ಸಾರಾಂಶ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಪಿಎಸಿಎಸ್ ಅಮೃತ ಮಹೋತ್ಸವದಲ್ಲಿ ಅಭಿಮತಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ರೈತರು ಬೆಳೆದ ಬೆಳೆ ಮಾರಾಟಕ್ಕೆ ಬೇರೆಯವರು ದರ ನಿಗದಿ ಮಾಡುತ್ತಿದ್ದಾರೆ. ತಾನು ಬೆಳೆದ ಫಸಲಿಗೆ ರೈತರೇ ದರ ನಿಗದಿ ಮಾಡಿ ಮಾರಾಟ ಮಾಡುವ ದಿನ ಬರುವವರೆಗೂ ರೈತ ಆರ್ಥಿಕವಾಗಿ ದುಸ್ಥಿತಿಯಲ್ಲಿ ಇರುತ್ತಾನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭಾನುವಾರ ಆಯೋಜಿಸಿದ್ದ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೈತರು ಸದೃಢರಾದರೆ ದೇಶದ ಆರ್ಥಿಕತೆ ಬೆಳೆಯಲಿದೆ. ಕಾರ್ಪೋರೇಟ್ ವಲಯ ಸದೃಢರಾದರೆ ಕೇವಲ ದೊಡ್ಡ ಉದ್ಯಮಿಗಳು ಬೆಳೆಯುತ್ತಾರೆ. ಇದು ನಮಗೆ ಅವಶ್ಯಕತೆಯಿಲ್ಲ. ಸಹಕಾರ ಸಂಸ್ಥೆಗಳಲ್ಲಿ ಕೃಷಿ ಮಾತ್ರವಲ್ಲದೇ ಕೃಷಿಯೇತರ ಸಾಲಗಳನ್ನು ಹೆಚ್ಚು ನೀಡಲಾಗುತ್ತಿದೆ. ಸಹಕಾರಿ ಸಂಸ್ಥೆಗಳು ಕಾರ್ಯಚಟುವಟಿಕೆ ಹೆಚ್ಚಿಸಿ ಕೊಳ್ಳಬೇಕು. ಲಾಭ, ನಷ್ಟ ಲೆಕ್ಕಹಾಕಿ ಕಾರ್ಯನಿರ್ವಹಿಸಿದರೆ ಸಂಸ್ಥೆಗಳು ಸದೃಢವಾಗಲು ಸಹಕಾರಿ ಎಂದರು.ಸಹಕಾರಿ ಸಂಘಗಳು ದಾಸ್ತಾನು ಸಾಲಕ್ಕೆ ಕಡಿಮೆ ಬಡ್ಡಿದರ ವಿಧಿಸಿ ರೈತರಿಗೆ ನೀಡಬೇಕು. ಶೇ.12ಕ್ಕಿಂತ ಅಧಿಕ ಬಡ್ಡಿ ಯಾವುದೇ ಸಾಲಕ್ಕೂ ವಿಧಿಸಬಾರದು. ಲೇವಾದೇವಿದಾರರು ರೈತರ, ಜನರ ಆರ್ಥಿಕ ಅಸಹಾಯಕತೆ ದುರುಪಯೋಗ ಮಾಡಬಾರದು ಎಂಬ ಉದ್ದೇಶದಿಂದ ಸಹಕಾರ ಸಂಘಗಳು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸಬೇಕು. ರೈತರ ಆರ್ಥಿಕ ಸದೃಢತೆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದರು.
