ಕನ್ನಡಪ್ರಭ ವಾರ್ತೆ ಗದಗ

ವಿದ್ಯಾರ್ಥಿಗಳು ಸಂಖ್ಯೆಗಳಿಗಿಂತ ತಮ್ಮ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸದಾ ಭಿನ್ನವಾಗಿ ಚಿಂತಿಸುವ, ಪ್ರಶ್ನಿಸುವ ಹಾಗೂ ವೈಜ್ಞಾನಿಕ ದೃಷ್ಟಿಕೋನದಿಂದ ವಿಷಯಗಳನ್ನು ವಿಶ್ಲೇಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಆರ್.ಎಸ್. ಬುರಡಿ ಹೇಳಿದರು.

ನಗರದಲ್ಲಿ ಉರ್ದು ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಗದಗ ಆಶ್ರಯದಲ್ಲಿ 2026–27ನೇ ಸಾಲಿನ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯ ಸಾಧ್ಯತೆಗಳು ಅಪಾರವಾಗಿವೆ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದರು.

ಡಯಟ್ ಉಪನ್ಯಾಸಕ ಜಿ.ಡಿ. ದಾಸರ ಮಾತನಾಡಿ, ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಾಳ್ಮೆ ಕಳೆದುಕೊಳ್ಳದೆ, ಯಾವುದೇ ಸಂದರ್ಭದಲ್ಲಿ ನಿರಾಶೆಗೆ ಒಳಗಾಗದೆ ನಿರಂತರ ಪ್ರಯತ್ನದ ಮೂಲಕ ಗುರಿ ಸಾಧಿಸಬೇಕು ಎಂದು ತಿಳಿಸಿದರು.


ವಿಜ್ಞಾನ ಶಿಕ್ಷಕ ಎಂ.ಎಚ್. ಸವದತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜೇತ ವಿದ್ಯಾರ್ಥಿಗಳು:ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಗದಗ ಗ್ರಾಮೀಣ ವ್ಯಾಪ್ತಿಯ ಶಿರುಂಜ ಸರ್ಕಾರಿ ಪ್ರೌಢಶಾಲೆಯ ಭೀಮಾಂಬಿಕ ಮೂಲಿಮನಿ ಪ್ರಥಮ ಸ್ಥಾನ ಪಡೆದರು. ಮುಂಡರಗಿ ತಾಲೂಕಿನ ಕದಾಂಪುರ ಸರ್ಕಾರಿ ಪ್ರೌಢಶಾಲೆಯ ಅಶ್ವಿನಿ ಶಾಲಿ ದ್ವಿತೀಯ ಸ್ಥಾನ ಗಳಿಸಿದರೆ, ರೋಣ ತಾಲೂಕಿನ ಇಟಗಿ ಪಿಎಂಶ್ರೀ ಆದರ್ಶ ವಿದ್ಯಾಲಯದ ಸಂಜನಾ ಹುಲ್ಲೂರು ತೃತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿಯರಾದ ತನುಶ್ರೀ ಬದಿ ಹಾಗೂ ಶಾಯ್ಲಿ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಕೋರಡ್ಡಿ ಸ್ವಾಗತಿಸಿದರು. ಸಂಗಮೇಶ ಪವಾಡಶೆಟ್ಟರ ವಂದಿಸಿದರು.