ಮದುವೆ ಎಂಬುದು ಪವಿತ್ರ ಕಾರ್ಯ. ಅಂತಹ ವಿವಾಹ ಮಹೋತ್ಸವವು ಶುಕ್ರವಾರ ಸುತ್ತೂರು ಮಠದಲ್ಲಿ ಗುರುಗಳ ಆಶೀವಾದದಿಂದ ನಡೆಯುತ್ತಿದೆ. ಒಂದು ಮದುವೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿವೆ. ಸಾಮೂಹಿಕ ಮದುವೆಗಳಲ್ಲಿ ದುಂದು ವೆಚ್ಚ ಕಡಿಮೆ ಇರುತ್ತದೆ. ಆದರೆ ಗುರುಗಳ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಇದು ನಿಜಕ್ಕೂ ಪವಿತ್ರ ಕಾರ್ಯ.
ಮಹೇಂದ್ರ ದೇವನೂರು
ಕನ್ನಡಪ್ರಭ ವಾರ್ತೆ ಮೈಸೂರುಗುರುಗಳ ಆಶೀರ್ವಾದದಿಂದ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನೀವು ಚೆನ್ನಾಗಿ ಬಾಳಬೇಕು. ಕುಟುಂಬಕ್ಕೆ ಸಮಾಜಕ್ಕೆ ಆದರ್ಶ ಬುದುಕು ನಿಮ್ಮದಾಗಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮದುವೆ ಎಂಬುದು ಪವಿತ್ರ ಕಾರ್ಯ. ಅಂತಹ ವಿವಾಹ ಮಹೋತ್ಸವವು ಶುಕ್ರವಾರ ಸುತ್ತೂರು ಮಠದಲ್ಲಿ ಗುರುಗಳ ಆಶೀವಾದದಿಂದ ನಡೆಯುತ್ತಿದೆ. ಒಂದು ಮದುವೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿವೆ. ಸಾಮೂಹಿಕ ಮದುವೆಗಳಲ್ಲಿ ದುಂದು ವೆಚ್ಚ ಕಡಿಮೆ ಇರುತ್ತದೆ. ಆದರೆ ಗುರುಗಳ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಇದು ನಿಜಕ್ಕೂ ಪವಿತ್ರ ಕಾರ್ಯ ಎಂದರು.ಇಂತಹ ಕಾರ್ಯಕ್ರಮಗಳಿಗೆ ಎಷ್ಟೇ ಕೃತಜ್ಞತೆ ಹೇಳಿದರೂ ಸಾಲುವುದಿಲ್ಲ. ಸಾಮೂಹಿಕ ಮದುವೆ ಎಲ್ಲೆಡೆ ಆಗಬೇಕು. ಇದರಿಂದ ಮದುವೆ ವೆಚ್ಚ ಕಡಿಮೆಯಾಗುತ್ತದೆ. ಹಣ ಉಳಿಯುತ್ತದೆ. ಇಂದು ನಮ್ಮ ಕರ್ನಾಟಕವೂ ಸೇರಿದಂತೆ ಭಾರತ ಎಲ್ಲಾ ಹಂತದಲ್ಲಿಯೂ ಪ್ರಗತಿ ಹೊಂದುತ್ತಿದೆ. ಆದರೆ ದೇಶದ ಅಭಿವೃದ್ಧಿಯನ್ನು ಜನಸಂಖ್ಯೆ ತಿನ್ನುತ್ತದೆ. ಕುಟುಂಬ ಯೋಜನೆ ಕಾರ್ಯಕ್ರಮದ ಮೇಲೆ ವಿಶ್ವಾಸ ಇಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಮಕ್ಕಳು ಒಂದು ಅಥವಾ ಎರಡು ಸಾಕು. ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ಇದೆ. ನಿಮಗೂ ಅನುಕೂಲವಾಗುತ್ತದೆ. ದೇಶದಲ್ಲಿನ ಬಡತನ, ನಿರುದ್ಯೋಗ ಸಮಸ್ಯೆ ಹೊಗಲಾಡಿಸಬೇಕು. ಇದಕ್ಕೆ ಅಗತ್ಯ ಹೋರಾಟ ಮಾಡಬೇಕು. ರಾಷ್ಟ್ರದ ಜನ ಸಂಖ್ಯೆ ಕಡಿಮೆಯಾಗಬೇಕು. ಹುಟ್ಟಿದ ಮಗು ಆರೋಗ್ಯವಾಗಿ, ಚೆನ್ನಾಗಿ ಬೆಳೆಯಬೇಕು ಎಂದರು.ಸಚಿವ ರಾಮಲಿಂಗ ರೆಡ್ಡಿ, ಇದೊಂದು ಸಾರ್ವಜನಿಕರಿಗೆ ಹತ್ತಿರವಾದ ಕಾರ್ಯಕ್ರಮ. ಲಕ್ಷಾಂತ ಜನ ಇಲ್ಲಿ ಭಾಗಿಯಾಗಿದ್ದಾರೆ. ದಾಸೋಹದ ಜತೆಗೆ ವಿದ್ಯೆ ದಾನಕ್ಕೂ ಒತ್ತು ನೀಡಲಾಗುತ್ತಿದೆ. ರಾಜ್ಯ, ರಾಷ್ಟ್ರದಲ್ಲಿ ವಿದ್ಯಾಸಂಸ್ಥೆ ಇದೆ. ಲಕ್ಷಾಂತರ ಜನ ಇಲ್ಲಿ ಓದಿ ಜೀವನ ಕಟ್ಟಿಕೊಂಡಿದ್ದಾರೆ. ಹಿಂದೆ ಇದ್ದ ಎಲ್ಲಾ ಮಠಾಧಿಪತಿಗಳ ಸೇವೆ ಸ್ಮರಿಸಬೇಕು. ಸಾಮೂಹಿಕ ಮದುವೆಗೆ ಮಠ ಒತ್ತು ನೀಡುತ್ತಿದೆ. ಹೆಚ್ಚು ಸಾಮೂಹಿಕ ಮದುವೆ ಆಗಬೇಕು. ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಸುತ್ತೂರು ಶ್ರೀಮಠವು ಜಾತ್ರೆಯ ಮೂಲಕ ರೈತರಿಗೆ ಕೃಷಿ ತರಬೇತಿ ಸೇರಿ ನಾನಾ ಕಾರ್ಯಕ್ರಮ ನೀಡುತ್ತಿದೆ. ಎಲ್ಲರೂ ಜಾತ್ರೆಯಲ್ಲಿ ಭಾಗಿಯಾಗಿ ಒಳ್ಳೆ ಊಟ ಮಾಡಿ. ಇಲ್ಲಿ ಎಲ್ಲಾ ಜಾತಿ, ಧರ್ಮದವರು ಭಾಗಿಯಾಗುತ್ತಿದ್ದಾರೆ. ಎಲ್ಲರಲ್ಲೂ ನಮ್ಮ ಜಾತ್ರೆ ಎಂಬ ಅಭಿಮಾನ ಇದೆ. ದಾಸೋಹ, ಶಿಕ್ಷಕಣಕ್ಕೆ ಸುತ್ತೂರು ಮಠ ಒತ್ತು ನೀಡುತ್ತಿದೆ ಎಂದರು.ಮೈಸೂರು ಬಿಷಪ್ ಫ್ರಾನ್ಸಿಸ್ ಸೆರಾವ್ ಮಾತನಾಡಿ, ಇಂತಹ ಕಾರ್ಯಕ್ರಮ ಶ್ಲಾಘನೀಯ. ಈ ಸುತ್ತೂರು ಕ್ಷೇತ್ರ ಪಣ್ಯ ಕ್ಷೇತ್ರವಾಗಿದ್ದು ಕೇವಲ ಪೂಜೆ ಪುನಸ್ಕಾರದಿಂದ ಮಾತ್ರವಲ್ಲದೆ, ಅಕ್ಷರ, ಅನ್ನ ದಾಸೋಹದಿಂದ ಪುಣ್ಯ ಕ್ಷೇತ್ರವಾಗಿದೆ. ಮಠ ಅನೇಕ ಬಡವರಿಗೆ ನೆರವಾಗಿದೆ. ಸಾವಿರಾರು ಜನರಿಗೆ ಜೀವನ ರೂಪಿಸಿಕೊಟ್ಟಿದೆ. ನಿಜವಾದ ಧರ್ಮ ದೇವಸ್ಥಾನ, ಚರ್ಚ್ ಗಳಿಗೆ ಸಂಬಂಧಿಸಿಲ್ಲ. ಸೇವೆಯೇ ಧರ್ಮ ಎಲ್ಲಿ ಶಾಂತಿಯುತ ಸಮಾಜಕ್ಕೆ ದುಡಿಯುತ್ತಾರೆ ಅಲ್ಲಿ ಧರ್ಮ ಇರುತ್ತದೆ. ಶಾಂತಿ, ಅನುಕಂಪ, ಪ್ರೀತಿ, ವಾತ್ಸಲ್ಯ ಇದ್ದ ಕಡೆ ದೇವರು ಇರುತ್ತಾನೆ. ಪ್ರೀತಿ, ವಿಶ್ವಾಸ, ತ್ಯಾಗದೊಂದಿಗೆ ನಿಮ್ಮ ದಾಂಪತ್ಯ ಜೀವನ ಸಾಗಲಿ ಎಂದು ಆಶಿಸಿದರು.
