್ಣು ತೆರೆಸಿದ ಮಹಾನ್ ಅನುಭವಿ ಅಮರಶಿಲ್ಪಿ ಜಕಣಾಚಾರಿ. ಇವರನ್ನು ಕೇವಲ ಒಂದು ಜಾತಿ ಒಂದು ಕುಲಕ್ಕೆ ಸೀಮಿತಮಾಡಬಾರದು ಎಂದರು.ಸರ್ಕಾರಿ ವಿಜ್ಞಾನ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಪ್ರವೀಣ್ ಕುಮಾರ್ ಎನ್ ಅವರು ಮಾತನಾಡಿ, ನಮ್ಮ ಶಿಲ್ಪಕಲೆಗಳು ಕಟುಕರನ್ನು ಕೂಡ ಕವಿಯಾಗಿಸಿದ್ದು, ಭರತ ಭೂಮಿಯ ಆತ್ಮ, ಕಲೆಗಳ ಸೆಲೆ, ವಿಶ್ವಕರ್ಮರ ನರನಾಡಿಯಲ್ಲಿದೆ. ಇದಕ್ಕೆ ಸ್ಫೂರ್ತಿ ಅಮರಶಿಲ್ಪಿ ಜಕಣಾಚಾರಿ ಅವರ ಶಿಲ್ಪಕಲೆ ಎಂದು ಹೇಳಿದರು.
ಜಕಣಾಚಾರಿ ಅವರು ಅನೇಕ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ, ತಮ್ಮ ತಂದೆಯಿಂದಲೇ ಶಿಲ್ಪಕಲೆ ಜ್ಞಾನ ಪಡೆದಿದ್ದ ಅವರು ಕಾಯಕ ಜೀವಿಯೂ ಆಗಿದ್ದರು. ಭಾರತವನ್ನು ಸಾಂಸ್ಕೃತಿಕ ಪರಂಪರೆಯ ತೊಟ್ಟಿಲು ಎಂದು ಕರೆಯುತ್ತಾರೆ, ಜಗತ್ತಿಗೆ ಲಿಪಿಗಳ ಮೂಲಕ ಅಕ್ಷರ ಜ್ಞಾನ ಕೊಟ್ಟವರೇ ಈ ಶಿಲ್ಪಿಗಳು, ಬರಿ ಕಲ್ಲನ್ನು ಕೆತ್ತುವುದು ಅಷ್ಟೇ ಅಲ್ಲದೆ ಅದರ ಜೊತೆಗೆ ಶಾಸ್ತ್ರಗಳನ್ನು ಕೂಡಾ ಬಲ್ಲವರಾಗಿದ್ದರು, ಈ ಸಂಪ್ರದಾಯ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಜನವರಿ ೨೫ರಂದು ಆಚರಿಸಲಿರುವ ಮತದಾರರ ದಿನಾಚರಣೆಯ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರರಾದ ಯಶೋಧರ ಅವರು ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾದ್ಯಂತ ಬಹಳ ವರ್ಷಗಳಿಂದ ಮರಕೆಲಸ, ಚಿನ್ನ ಬೆಳ್ಳಿ ಕೆಲಸ, ಶಿಲ್ಪ ಕಲೆ ಕೆತ್ತನೆಯ ಕೆಲಸ, ಕಬ್ಬಿಣದ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಚ್.ಪಿ ತಾರಾನಾಥ್, ಜಿಲ್ಲಾ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷರಾದ ನಾರಾಯಣ್ ಎ.ಸಿ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಬಿ ಕುಮಾರಚಾರ್ ಹಾಗೂ ಸಮುದಾಯದ ಇತರ ಮುಖಂಡರು ಉಪಸ್ಥಿತರಿದ್ದರು.