ಸಾರಾಂಶ
ಇಳಕಲ್ಲ: ದೇವರು ಕೊಟ್ಟ ಈ ದೇಹವನ್ನು ದೇವರ ಸೇವೆ ಮತ್ತು ಸಮಾಜ ಸೇವೆಗೆ ಗೆ ಮುಡಿಪಾಗಿಡಬೇಕು ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ದೇವರು ಕೊಟ್ಟ ಈ ದೇಹವನ್ನು ದೇವರ ಸೇವೆ ಮತ್ತು ಸಮಾಜ ಸೇವೆಗೆ ಗೆ ಮುಡಿಪಾಗಿಡಬೇಕು ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಚಿಕ್ಕೊತಗೇರಿ ಗ್ರಾಮದ ನಿಶಾನೇಶ್ವರ ದೇವರ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನ ದೇಹ ದೇವರು ಕೊಟ್ಟ ಕಾಣಿಕೆ. ಇದನ್ನು ನಾವು ಹೆಂಗ್ ಎಂದರಂಗ ಉಪಯೋಗಿಸಿದರೆ ಅದು ನಮಗೆ ಆಘಾತ ಕೊಡುವುದು. ದೇವನು ಕೊಟ್ಟ ದೇಹವನ್ನು ಚೆನ್ನಾಗಿ ನೋಡಿಕೊಂಡಾಗ ಮಾತ್ರ ಚಂದದ ಬದುಕು ಸಾಗಿಸಲು ಸಾಧ್ಯ. ಇಲ್ಲದಿದ್ದರೆ ಮನುಷ್ಯನ ದೇಹ ಎಂಬುದು ಟ್ರೇಜರಿಯಲ್ಲಿ ಕಸ ತುಂಬಿದಂತೆ. ನಾವು ಯಾವತ್ತೂ ಟ್ರೇಜರಿಯಲ್ಲಿ ಹೇಗೆ ಕಸ ಇಡುವುದಿಲ್ಲವೋ ಹಾಗೆ ಮನುಷ್ಯನ ದೇಹದಲ್ಲಿ ಹೊಲಸನ್ನು ಇಟ್ಟುಕೊಳ್ಳದೆ ನಿಷ್ಕಲ್ಮಶ ಮನಸ್ಸನ್ನು ಹೊಂದಿದರೆ ಮಾತ್ರ ದೇವರು ಕೊಟ್ಟ ಈ ದೇಹ ಭೂಮಿಮೇಲೆ ಬಂದಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗ್ರಾಮದ ಭಕ್ತರು ಮಿರ್ಚಿಭಜಿ ಮಾಡುವ ಸೇವೆ ಕೊಂಡಾಡಿದ ಶ್ರೀಗಳು ಗವಿಮಠದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಗ್ರಾಮದ ನಿಶಾನೇಶ್ವರ ದೇವರ ಜಾತ್ರೆ ಅಂದರೆ ಕರಿಗಡಬಿನ ಜಾತ್ರೆ. ಗ್ರಾಮದ ಭಕ್ತರ ಸೇವೆ ನಾಡಿನಲ್ಲಿಯೆ ಪ್ರಸಿದ್ಧಿಯಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಕಂಬಳಿಹಾಳದ ದೊಡ್ಡಬಸವಾರ್ಯ ತಾತನವರು ಸಮಾರಂಭ ಉದ್ದೇಶಿಸಿ ಮಾತನಾಡಿದರು.