ಸಾರಾಂಶ
ಅಂಕೋಲಾ: ಮೀನುಗಾರರು ಕೇವಲ ಮೀನುಗಾರಿಕೆಗೆ ಸೀಮಿತವಾಗಿರದೆ, ಶಿಕ್ಷಣದ ಮೂಲಕ ಎಲ್ಲ ಕ್ಷೇತ್ರದಲ್ಲಿಯೂ ಪ್ರಗತಿ ಹೊಂದಬೇಕು ಎಂದು ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಅಂಕೋಲಾದ ಸತ್ಯಾಗೃಹ ಸ್ಮಾರಕ ಭವನದಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ 18ನೇ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮೀನುಗಾರ ಸಮುದಾಯ ದೊಡ್ಡದಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮೀನುಗಾರರಿಗೆ ಸಚಿವ ಸ್ಥಾನ ನೀಡಿದೆ. ಆ ಜವಾಬ್ದಾರಿ ತಮ್ಮ ಮೇಲಿದೆ. ಅದೇ ರೀತಿ ಸಮಾಜದಿಂದ ಗೌರದ ಪಡೆದ ಪ್ರತಿಯೊಬ್ಬರೂ ತಮ್ಮ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.ಈಗ ಶಿಕ್ಷಣ ಪಡೆಯುವವರಿಗೆ ಎಲ್ಲ ರೀತಿಯ ಸೌಲಭ್ಯಗಳು ಇವೆ. ಯಾರೂ ಶಿಕ್ಷಣದಿಂದ ದೂರ ಉಳಿಯಬಾರದು ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳು ಯಾವತ್ತಿಗೂ ನಿಲ್ಲಬಾರದು. ಅದಕ್ಕೆ ಬೇಕಾದ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಆನಂತರ ಸಚಿವ ಮಂಕಾಳ ವೈದ್ಯ ಅವರನ್ನು ಗೌರವಿಸಲಾಯಿತು.ಶಾಸಕ ಸತೀಶ ಸೈಲ್, ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಗೌರವಾಧ್ಯಕ್ಷ ಗಣಪತಿ ಮಾಂಗ್ರೆ, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಸಹಕಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ವಕೀಲ ಮಹೇಶ ಹರಿಕಂತ್ರ ಮಾತನಾಡಿದರು. ಮೀನುಗಾರ ಸಮಾಜದ ಯುವಕ, ಯುವತಿಯರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಔಷಧ ವಿತರಕ ಸುಭಾಷ ಕೇಣಿಕರ, ಉದ್ಯಮಿ ನೇತ್ರಾಣಿ ಗಣೇಶ, ಹೆಸ್ಕಾಂ ಕಿರಿಯ ಎಂಜಿನಿಯರ್ ಗಿರಿಧರ ಹರಿಕಂತ್ರ, ಮಹಾಜನ ಸಂಘದ ಉಪಾಧ್ಯಕ್ಷ ಆರ್.ಎಸ್. ಆಂದ್ಲೆಮನೆ, ಪ್ರಧಾನ ಕಾರ್ಯದರ್ಶಿ ಟಿ.ಬಿ. ಹರಿಕಂತ್ರ, ಶೈಕ್ಷಣಿಕ ಸಮಿತಿ ಅಧ್ಯಕ್ಷ ಶಿವಾನಂದ ತಾಂಡೇಲ, ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಹೂವಾ ಖಂಡೇಕರ, ಜಗದೀಶ ನುಶಿಕೋಟೆ, ಸುರೇಶ ಹರಿಕಂತ್ರ, ಶಾಂತಾ ಹರಿಕಂತ್ರ ಮತ್ತಿತರ ಮುಖಂಡರು ಇದ್ದರು.126 ವಿದ್ಯಾರ್ಥಿಗಳಿಗೆ ಪುರಸ್ಕಾರ: ಹರಿಕಂತ್ರ ಸಮಾಜದ ಪ್ರತಿಭಾವಂತ 126 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ 50, ದ್ವಿತೀಯ ಪಿಯುಸಿ 40, ಪದವಿ 30 ಮತ್ತು ಸ್ನಾತಕ್ಕೋತ್ತರ ಪದವಿ ಮತ್ತು ಎಂಜಿನಿಯರ್ ತಲಾ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದರ ಜತೆಗೆ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ 34 ಜನರಿಗೆ ಗೌರವ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ನಡುವೆ ವಿದ್ಯಾರ್ಥಿಗಳಿಂದ ಯಕ್ಷಗಾನ, ಮಿಮಿಕ್ರಿ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ಜನರು ಪಾಲ್ಗೊಂಡಿದ್ದರು.ಹಲವು ಸಾಧಕರಿಗೆ ಸನ್ಮಾನ: ಎಂಬಿಎಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಐದು ಚಿನ್ನದ ಪದಕ ಪಡೆದ ಶ್ವೇತಾ ಹರಿಕಾಂತ, ನ್ಯಾಶನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ ಓಕಾ ತರಬೇತಿಯಲ್ಲಿ ಸರ್ವೋತ್ತಮ ಪ್ರಶಸ್ತಿ ಪಡೆದ ಸುಬ್ರಹ್ಮಣ್ಯ ಎನ್. ಹರಿಕಂತ್ರ, ರಾಷ್ಟ್ರಮಟ್ಟದ ಈಜುಪಟು ವಿನಯಾ ಹರಿಕಾಂತ, ಪತ್ರಕರ್ತ ಪ್ರಮೋದ ಹರಿಕಾಂತ, ಮೀನುಗಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಎಂ.ಎ. ರಾಜ್ಯಶಾಸ್ತ್ರ ವಿಭಾಗದಲ್ಲಿ ಕವಿವಿ ಹರ್ಡೇಕರ್ ಮಂಜಪ್ಪ ಸ್ಮಾರಕ ಗ್ರಂಥಮಾಲೆಯ ಬಂಗಾರದ ಪದಕ ಪಡೆದ ಕಾವ್ಯಾ ಕಿಮಾನಿಕರ್, ವಕೀಲರಾದ ರಾಜು ಹರಿಕಂತ್ರ, ಅಶೋಕ ಕೆ. ಹರಿಕಂತ್ರ, ಮಹೇಶ ಹರಿಕಂತ್ರ, ಮೀನಾಕ್ಷಿ ಕೇಣಿಕರ, ಶೈಕ್ಷಣಿಕ ಕ್ಷೇತ್ರದಲ್ಲಿ ಎಂಫಿಲ್ ಪದವಿ ಪಡೆದ ಮೋಹನ ಡಿ. ದುರ್ಗೇಕರ್, ಸುಭಾಷ ಪಿ. ಕೇಣಿಕರ್, ಬಿ.ಎಲ್. ಸೃಜನ್, ಯೋಧ ಮಾರುತಿ ಹರಿಕಂತ್ರ, ಸಮಾಜ ಸೇವಕ ನಾಗರಾಜ ಹಿಣಿ ಸೇರಿದಂತೆ 34 ಸಾಧಕರಿಗೆ, ಹರಿಕಂತ್ರ ಸಮಾಜದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು.