ರಾಣಿ ಚೆನ್ನಮ್ಮ ಧೈರ್ಯ ಯುವಪೀಳಿಗೆಗೆ ಪ್ರೇರಣೆಯಾಗಲಿ

| Published : Oct 25 2025, 01:00 AM IST

ರಾಣಿ ಚೆನ್ನಮ್ಮ ಧೈರ್ಯ ಯುವಪೀಳಿಗೆಗೆ ಪ್ರೇರಣೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರಕ್ಕಾಗಿ ಹೋರಾಡಿದ ಕಿತ್ತೂರ ರಾಣಿ ಚೆನ್ನಮ್ಮರವರ ಅಪ್ರತಿಮ ಧೈರ್ಯ, ಶೌರ್ಯ, ಸಾಹಸ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಪ್ರೊಬೇಷನರಿ ಐಎಎಸ್ ಅಧಿಕಾರಿ ನಾಗೇಂದ್ರ ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸ್ವಾತಂತ್ರಕ್ಕಾಗಿ ಹೋರಾಡಿದ ಕಿತ್ತೂರ ರಾಣಿ ಚೆನ್ನಮ್ಮರವರ ಅಪ್ರತಿಮ ಧೈರ್ಯ, ಶೌರ್ಯ, ಸಾಹಸ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಪ್ರೊಬೇಷನರಿ ಐಎಎಸ್ ಅಧಿಕಾರಿ ನಾಗೇಂದ್ರ ಬಾಬು ತಿಳಿಸಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪುರಸಭೆ, ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಹಯೋಗದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ ಸಂಗ್ರಾಮದ ಇತಿಹಾಸದ ಪುಟದಲ್ಲಿ ಕಿತ್ತೂರು ರಾಣಿ ಚನ್ನಮ್ಮರವರ ಹೋರಾಟ ಶಾಶ್ವತವಾಗಿ ದಾಖಲಾಗಿದ್ದು, ಅವರು ನಡೆಸಿದ ಬ್ರಿಟೀಷರ ವಿರುದ್ಧದ ಹೋರಾಟ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು. ಮಹಿಳೆಯಾಗಿ ಕಿತ್ತೂರು ರಾಣಿ ಚನ್ನಮ್ಮ ಬ್ರಿಟೀಷರ ವಿರುದ್ಧ ನಡೆಸಿದ ದಿಟ್ಟತನದ ಹೋರಾಟ ಮಹಿಳಾ ಸಬಲೀಕರಣಕ್ಕೆ ಪ್ರೇರಕವಾಗಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಕಿತ್ತೂರು ರಾಣಿ ಚನ್ನಮ್ಮರ ಕೊಡುಗೆ ಅಪಾರ. ದೇಶದ ಸ್ವಾತಂತ್ರ್ಯ ಹೋರಾಟವನ್ನು ಜ್ಞಾಪಿಸಿಕೊಳ್ಳುವ ಮೂಲಕ ಮುಂದಿನ ಆದರ್ಶಪ್ರಾಯ ಬದುಕು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಯ ಮೇರೆಗೆ ಸರ್ಕಾರ ರಾಣಿ ಚನ್ನಮ್ಮರ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಚನ್ನಮ್ಮರ ಮಾದರಿ ಜೀವನ, ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ತಹಸೀಲ್ದಾರ್ ಮಂಜುಳ ಶಂಕರ ಭಜಂತ್ರಿ ಮಾತನಾಡಿ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಮುನ್ನಾ ಕಿತ್ತೂರು ರಾಣಿ ಚನ್ನಮ್ಮ ಬ್ರಿಟೀಷರ ವಿರುದ್ಧದ ಹೋರಾಟವನ್ನು ಆರಂಭಿಸಿದ್ದು, ಬ್ರಿಟೀಷ್ ಸರ್ಕಾರದ ದತ್ತು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಇಲ್ಲ ಎಂಬ ಹಲವು ಜನವಿರೋಧಿ ಧೋರಣೆಯನ್ನು ವಿರೋಧಿಸಿ ಬ್ರಿಟೀಷರ ವಿರುದ್ಧ ಹೋರಾಟವನ್ನು ಕೈಗೊಂಡು ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದರು ಎಂದ ಅವರು, ರಾಣಿ ಚನ್ನಮ್ಮ ಕರ್ನಾಟಕ ರಾಜ್ಯದ ದಿಟ್ಟ ಮಹಿಳೆ ಎಂಬುದು ನಾಡಿನ ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು. ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಆರ್.ಮಂಜುನಾಥ್ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್, ತಾ.ಪಂ ಇಒ ನಾಗರಾಜ್, ಉಪತಹಸೀಲ್ದಾರ್ ವಿನಯ್ ಆರಾಧ್ಯ, ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ತಾ.ಘಟಕದ ನೂತನ ಅಧ್ಯಕ್ಷ ಎಂ.ಸಿ.ಆನಂದ್, ಮುಖಂಡ ಸಿ.ಬಸವರಾಜ್ (ಹಾಲು), ವಿಜಯಕುಮಾರ್, ಬಸವರಾಜ ಪಾಟೀಲ್ ನಂದಿಹಳ್ಳಿ, ಉಮಾಶಂಕರಪ್ಪ, ರಾಜೇಶ್, ಮಂಜುನಾಥ್, ಶರತ್ ಮತ್ತಿತರರು ಹಾಜರಿದ್ದರು.

ಆರಂಭದಲ್ಲಿ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಿಂದ ತಾಲೂಕು ಕಚೇರಿವರೆಗು ರಾಣಿ ಚನ್ನಮ್ಮ ಭಾವಚಿತ್ರದ ಮೆರವಣಿಗೆ ನಡೆಯಿತು.