ಭೂ ಬ್ಯಾಂಕ್‌ನಲ್ಲಿ ಮಧ್ಯಮಾವಧಿ ಸಾಲ ತೆಗೆದುಕೊಂಡಲ್ಲಿ ಅದರ ಬಡ್ಡಿ ಸರ್ಕಾರ ಭರಿಸುವ ನಿರ್ಧಾರ ತೆಗೆದುಕೊಳ್ಳ ಲಾಗಿದೆ. ಅಲ್ಪಾವಧಿ ಸಾಲವನ್ನು ₹1 ಲಕ್ಷಕ್ಕೆ ಏರಿಕೆ ಮಾಡಿದ್ದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಕೃಷಿ, ವಾಣಿಜ್ಯ ಬ್ಯಾಂಕುಗಳಲ್ಲಿ ₹72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಪ್ರಸ್ತುತ ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಕೇಂದ್ರ ಸಚಿವರೊಬ್ಬರು ಹೇಳಿಕೆ ನೀಡುತ್ತಾರೆ. ಆದರೆ ಬಂಡವಾಳ ಶಾಹಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡುತ್ತಾರೆ. ಇದರಿಂದ ರೈತರ ಪರ ಯಾರು ಇದ್ದಾರೆ ಎಂದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ರೈತರ ಪರ ಯಾರು ಕಾರ್ಯ ನಿರ್ವಹಿಸು ತ್ತಾರೆ ಎಂಬುದನ್ನು ಗಮನಿಸಿ ರೈತರು ಅವರಿಗೆ ರಾಜಕಾರಣದಲ್ಲಿ ಆಶೀರ್ವಾದ ಮಾಡಬೇಕಿದೆ ಎಂದರು.ಸಹಕಾರ ಸಂಸ್ಥೆಗಳಲ್ಲಿ ನೌಕರರ ಅದಕ್ಷತೆ, ಅಪ್ರಮಾಣಿಕತೆಯಿಂದ ಅಧಃಪತನವಾಗಲಿದೆ. ಸಹಕಾರಿ ಆಂದೋಲನ ಸರ್ಕಾರಿ ಆಂದೋಲನವಲ್ಲ. ಇದು ಜನರ ಆಂದೋಲನ. ಜನರೇ ಸಹಕಾರಿ ಆಂದೋಲನ ಮುನ್ನಡೆಸ ಬೇಕು. ಸಹಕಾರಿ ಸಂಸ್ಥೆಗಳು ಯಾವಾಗ ದಾರಿ ತಪ್ಪುತ್ತವೆಯೋ ಆಗ ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಸಹಕಾರಿ ಸಂಸ್ಥೆಗಳಲ್ಲಿ ಸರ್ಕಾರ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸಹಕಾರಿ ಕ್ಷೇತ್ರ ಎಲ್ಲರಿಗಾಗಿ ತಾನು, ತನಗಾಗಿ ಎಲ್ಲರೂ ಎಂಬ ತತ್ವದಡಿ ನಡೆಯುತ್ತಿದೆ. ಮಹಾತ್ಮ ಗಾಂಧೀಜಿ ಕನಸು ಕಂಡಂತೆ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಹಕಾರಿ ಕ್ಷೇತ್ರ ಹುಟ್ಟಿದೆ. ಖಾಸಗಿ ಲೇವಾದೇವಿದಾರರಿಂದ ರೈತರನ್ನು ಹೊರತರಬೇಕು ಎಂಬ ಚಿಂತನೆಯಿಂದ ಸಹಕಾರಿ ಕ್ಷೇತ್ರ ಸಾಕಾರ ಗೊಂಡಿದೆ. ಸಹಕಾರಿ ಕ್ಷೇತ್ರದಿಂದ ಆಹಾರ ಉತ್ಪಾದನೆ ಮತ್ತು ರಫ್ತಿನಲ್ಲಿ ದೇಶ ಮುನ್ನಡೆ ಸಾಧಿಸಿದೆ ಎಂದು ತಿಳಿಸಿದರು.
ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಸಹಕಾರಿ ಕ್ಷೇತ್ರ ಸಂಪೂರ್ಣ ಬಿದ್ದುಹೋಗುವ ಪರಿಸ್ಥಿತಿಯಲ್ಲಿದ್ದಾಗ ವೈದ್ಯನಾಥನ್ ವರದಿ ಜಾರಿಗೆ ತಂದು ಸಹಕಾರ ಸಂಘಗಳ ₹78 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಸಂಗಮೇಶ್ವರ ಪಿಎಸಿಎಸ್ ₹189 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದು, ಈ ಭಾಗದಲ್ಲಿ ರೈತರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಉತ್ತಮ ಗೋದಾಮು, ರಸಗೊಬ್ಬರ ಮಾರಾಟ ವ್ಯವಸ್ಥೆ ಹೊಂದಿದೆ ಎಂದರು.