ಹಿರಿಯ ನಾಗರಿಕರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ವರ್ಷವಿಡೀ ಹಿರಿಯರಿಗೆ ಪ್ರೀತಿ, ಗೌರವ ಮತ್ತು ಆರೈಕೆ ದೊರೆಯುವಂತಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ. ಹೇಳಿದರು.

ಹಾವೇರಿ: ಹಿರಿಯ ನಾಗರಿಕರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ವರ್ಷವಿಡೀ ಹಿರಿಯರಿಗೆ ಪ್ರೀತಿ, ಗೌರವ ಮತ್ತು ಆರೈಕೆ ದೊರೆಯುವಂತಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ. ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ನಿವೃತ್ತಿಯ ನಂತರ ಹಿರಿಯರ ಸಾಮಾಜಿಕ ಸಂಪರ್ಕ ಹಾಗೂ ಚಟುವಟಿಕೆಗಳು ಕಡಿಮೆಯಾಗುವ ಸಾಧ್ಯತೆಯಿದ್ದು, ಕುಟುಂಬದವರು ಅವರಿಗೆ ಅಗತ್ಯ ಬೆಂಬಲ ನೀಡಬೇಕು. ಸರ್ಕಾರದ ಯೋಜನೆಗಳು, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳು ಅರ್ಹ ಹಿರಿಯ ನಾಗರಿಕರಿಗೆ ತ್ವರಿತವಾಗಿ ತಲುಪುವಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಹಿರಿಯ ನಾಗರಿಕರಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್ ಬಿ.ಆರ್. ಮಾತನಾಡಿ, ಹಿರಿಯ ನಾಗರಿಕರ ಅನುಭವ, ಮಾರ್ಗದರ್ಶನ ಹಾಗೂ ಜೀವನ ಮೌಲ್ಯಗಳು ಕುಟುಂಬ ಮತ್ತು ಸಮಾಜದ ಬೆಳವಣಿಗೆಗೆ ಅಮೂಲ್ಯ ಕೊಡುಗೆಯಾಗಿವೆ. ಹಿರಿಯರನ್ನು ಗೌರವಿಸುವುದು ಅವರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಗೌರವಯುತ ಜೀವನಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೇವತಿ ಹೊಸಮಠ ಮಾತನಾಡಿ, ತಂದೆ-ತಾಯಿಗಳ ತ್ಯಾಗವನ್ನು ಮಕ್ಕಳು ಮರೆಯಬಾರದು. ಹಿರಿಯರು ಆರೋಗ್ಯದ ಕಡೆಗೆ ಗಮನಹರಿಸಿ ವಾಯುವಿಹಾರ, ಸಮತೋಲಿತ ಆಹಾರ, ಉತ್ತಮ ನಿದ್ರೆ ಹಾಗೂ ಸಾಮಾಜಿಕ ಒಡನಾಟಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಆಶು ನದಾಫ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಸಿ. ಸಿದ್ದನಗೌಡ ಮಾತನಾಡಿ, ಹಿರಿಯರ ಅನುಭವ ಮತ್ತು ಪ್ರಾಯೋಗಿಕ ಜ್ಞಾನ ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಬದುಕಿಗೆ ನೆರವಾಗುತ್ತದೆ. ಅವರನ್ನು ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳಬೇಕು ಎಂದರು.

ಹಾವೇರಿ ಶಹರ ಠಾಣೆ ಸಿಪಿಐ ಮೋತಿಲಾಲ್ ಪವಾರ ಮಾತನಾಡಿ, ಹಿರಿಯರಿಗೆ ಮಕ್ಕಳಿಂದ ಕಿರುಕುಳ, ನಿರ್ಲಕ್ಷ್ಯ ಹಾಗೂ ಆಸ್ತಿ ವಿಚಾರದಲ್ಲಿ ತೊಂದರೆ ನೀಡುತ್ತಿರುವ ಪ್ರಕರಣಗಳು ಪೊಲೀಸ್ ಠಾಣೆಗೆ ಬರುತ್ತಿವೆ. ಆಸ್ತಿ ವರ್ಗಾವಣೆಗೂ ಮುನ್ನ ಹಿರಿಯರು ತಮ್ಮ ಜೀವನೋಪಾಯ, ವಾಸಸ್ಥಳ ಹಾಗೂ ಭವಿಷ್ಯದ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಸನ್ಮಿತ್ರ ಯೋಜನೆಯಡಿ ಹಾವೇರಿ ನಗರದಲ್ಲಿ ಒಂಟಿಯಾಗಿ ವಾಸಿಸುವ 22 ಹಿರಿಯ ನಾಗರಿಕರನ್ನು ಗುರುತಿಸಿ, ಪೊಲೀಸ್ ಸಿಬ್ಬಂದಿ ತಿಂಗಳಿಗೆ ಕನಿಷ್ಠ ಎರಡು ಬಾರಿ ಅವರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಮತ್ತು ಸುರಕ್ಷತೆ ವಿಚಾರಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಬಹುದು ಎಂದು ಹೇಳಿದರು.

ಸಹಾಯಕ ಕಾನೂನು ನೆರವು ಅಭಿರಕ್ಷಣಾ ನ್ಯಾಯವಾದಿ ಎಸ್.ಎನ್. ದಿಳ್ಳೆಪ್ಪನವರ ಅವರು, ಹಿರಿಯ ನಾಗರಿಕರ ಕಾನೂನು ಹಕ್ಕುಗಳು ಹಾಗೂ ಉಚಿತ ಕಾನೂನು ನೆರವು ಪಡೆಯುವ ವಿಧಾನ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಶತಾಯುಷಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ಹಾಗೂ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ಅಣ್ಣಿಗೇರಿ ಇತರರು ಉಪಸ್ಥಿತರಿದ್ದರು.