ಅಂಧಕಾರ ದೂರವಾಗಿ ಶ್ರದ್ಧೆ,ಏಕಾಗ್ರತೆ ನಿಮ್ಮಲ್ಲಿ ಮೂಡಲಿ: ತಾಹೇರಾ ನುಸ್ರತ್ ಶುಭ ಹಾರೈಕೆ

| Published : Mar 09 2025, 01:47 AM IST

ಅಂಧಕಾರ ದೂರವಾಗಿ ಶ್ರದ್ಧೆ,ಏಕಾಗ್ರತೆ ನಿಮ್ಮಲ್ಲಿ ಮೂಡಲಿ: ತಾಹೇರಾ ನುಸ್ರತ್ ಶುಭ ಹಾರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲಾಖೆ ನೀಡಿರುವ ಪ್ರಶ್ನೆಕೋಠಿಗಳ ಜತೆಗೆ ಶಿಕ್ಷಕರು ಗುಂಪು ಅಧ್ಯಯನ, ವಿಶೇಷ ತರಗತಿಗಳನ್ನು ಮಾಡಿ ನಿಮ್ಮನ್ನು ತೇರ್ಗಡೆಯ ಗಡಿ ದಾಟಿಸಿ, ನಿಮ್ಮ ಬದುಕು ಹಸನಾಗಲು ಶ್ರಮಿಸುತ್ತಿದ್ದಾರೆ, ಅವರ ಆಶಯಗಳಿಗೆ ಗೌರವ ನೀಡಿ .

ಕನ್ನಡಪ್ರಭ ವಾರ್ತೆ ಕೋಲಾರ

ಹೆತ್ತ ತಾಯಿ, ತಂದೆ, ಕಲಿಸಿದ ಗುರುವಿನ ಆಶಯಗಳನ್ನು ಈಡೇರಿಸುವ ಸಂಕಲ್ಪದೊಂದಿಗೆ ನೀವು ಬೆಳಗಿಸಿರುವ ದೀಪಗಳು ನಿಮ್ಮ ಬದುಕಿನ ಅಂಧಕಾರ ಹೋಗಲಾಡಿಸಿ ನಿಮ್ಮಲ್ಲಿ ಶ್ರದ್ಧೆ, ಓದಲು ಏಕಾಗ್ರತೆ ಮೂಡಿಸಲಿ ಎಂದು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ಕರೆ ನೀಡಿದರು.

ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಶಾರದಾಪೂಜೆ ಹಾಗೂ ದೀಪಗಳನ್ನು ಬೆಳಗುವ ಮೂಲಕ ಬದುಕಿನ ಕತ್ತಲು ಕಳೆದು ಬೆಳಕಿನಡೆಗೆ ಸಾಗುವ ದೀಪಗಳ ಬೆಳಗುವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.೨೧ರಿಂದ ಆರಂಭಗೊಳ್ಳುತ್ತಿದೆ, ಹಬ್ಬ, ಹರಿದಿನಗಳ ಆಸೆ ಬಿಡಿ, ಬದ್ಧತೆಯಿಂದ ಓದಿ, ಶಿಕ್ಷಕರು ಹಬ್ಬ ಬಿಟ್ಟು ನಿಮಗಾಗಿ ಪ್ರತಿದಿನ ದೈನಂದಿನ ಶಾಲಾ ಸಮಯದ ಜತೆಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಇಲಾಖೆ ನೀಡಿರುವ ಪ್ರಶ್ನೆಕೋಠಿಗಳ ಜತೆಗೆ ಶಿಕ್ಷಕರು ಗುಂಪು ಅಧ್ಯಯನ, ವಿಶೇಷ ತರಗತಿಗಳನ್ನು ಮಾಡಿ ನಿಮ್ಮನ್ನು ತೇರ್ಗಡೆಯ ಗಡಿ ದಾಟಿಸಿ, ನಿಮ್ಮ ಬದುಕು ಹಸನಾಗಲು ಶ್ರಮಿಸುತ್ತಿದ್ದಾರೆ, ಅವರ ಆಶಯಗಳಿಗೆ ಗೌರವ ನೀಡಿ ಎಂದರು.

ನಿಮ್ಮಲ್ಲಿ ಯಾರೂ ಕಡಿಮೆಯಿಲ್ಲ, ಎಲ್ಲರಲ್ಲೂ ಅಪರಿಮಿತ ಶಕ್ತಿ ಇದೆ. ಆದರೆ ಅದನ್ನು ಬಳಸಿಕೊಳ್ಳುವ ಸಂಕಲ್ಪ, ಶ್ರದ್ಧೆ ರೂಪಿಸಿಕೊಂಡರೆ ಮಾತ್ರ ಅಂಕ ಗಳಿಸುವ ಶಕ್ತಿ ನಿಮ್ಮದಾಗುತ್ತದೆ. ನೀವು ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕಷ್ಟೇ, ಧನಾತ್ಮಕ ಭಾವನೆ ಬೆಳೆಸಿಕೊಂಡು ಕಲಿಕೆ ಮುಂದುವರೆಸಿ ಎಂದರು.

೧೦ನೇ ತರಗತಿ ವಿದ್ಯಾರ್ಥಿಗಳಾದ ಅಮೂಲ್ಯ, ಸಿಂಧೂಶ್ರೀ, ಜಿ.ವಿ.ತೇಜಸ್ ಮತ್ತಿತರರು ಶಾಲೆಯಲ್ಲಿ ಕಳೆದ ತಮ್ಮ ಮೂರು ವರ್ಷದ ಅನುಭವ ಹಂಚಿಕೊಂಡು ಶಿಕ್ಷಕರಿಗೆ ಧನ್ಯವಾದ ಸಲ್ಲಿಸಿದರು.

ಮಕ್ಕಳಿಗೆ ಗ್ರಾಮದ ಮುಖಂಡರಾದ ನಂಜುಂಡಪ್ಪ, ಅನಸೂಯಮ್ಮ, ನಟೇಶ್‌ಕುಮಾರ್ ಕುಟುಂಬದವರು ಹೋಳಿಗೆ ಊಟ ಬಡಿಸಿ ಶಾರದಾಪೂಜೆ ಸಂಭ್ರಮಕ್ಕೆ ಕೈಜೋಡಿಸಿದರು.

ಹಿರಿಯ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಕೆ.ಲೀಲಾ, ವೆಂಕಟರೆಡ್ಡಿ, ಸುಗುಣಾ, ಶ್ವೇತಾ, ಫರೀದಾ, ರಮಾದೇವಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ನೇತ್ರಾವತಿ, ಜಮುನಾ, ಪವಿತ್ರ ಇದ್ದರು. ೯ನೇ ತರಗತಿ ವಿದ್ಯಾರ್ಥಿಗಳಾದ ಸುದರ್ಶನ್ ನಿರೂಪಿಸಿ,ಮಾನ್ಯ ಸ್ವಾಗತಿಸಿ, ಶಾಲಿನಿ ವಂದಿಸಿದರು.