ಸಂಘದ ಅಮೃತ ಸಂಭ್ರಮ-ಅಮೃತ ಸಂಗಮ ಸ್ಮರಣ ಸಂಚಿಕೆ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರು, ಸಿಬ್ಬಂದಿ, ಉತ್ತಮ ಸಹಕಾರಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನೌಕರರ ವಸತಿ ಗೃಹಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನೂತನ ಗೋದಾಮು ಉದ್ಘಾಟಿಸಲಾಯಿತು.ಸಂಘದ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ, ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ವಿಪ ಮಾಜಿ ಸದಸ್ಯರಾದ ಎಸ್.ವಿ.ಮಂಜುನಾಥ್, ಗಾಯತ್ರಿ ಶಾಂತೇಗೌಡ, ಸಹಕಾರ ಸಂಘಗಳ ಉಪ ನಿಬಂಧಕಿ ಡಿ.ಎಸ್.ತೇಜಸ್ವಿನಿ, ಉಪ ನಿರ್ದೇಶಕಿ ಎಸ್.ಎಂ.ಶಶಿರೇಖಾ, ತ್ರಿವೇಣಿ ರಾವ್, ಪ್ರಮುಖರಾದ ಕೆ.ಕೆ.ವೆಂಕಟೇಶ್, ಯು.ಇ.ಜಯರಾಮ್, ಟಿ.ಇ. ಮಂಜುನಾಥ್, ಎಸ್.ಸುರೇಶ್‌ಗೌಡ, ಬಿ.ಎನ್.ಸೋಮೇಶ್, ಯು.ವಿ.ವಿನಯ್, ಚಂದ್ರಹಾಸ್, ಎಸ್.ಗೋಕುಲ್, ಎ.ಕೆ. ಸುಧಾಕರ, ಕೆ.ಎ.ಮಹಮ್ಮದ್, ಎಂ.ಎ.ಪಲ್ಲವಿ, ಬಿ.ಎನ್.ಸುಚಿತ್ರ, ಸುಂದರೇಶ್, ಬಿ.ಸಿ.ಕುಟ್ಟಿ, ರಮಣರೆಡ್ಡಿ, ಪ್ರತಾಪ್ ರೆಡ್ಡಿ, ಬಾಲಕೃಷ್ಣ, ಸ್ನೇಹ ನೀಲಪ್ಪಗೌಡ ಮತ್ತಿತರರು ಹಾಜರಿದ್ದರು.-- (ಬಾಕ್ಸ್)---ಚಿಕ್ಕಮಗಳೂರಿಗೆ ಶೀಘ್ರ ಹಾಲಿನ ಡೈರಿ ಚಿಕ್ಕಮಗಳೂರು ಜಿಲ್ಲೆಗೆ ಹಾಲಿನ ಡೈರಿ ಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇದ್ದು, ಚಿಕ್ಕಮಗಳೂರು ಜಿಲ್ಲೆ ಹಾಗೂ ಅರಸೀಕೆರೆ ತಾಲೂಕನ್ನು ಸೇರಿಸಿ ಹಾಲಿನ ಡೈರಿ ನೀಡಬೇಕು ಎಂಬ ಸೂಚನೆಯನ್ನು ಮುಖ್ಯಮಂತ್ರಿ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಬೇಡಿಕೆ ಸಾಕಾರಗೊಳ್ಳಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂಬುದು ಸರ್ಕಾರದ ಉದ್ದೇಶ. ಹಾಲಿನ ದರ ₹4 ಹೆಚ್ಚಿಸಿ ರೈತರಿಗೆ ನೀಡುವ ಕೆಲಸ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆ ದರಕ್ಕೆ ಹಾಲನ್ನು ಮಾರಾಟ ಮಾಡಲಾಗುತ್ತಿದ್ದು, ಒಂದು ಲೀ. ಬಾಟಲಿ ನೀರಿಗೆ ನೀಡುವ ಹಣಕ್ಕಿಂತ ಕಡಿಮೆ ದರದಲ್ಲಿ ಹಾಲು ಮಾರಾಟ ಮಾಡಲಾಗುತ್ತಿದೆ. ಆತ್ಮಸಾಕ್ಷಿಯಿಂದ ಯೋಚನೆ ಮಾಡಿದರೆ ಇದು ನಾವು ರೈತರನ್ನು ಶೋಷಣೆ ಮಾಡುತ್ತಿಲ್ಲವೇ ಎನಿಸುತ್ತದೆ. ಬೇರೆ ರಾಜ್ಯಗಳಲ್ಲಿ ಎಲ್ಲಕ್ಕಿಂತ ಹೆಚ್ಚು ದರದಲ್ಲಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.-
೨೦ಬಿಹೆಚ್‌ಆರ್ ೩:ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಿದರು.
೨೦ಬಿಹೆಚ್‌ಆರ್ ೪:ಸಂಗಮೇಶ್ವರಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವದಲ್ಲಿ ಅಮೃತ ಸಂಭ್ರಮ-ಅಮೃತ ಸಂಗಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.