ಮಹಾತ್ಮರ ಆದರ್ಶಗಳು ಮತ್ತೆ ಪುನರುತ್ಥಾನವಾಗಲಿ

| Published : Jan 20 2024, 02:05 AM IST

ಸಾರಾಂಶ

ನಾಳಿನ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ಮೊದಲ ಆದ್ಯತೆಯಾಗಬೇಕು. ತಾಯಂದಿರು ಮಕ್ಕಳ ಭವಿಷ್ಯಕ್ಕಾಗಿ ಸದಾಶಯ ಹೊಂದಿ ಉತ್ತಮವಾಗಿ ಬೆಳೆಸಬೇಕು. ತಾಯಂದಿರು ಮಕ್ಕಳ ಬಗೆಗೆ ನಿಷ್ಕಾಳಜಿ ತೋರದಿರಿ

ಹಾನಗಲ್ಲ: ಸೇವೆಯಲ್ಲಿಯೇ ಸಂತೃಪ್ತಿ ಕಂಡ ಮಹಾತ್ಮರ ಆದರ್ಶಗಳು ಈಗ ನಮ್ಮ ನಡುವೆ ಮತ್ತೆ ಪುನರುತ್ಥಾನವಾಗುವ ಮೂಲಕ ಸೇವೆಯೇ ಪರಮ ಧರ್ಮ ಎಂಬ ಘೋಷ ವಾಕ್ಯ ಮೊಳಗಬೇಕು ಎಂದು ಆರ್‌ಎಸ್‌ಎಸ್ ಧಾರವಾಡ ವಿಭಾಗ ಪ್ರಮುಖ ವಿಶ್ವನಾಥಜೀ ತಿಳಿಸಿದರು.

ಹಾನಗಲ್ಲಿನಲ್ಲಿ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟಿನಿಂದ ನಡೆಯುತ್ತಿರುವ ಶ್ರೀದಯಾಶಂಕರ ಛಾತ್ರಾಲಯದ ಮಕ್ಕಳಿಗಾಗಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಆಯೋಜಿಸಿದ ಸಾಮೂಹಿಕ ಜನ್ಮದಿನ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದ ಅವರು, ಸೇವೆಯಲ್ಲಿ ಸಾರ್ಥಕತೆ ಇದೆ. ಈಗ ಸಮಾಜಮುಖಿ ಚಿಂತನೆ ಬೇಕಾಗಿದೆ. ದುರ್ಬಲರ ಸೇವೆಯಲ್ಲಿ ವಿಶೇಷ ತೃಪ್ತಿ ಇದೆ. ಪ್ರಚಾರ ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಗೆ ಹೆಚ್ಚು ಶಕ್ತಿ ಇದೆ. ಸಮಾಜಕ್ಕಾಗಿ ಒಳ್ಳೆಯ ನಿರೀಕ್ಷೆ ಮಾಡೋಣ. ದುಡಿಮೆಯ ಸ್ವಲ್ಪ ಭಾಗ ಸೇವೆಗಾಗಿ ನೀಡೋಣ. ಸಮಾಜ ದೇಶದ ಹಿತಕ್ಕಾಗಿ ನಮ್ಮ ಚಿಂತನೆಗಳು ಸಕಾರಾತ್ಮಕವಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ದಯಾಶಂಕರ ಛಾತ್ರಾಲಯದ ಅಧ್ಯಕ್ಷೆ ರೇಖಾ ಶೆಟ್ಟರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾನಗಲ್ಲಿನಲ್ಲಿ ಛಾತ್ರಾಲಯ ದಾನಿಗಳ ಸಹಕಾರದಿಂದಲೇ ನಡೆಯುತ್ತಿದೆ. ಆರ್ಥಿಕ ದುರ್ಬಲ ಕುಟುಂಬಗಳ ಹಾಗೂ ನಿರ್ಲಕ್ಷಿತ ಮಕ್ಕಳ ಹಿತಕ್ಕಾಗಿ ಛಾತ್ರಾಲಯ ತಾಯಿಯ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದೆ. ಈ ಮಕ್ಕಳ ಒಳಿತಿಗಾಗಿ ಸಹೃದಯಿ ದಾನಿಗಳು ಸಹಕಾರ ನೀಡಿದ್ದಾರೆ. ಇದೊಂದು ತೃಪ್ತಿಕರ ಕೆಲಸವಾಗಿದೆ. ಮಕ್ಕಳನ್ನು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯಿಂದ ಬೆಳೆಸುವ ಜವಾಬ್ದಾರಿ ಛಾತ್ರಾಲಯದ್ದಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಲಲಿತಾ ದೇಸಾಯಿ, ನಾಳಿನ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ಮೊದಲ ಆದ್ಯತೆಯಾಗಬೇಕು. ತಾಯಂದಿರು ಮಕ್ಕಳ ಭವಿಷ್ಯಕ್ಕಾಗಿ ಸದಾಶಯ ಹೊಂದಿ ಉತ್ತಮವಾಗಿ ಬೆಳೆಸಬೇಕು. ತಾಯಂದಿರು ಮಕ್ಕಳ ಬಗೆಗೆ ನಿಷ್ಕಾಳಜಿ ತೋರದಿರಿ ಎಂದರು.

ವೇದಿಕೆಯಲ್ಲಿ ಸೇವಾ ಭಾರತಿಯ ಕೇಂದ್ರ ಸಮಿತಿ ಕೋಶಾಧ್ಯಕ್ಷ ಶ್ರೀಧರ ನಾಡಿಗೇರ, ಸ್ನೇಹಾ ಮಹಿಳಾ ಮಂಡಳದ ಅಧ್ಯಕ್ಷೆ ಸೌಭಾಗ್ಯ ಉದಾಸಿ ಇದ್ದರು. ಶ್ರೀಧರ ದೇಸಾಯಿ ಆಶಯ ನುಡಿ ನುಡಿದರು.

ವಿಜಯಲಕ್ಷ್ಮೀ ಹುಗ್ಗಿ ಸ್ವಾಗತಿಸಿದರು. ಹನುಮಂತಪ್ಪ ಹುಡೇದ ನಿರೂಪಿಸಿದರು. ಶ್ರವಣ ಭೋಸ್ಲೆ ವಂದಿಸಿದರು.