ಯು.ಎಸ್.ಎಯ ಬಾಸ್ಟನ್ ಕನ್ಸಲ್ಟಿಂಗ್ ನ ಹಿರಿಯ ನಿರ್ದೇಶಕ ರಾಜಣ್ಣ ಹೆಗ್ಗಡಳ್ಳಿ ಮಾತನಾಡಿ, ಜಾತ್ರೆ ಮಹೋತ್ಸವ ಜನರಿಗಿಗೆ ನಾನಾ ಜಾಗೃತಿ ಮೂಡಿಸುತ್ತಿದೆ. ಅನೇಕರಿಗೆ ಸುತ್ತೂರು ಮಠ ಪ್ರೇರಣೆ ನೀಡಿದೆ ಎಂದರು.ಪಡಗುರು ಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ಧಾರ್ಮಿಕ ಉತ್ಸವ ಜೊತೆಗೆ ಸಾಮಾಜಿಕ ಸೇವೆಯ ಅನೇಕ ಕೆಲಸ ನಡೆಯುತ್ತಿದೆ. ಇಂದು 130 ಕ್ಕೂ ಹೆಚ್ಚು ಜೋಡಿ ವಿವಾಹ ಆಗುತ್ತಿದ್ದಾರೆ. ಸಮರಸವೆ ಜೀವನ ಎಂಬ ಮಾತಿದೆ. ಪತಿ, ಪತ್ನಿಗೆ ಸಮರಸ ಇರಬೇಕು.ನೀವು ಪರಸ್ಪರ ನಂಬಿಕೆಯಿಂದ ಒಬ್ಬರೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ವಿಶೇಷ ಜೋಡಿಗಳು:
ದೃಷ್ಟಿ ಇಲ್ಲದ ಸರಗೂರು ತಾಲೂಕು ಹೂವಿನಕೊಳ ನಿವಾಸಿ ಎಚ್.ಎಂ. ಸುರೇಶ್ ಹಾಗೂ ಎಚ್.ಡಿ. ಕೋಟೆ ತಾಲೂಕು ನೇರಳೆ ನಿವಾಸಿ ಎನ್.ಪಿ. ರೇಖಾ ಶುಕ್ರವಾರ ಸತಿ-ಪತಿಗಳಾಗಿ ಗಮನ ಸೆಳೆದರು. ಹಿರಿಯರ ಒಪ್ಪಿಗೆ ಪಡೆದು ಸುತ್ತೂರಿನಲ್ಲಿಂದು ಸತಿ-ಪತಿಗಳಾಗಿದ್ದಾರೆ. ಪರಸ್ಪರ ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದು, ಇತರರಿಗೆ ಮಾದರಿಯಾಗಿ ಬದುಕು ಸಾಗಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ವಿಶೇಷ ಚೇತನರಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಂದುವಾಡಿಯ ನಿವಾಸಿ ಎಸ್. ಹೇಮವತಿ ಜೊತೆ ಹನೂರು ತಾಲೂಕು ಮಹಾಲಿಂಗನಕಟ್ಟೆ ನಿವಾಸಿ ಆರ್. ಜಡೇಸ್ವಾಮಿ ನಗು ಮೊಗದಿಂದಲೇ ವೇದಿಕೆಗೆ ಆಗಮಿಸಿ ಹೊಸ ಜೀವನಕ್ಕೆ ಕಾಲಿಟ್ಟರು.ದೃಷ್ಟಿದೋಷವುಳ್ಳ ನಂಜನಗೂಡು ತಾಲೂಕಿನ ಮಲ್ಲಹಳ್ಳಿಯ ಗುರುಸಿದ್ದಮ್ಮ ಮತ್ತು ಚಿನ್ನಯ್ಯ ದಂಪತಿಯ ಪುತ್ರ ಸಿ. ಚಿನ್ನಸ್ವಾಮಿ ಅವರನ್ನು ಕೈ ಹಿಡಿಯುವ ಮೂಲಕ ಸಾಕಮ್ಮ ಆಸರೆಯಾದರು. ಸಾಕಮ್ಮ ಚಾಮರಾಜನಗರ ಜಿಲ್ಲೆ ಕಾಡಹಳ್ಳಿ ಗ್ರಾಮದ ಗುರುಸಿದ್ದಮ್ಮ ಮತ್ತು ಮಾದಯ್ಯ ದಂಪತಿಯ ಪುತ್ರಿ.
ಚಾಮರಾಜನಗರದ ರಾಮಸಮುದ್ರದ ನಿವಾಸಿ ಪಿ. ಚಂದ್ರಮ್ಮ ಅವರನ್ನು ಅದೇ ಗ್ರಾಮದ ನಿವಾಸಿ ಎ. ಮಹೇಶ್ ಮರು ಮದುವೆಯಾಗಿ ಮಾದರಿಯಾದರು. ಚಂದ್ರಮ್ಮ ಅವರಿಗೆ 19 ವರ್ಷ ಇದ್ದಾಗಲೆ ಮದುವೆಯಾಗಿತ್ತು. ಆದರೆ, ಮದುವೆಯಾದ ಕೆಲ ದಿನದಲ್ಲೇ ಗಂಡ ತೀರಿಕೊಂಡರು. ಬಳಿಕ, ಒಂಟಿ ಜೀವನ ನಡೆಸುತ್ತಿದ್ದ ಚಂದ್ರಮ್ಮ ಅವರ ಬಾಳಿಗೆ ಮಹೇಶ್ ಆಸರೆಯಾದರು.ಸೋಲಾರ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಜಡೇಸ್ವಾಮಿ ಅವರು ಎಸ್.ಹೇಮಾವತಿ ಅವರನ್ನು ಮೆಚ್ಚಿ ವಿವಾಹವಾಗಿದ್ದಾರೆ.