ಹಿರಿಯರ ಆದರ್ಶ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ: ಎಸ್ಪಿ ಯಶೋದಾ ವಂಟಗೋಡಿ

| Published : Sep 16 2025, 12:04 AM IST

ಹಿರಿಯರ ಆದರ್ಶ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ: ಎಸ್ಪಿ ಯಶೋದಾ ವಂಟಗೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ವ್ಯವಸ್ಥೆಗೆ ತಕ್ಕಂತೆ ವಿದ್ಯಾರ್ಥಿಗಳ ಮನೋಸಾಮರ್ಥ್ಯವೂ ಬದಲಾಗುತ್ತಿದೆ. ಕೇವಲ ಐಷಾರಾಮಿ ಜೀವನಕ್ಕೆ ಪೂರಕವಾಗುವಂತಹ ಚಿಂತನೆಗಳು ಬದುಕನ್ನು ಗುರಿಗಾಣಿಸದು.

ಹಾವೇರಿ: ಬೆಳೆಯುತ್ತಿರುವ ವಿದ್ಯಾರ್ಥಿಗಳ ಬದುಕಿನ ವಿಕಾಸಕ್ಕೆ ಹಿರಿಯರ ಆದರ್ಶ ಸ್ಫೂರ್ತಿಯಾಗಬೇಕು. ಸಾಧನೆ ಮಾಡಲು ಸತತ ಪರಿಶ್ರಮ ಮುಖ್ಯ. ಪರಿಶ್ರಮದ ಬದುಕು ಪಲ್ಲವಿಸುತ್ತದೆ. ಉನ್ನತ ಸ್ಥಾನ ಹೊಂದುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಜಾಗೃತವಾಗಿರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದರು.ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ 2025- 26ನೇ ಶೈಕ್ಷಣಿಕ ವರ್ಷದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ವ್ಯವಸ್ಥೆಗೆ ತಕ್ಕಂತೆ ವಿದ್ಯಾರ್ಥಿಗಳ ಮನೋಸಾಮರ್ಥ್ಯವೂ ಬದಲಾಗುತ್ತಿದೆ. ಕೇವಲ ಐಷಾರಾಮಿ ಜೀವನಕ್ಕೆ ಪೂರಕವಾಗುವಂತಹ ಚಿಂತನೆಗಳು ಬದುಕನ್ನು ಗುರಿಗಾಣಿಸದು. ಬದಲಾಗಿ ವೈಚಾರಿಕ ಚಿಂತನೆಗಳೊಟ್ಟಿಗೆ ಭವಿಷ್ಯದ ಹಿತದೃಷ್ಟಿಯಿಂದ ಸ್ಪರ್ಧಾ ಮನೋಭಾವ ಮತ್ತು ದೈಹಿಕ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಬೌದ್ಧಿಕ ವಿಕಾಸದೊಂದಿಗೆ ಶಾರೀರಿಕ, ದೈಹಿಕ ವಿಕಾಸವನ್ನು ಸಹ ಮಾಡಿಕೊಳ್ಳಲು ಉತ್ತಮ ಅವಕಾಶಗಳು ಹೆಚ್ಚಾಗಿವೆ. ಸೂಕ್ತ ಮಾರ್ಗದರ್ಶನದೊಂದಿಗೆ ಉತ್ತಮ ಹಾದಿ ಹಿಡಿಯುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ. ಎಸ್.ಎಲ್. ಬಾಲೇಹೊಸೂರ, ಸದಸ್ಯರಾದ ಬಸವರಾಜ ಮಾಸೂರ, ಜೆ.ಎಸ್. ಅರಣಿ, ಐಕ್ಯುಎಸಿ ಸಂಯೋಜಕಿ ಪ್ರೊ. ರೂಪಾ ಕೋರೆ, ದೈಹಿಕ ಶಿಕ್ಷಣ ನಿರ್ದೇಶಕಿ ಪೂಜಾ ಎಂ., ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು. ಪ್ರಾಚಾರ್ಯ ಪ್ರೊ. ಎಂ.ಎಂ. ಹೊಳ್ಳಿಯವರ ಸ್ವಾಗತಿಸಿದರು. ಕಾಲೇಜು ಸಾಂಸ್ಕೃತಿಕ ವೇದಿಕೆಯ ಉಪಾಧ್ಯಕ್ಷೆ ಡಾ. ಮಹಾದೇವಿ ಕಣವಿ ಪರಿಚಯಿಸಿದರು. ಪ್ರೊ. ಶ್ರೀದೇವಿ ದೊಡ್ಡಮನಿ ನಿರ್ವಹಿಸಿದರು. ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ. ಎಸ್.ಆರ್. ನಾಯಕ್ ವಂದಿಸಿದರು.