ವಿಧಾನಪರಿಷತ್‌ ಚುನಾವಣೆಯಂತೆ ಇಲ್ಲೂ ಬಿಜೆಪಿ-ಜೆಡಿಎಸ್‌ ದೋಸ್ತಿ ಮುಂದುವರಿಯಲಿ. ನಮಗೂ ಕೆಲವೊಂದಿಷ್ಟು ಸ್ಥಾನಗಳನ್ನು ಮೀಸಲಿಡಲಿ ಎಂಬ ಒಕ್ಕೊರಲಿನ ಬೇಡಿಕೆ ಜೆಡಿಎಸ್‌ ಕಾರ್ಯಕರ್ತರು, ಮುಖಂಡರದ್ದು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಜಿಪಂ, ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಿ ಅಧಿಸೂಚನೆ ಹೊರಡಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಪರಿಷತ್‌ ಚುನಾವಣೆಯಂತೆ ಇಲ್ಲೂ ಬಿಜೆಪಿ-ಜೆಡಿಎಸ್‌ ದೋಸ್ತಿ ಮುಂದುವರಿಯಲಿ. ನಮಗೂ ಕೆಲವೊಂದಿಷ್ಟು ಸ್ಥಾನಗಳನ್ನು ಮೀಸಲಿಡಲಿ ಎಂಬ ಒಕ್ಕೊರಲಿನ ಬೇಡಿಕೆ ಜೆಡಿಎಸ್‌ ಕಾರ್ಯಕರ್ತರು, ಮುಖಂಡರದ್ದು.

ಲೋಕಸಭೆ ಚುನಾವಣೆಯಲ್ಲಿ ಆಗಿದ್ದ ದೋಸ್ತಿ ಈಗ ನಡೆಯುತ್ತಿರುವ ಪಶ್ಚಿಮ ಪದವೀಧರ ಕ್ಷೇತ್ರ ಸೇರಿದಂತೆ ಪರಿಷತ್‌ಗೆ ನಡೆಯುತ್ತಿರುವ ನಾಲ್ಕು ಕ್ಷೇತ್ರಗಳಲ್ಲೂ ಮುಂದುವರಿದಿದೆ. ಎಲ್ಲೆಡೆ ಎನ್‌ಡಿಎ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದಾರೆ. ಹಾಗಂತ ಜೆಡಿಎಸ್‌ ಪಕ್ಷದಿಂದ ಯಾರೂ ಸ್ಪರ್ಧಿಸುತ್ತಿಲ್ಲವಾದರೂ ಬಿಜೆಪಿ ಅಭ್ಯರ್ಥಿಗಳನ್ನೇ ಜೆಡಿಎಸ್‌ ಬೆಂಬಲಿಸಿದೆ.

ಜಿಪಂ-ತಾಪಂ:

2021ರಲ್ಲೇ ನಡೆಯಬೇಕಿದ್ದ ಜಿಪಂ-ತಾಪಂ ಚುನಾವಣೆಯ ಮೀಸಲಾತಿಯನ್ನು ಇದೀಗ ಸರ್ಕಾರ ಪ್ರಕಟಿಸಿದೆ. ಪದವೀಧರ ಕ್ಷೇತ್ರಗಳ ಚುನಾವಣೆ ಮುಗಿಯುತ್ತಿದ್ದಂತೆ ಈ ಚುನಾವಣೆ ದಿನಾಂಕ ಸಹ ಘೋಷಣೆಯಾಗುವ ಸಾಧ್ಯತೆ ಇದ್ದು ಇಲ್ಲಿ ಮೈತ್ರಿ ಧರ್ಮ ಮುಂದುವರಿಸಬೇಕು. ಜತೆಗೆ ನಮಗೂ ಕೆಲವು ಸ್ಥಾನಗಳನ್ನು ನೀಡಬೇಕೆಂಬ ಬಯಕೆ ಉತ್ತರ ಕರ್ನಾಟಕ ಭಾಗದ ಜೆಡಿಎಸ್‌ ಕಾರ್ಯಕರ್ತರು, ಮುಖಂಡರದ್ದು.

ಕಾರಣವೇನು?

ಜೆಡಿಎಸ್‌ಗೆ ಉತ್ತರ ಕರ್ನಾಟಕದಲ್ಲಿ ಅಷ್ಟೊಂದು ಗಟ್ಟಿ ನೆಲೆ ಇಲ್ಲ. ಸಂಘಟನೆಯಿದ್ದರೂ ಗೆಲ್ಲುವ ಪರಿಸ್ಥಿತಿ ಇಲ್ಲ. ಇಲ್ಲಿ ಕಾರ್ಯಕರ್ತರು, ಪಕ್ಷಕ್ಕೆ ಉತ್ತಮ ಹೆಸರಿದ್ದರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಆಗುತ್ತಿಲ್ಲ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ ಹೆಚ್ಚು ಪ್ರಾಬಲ್ಯ ಹೊಂದಿದ್ದು ಇವುಗಳ ನಡುವೆ ಪ್ರತಿ ಚುನಾವಣೆಯಲ್ಲಿ ಪೈಪೋಟಿ ನಡೆಯುತ್ತದೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಯಿಂದ ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲಿಸಿಕೊಂಡು ಬರುತ್ತಿರುವುದರಿಂದ ಜೆಡಿಎಸ್‌ ಅಭ್ಯರ್ಥಿಗಳಿಗೆ ಜಿಪಂ-ತಾಪಂನಲ್ಲಿ ಟಿಕೆಟ್‌ ನೀಡಿದರೆ ಗೆಲುವು ಸಾಧಿಸಲು ನಿಶ್ಚಿತ ಎಂಬುದು ಮುಖಂಡರ ಅಭಿಮತ.

