ಸಾರಾಂಶ
ಹುಬ್ಬಳ್ಳಿ: ಜೀವನದಲ್ಲಿ ಸಣ್ಣ ಸಣ್ಣ ಗುರಿಗಳನ್ನು ಹೊಂದದೆ ದೊಡ್ಡ ಗುರಿ ಹೊಂದಿ ಸಫಲರಾಗಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ವಿದ್ಯಾರ್ಥಿಗಳು ಮಾದರಿಯಾಗಬೇಕು ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಇಲ್ಲಿಯ ಲಿಂಗರಾಜ ನಗರದ ಲಿಂಗರಾಜ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಬಡ ಕುಟುಂಬಳಿಂದ ಬಂದ ಅನೇಕ ಜನ ಸಾಧನೆ ಮಾಡಿ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ಪೋಸಿಸ್‌ನ ಸುಧಾ ಮೂರ್ತಿ, ವಿಜಯಾನಂದ ಸಂಕೇಶ್ವರ, ಕಿರಣ ಮಜುಂದಾರ ಅವರು ಸಾಮಾನ್ಯ ಬಡಕುಟುಂಬಗಳಿಂದ ಬಂದವರೇ. ಅವರು ಶ್ರಮಪಟ್ಟು, ಹಗಲಿರುಳು ದುಡಿದು ಸಮಾಜದಲ್ಲಿ ಹೆಸರು ಗಳಿಸಿದ್ದಾರೆ ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದ ಸಮುದಾಯದ ಜನ ಯಾವುದೇ ಕಾರಣಕ್ಕೂ ಹೆದರಬಾರದು. ನಿರಾಣಿ ಗ್ರುಪ್‌ನಿಂದ ಬಡ ಪ್ರತಿಭಾವಂತ 100 ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣದ ಖರ್ಚುವೆಚ್ಚ ಭರಿಸಲಾಗುವುದು. ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಬೆಂಬಲಕ್ಕೆ ನಿರಾಣಿ ಗ್ರುಪ್ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದೂ ಅವರು ಭರವಸೆ ನೀಡಿದರು.ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ದುಂಬಿ ಹೇಗೆ ವಿವಿಧ ಹೂವುಗಳಿಂದ ಮಕರಂದ ಹೀರಿ ಶುದ್ಧವಾದ ತುಪ್ಪ ನೀಡುತ್ತದೆಯೋ ಹಾಗೇ ನಾವೂ ಇತರ ಸಮಾಜದಲ್ಲಿನ ಉತ್ತಮ ಸಂಗತಿ ಅಳವಡಿಸಿಕೊಂಡು ಸಮಾಜವನ್ನು ಮುನ್ನೆಲೆಗೆ ತರಬೇಕು. ಸಮಾಜದ ಸಂಘಟನೆಗೆ ಪದಾಧಿಕಾರಿಗಳು ಹಗಲಿರುಳು ಶ್ರಮಿಸಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಮುರಗೇಶ ನಿರಾಣಿ ಸಮಾಜದ ಕಾರ್ಯಗಳಿಗೆ ಸದಾ ಆರ್ಥಿಕ ಸಹಕಾರ ನೀಡುತ್ತಲೇ ಬಂದಿದ್ದಾರೆ. ಸಮಾಜದ ಉದ್ಯಮಿಗಳು ಅವರಂತೆ ಸಮಾಜ ಸಂಘಟನೆಗೆ ಸಹಾಯ-ಸಹಕಾರ ನೀಡುವಂತೆ ಹೇಳಿದರು.ಜಾತಿ ಗಣತಿ ಕುರಿತಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಸಂಘದ ಆದ್ಯತೆ ಆಗಬೇಕು. ಸ್ಟಿಕರ್‌ಗಳು ಎಲ್ಲೆಡೆ ತಲುಪುವಂತೆ ನೋಡಿಕೊಳ್ಳಬೇಕು. ಮಹಿಳಾ ಸಂಘಟಕರೂ ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು. ಈ ಕಾರ್ಯದಲ್ಲಿ ಅಲಕ್ಷ್ಯ ಸಲ್ಲದು ಎಂದರು
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಸಂಘದ ಸಹಕಾರ ಪಡೆದು ಸಾಧನೆ ಮಾಡಬೇಕು. ಮುಂದೆ ತಾವು ಉನ್ನತ ಹುದ್ದೆಗೆ ಏರಿದ ನಂತರ ಸಮಾಜದ ಇತರರಿಗೆ ಸಹಾಯ ಮಾಡುವ ಪರಿಪಾಟ ಬೆಳೆಸಬೇಕು. ತಾವು ಬೆಳೆಯುವ ಜೊತೆಗೆ ಸಮಾಜದ ಬೆಳವಣಿಗೆಗೂ ಕೊಡುಗೆ ನೀಡಬೇಕು ಎಂದು ಹೇಳಿದರು.ಆಲಗೂರು-ಜಮಖಂಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಮೋಹನ ಎಂ. ನುಚ್ಚಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘಧ ಪ್ರಧಾನ ಕಾರ್ಯದರ್ಶಿ ಜಿ.ಜಿ. ದ್ಯಾವನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ಸಾಧಕರನ್ನೂ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಲಲಿತಾ ಎಂ. ಪಾಟೀಲ, ಎಚ್.ವಿ. ಬೆಳಗಲಿ, ಎಂ.ಆರ್. ಪಾಟೀಲ, ವಸಂತಾ ಹುಲ್ಲತ್ತಿ, ಉಮಾ ಸುತಗಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.