ಗೆದ್ದರೆ ಪಕ್ಷ ಸಂಘಟನೆಗೆ ತಾನಾಗಿಯೇ ಆಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್‌ ಜಿಪಂ, ತಾಪಂ ಚುನಾವಣೆಯಲ್ಲೂ ದೋಸ್ತಿ ಮುಂದುವರಿಯುವಂತೆ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಕನಿಷ್ಠ ಪಕ್ಷ ಶೇ.25ರಷ್ಟು ಸ್ಥಾನಗಳನ್ನಾದರೂ ಜೆಡಿಎಸ್‌ಗೆ ಬಿಟ್ಟುಕೊಡಬೇಕೆಂಬ ಬೇಡಿಕೆಯನ್ನಿಡಬೇಕು ಎಂಬ ಆಗ್ರಹ ಜೆಡಿಎಸ್‌ ಕಾರ್ಯಕರ್ತರದ್ದು.

ಜೆಡಿಎಸ್‌ ಸಂಘಟನೆಗೆ ಒತ್ತು:

ಈ ನಡುವೆ ಜೆಡಿಎಸ್‌ ಯಾವ್ಯಾವ ಜಿಪಂ, ತಾಪಂ ಕ್ಷೇತ್ರಗಳಲ್ಲಿ ತಮ್ಮ ಸಂಘಟನೆಯಿದೆ. ಎಲ್ಲಿ ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳ್ಯಾರು? ಕಳೆದ ಬಾರಿ ಕೆಲವೇ ಮತಗಳ ಅಂತರದಲ್ಲಿ ಸೋತ ಕ್ಷೇತ್ರ ಯಾವುದು? ಯಾವ ಕ್ಷೇತ್ರದ ಟಿಕೆಟ್‌ ಪಡೆದರೆ ಗೆಲ್ಲುವ ಸಾಧ್ಯತೆ ಇದೆ ಎಂಬ ಬಗ್ಗೆ ಅವಲೋಕಿಸುತ್ತಿದೆ. ಇದಾದ ಬಳಿಕ ಹೈಕಮಾಂಡ್‌ಗೆ ವರದಿ ಕೊಡಲಿದೆ. ಆದಾದ ಬಳಿಕ ಟಿಕೆಟ್‌ ಹಂಚಿಕೆ ಬಗ್ಗೆ ಬೇಡಿಕೆ ಮುಂದಿಡಲು ಜೆಡಿಎಸ್‌ ಜಿಲ್ಲಾ ಮುಖಂಡರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಇದೀಗ ಶುರುವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆಯಾದರೂ ಟಿಕೆಟ್‌ ಹಂಚಿಕೆ ವಿಷಯವಾಗಿ ಪಕ್ಷದ ಹೈಕಮಾಂಡ್‌ ಎನಿಸಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ತೀರ್ಮಾನವೇ ಅಂತಿಮ ಎಂದು ತಿಳಿಸಿದ್ದಾರೆ.ಜಿಪಂ ತಾಪಂ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕುರಿತಂತೆ ಆಗ ಪಕ್ಷದ ಹಿರಿಯರು ನಿರ್ಧಾರ ಕೈಗೊಳ್ಳುತ್ತಾರೆ. ಆ ಪಕ್ಷ ಏನು ನಿರ್ಣಯ ಕೈಗೊಳ್ಳುತ್ತದೆಯೋ ಅದರಂತೆ ನಡೆದುಕೊಳ್ಳಲಾಗುವುದು

ಮಹೇಶ ಟೆಂಗಿನಕಾಯಿ, ಬಿಜೆಪಿ ಶಾಸಕರುಪದವೀಧರ ಕ್ಷೇತ್ರ ಚುನಾವಣೆಯಂತೆ ಜಿಪಂ, ತಾಪಂ ಚುನಾವಣೆಯಲ್ಲೂ ಬಿಜೆಪಿ- ಜೆಡಿಎಸ್‌ ಮೈತ್ರಿ ಮುಂದುವರಿಯಲಿ ಎಂಬ ಬೇಡಿಕೆ ಕಾರ್ಯಕರ್ತರದ್ದು. ಕಾರ್ಯಕರ್ತರ ಅಭಿಲಾಷೆ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು. ಅವರೇ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ.

ಗುರುರಾಜ ಹುಣಸಿಮರದ, ಜೆಡಿಎಸ್‌ ಮುಖಂಡರು