ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶರಣರ ಆದರ್ಶ ತತ್ವಗಳು ನಮ್ಮ ತಲೆಮಾರಿಗೆ ಕೊನೆಗೊಳ್ಳದೇ ಮುಂದುವರೆಯಬೇಕು. ಅದಕ್ಕಾಗಿ ನಾವು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದು ಕದಳಿ ವೇದಿಕೆ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ಕಾಶಿಬಾಯಿ ಶಿವಯೋಗಪ್ಪ ರಾಂಪೂರ ಹೇಳಿದರು.

ಪಟ್ಟಣದ ಮಾರುತಿ ನಗರದ ಪಂಚಾಕ್ಷರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿಯವರ ಮನೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುದ್ದೇಬಿಹಾಳ, ಕದಳಿ ವೇದಿಕೆ ಹಾಗೂ ಯುವ ಘಟಕ ಮುದ್ದೇಬಿಹಾಳದ ಶರಣ ಬೆಳಗು ಗುರುಪೂರ್ಣಿಮೆ ಕಾರ್ಯಕ್ರಮ ಅನುಭಾವ ಮಾಲೆ-53ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಯುವ ಜನಾಂಗಕ್ಕೆ ತಿಳಿಸಿಕೊಡುವ ಉದ್ದೇಶವನ್ನಿಟ್ಟುಕೊಂಡು ಬೇರೆ, ಬೇರ ಸ್ಥಳಗಳಲ್ಲಿ ವಿಶಿಷ್ಟವಾಗಿ, ವಿಭಿನ್ನವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. 12ನೇ ಶತಮಾನದ ಶರಣರಿಗೆ ನೀಡುವ ಗೌರವ ಸೇವೆವೆಂದು ಭಾವಿಸುತ್ತೇವೆ ಎಂದು ವಿವರಿಸಿದರು.ಶಿಕ್ಷಕಿ ಸರೋಜಾ ಬ.ಕೋರಿ ಶರಣರ ದೃಷ್ಟಿಯಲ್ಲಿ ಗುರು ವಿಷಯ ಕುರಿತು ಮಾತನಾಡಿ, ಶರಣರ ದೃಷ್ಟಿಯಲ್ಲಿ ಗುರು ಕೇವಲ ವ್ಯಕ್ತಿಯಲ್ಲ, ಅದೊಂದು ಜ್ಞಾನಾಮೃತ ನೀಡುವ ದಿವ್ಯಶಕ್ತಿ. ಗುರು-ಶಿಷ್ಯರ ಸಂಬಂಧವು ಪ್ರೀತಿ, ಗೌರವದ ಮೇಲೆ ನಿಂತಿದೆ. ಗುರುವು ಶಿಷ್ಯನ ತಪ್ಪುಗಳನ್ನು ತಿದ್ದಿ ಸನ್ಮಾರ್ಗ ತೋರಿದರೇ, ಶಿಷ್ಯನು ಗುರುವಿನ ನುಡಿಯನ್ನು ಶ್ರದ್ಧೆಯಿಂದ ಪಾಲಿಸಿ ಯಶಸ್ವಿನ ಶಿಖರ ಏರಬೇಕು ಎಂದು ಸಲಹೆ ನೀಡಿದರು.ಜೀವದ ಅಜ್ಞಾನ ಹೊಡೆದು ಅರಿವು ಮೂಡಿಸುವ ಪರಮ ತತ್ವವೇ ಗುರು. ಹೀಗಾಗಿ ಗುರುವು ಭಕ್ತನಿಗೆ ಸನ್ಮಾರ್ಗ ತೋರಿಸಿ, ಶಿವನ ಸ್ವರೂಪದ ಪರಿಚಯ ಮಾಡಿಕೊಡುತ್ತಾನೆ. ಶರಣರ ಧರ್ಮದಲ್ಲಿ ಗುರು, ಲಿಂಗ ಮತ್ತು ಜಂಗಮ ಬೇರೆ ಬೇರೆಯಲ್ಲ, ಅವು ಒಂದೇ ದೈವಿಕ ಶಕ್ತಿಯ ರೂಪಗಳು ಎಂದು ವಿವರಿಸಿದರು.

ನಿವೃತ್ತ ಮುಖ್ಯೋಪಾಧ್ಯಪಕಿ ಟಿ.ವೈ.ಕಟ್ಟಿಮನಿ, ನಿವೃತ್ತ ಮುಖ್ಯೋಪಾಧ್ಯಪಕಿ ಎಸ್‌.ಬಿ.ನಿಡಗುಂದಿ, ನಿವೃತ್ತ ಮುಖ್ಯೋಪಾಧ್ಯಪಕಿ ಪಿ.ಕೆ.ದೊಡಮನಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಮುಖ್ಯ ಅತಿಥಿ ಉಪತಹಸೀಲ್ದಾರ್‌ ಎಚ್‌.ಎಂ.ಶಿವಣಗಿ ಮಾತನಾಡಿದರು. ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿ ಸ್ವಾಗತಿಸಿದರು. ಬಸವ ಮಹಾಮನೆ ಬಳಗ, ಕದಳಿ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.ಕಾಶಿಬಾಯಿ ರಾಂಪೂರವರ ಮುಂದಾಳತ್ವದಲ್ಲಿ ಕದಳಿ ವೇದಿಕೆ ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಶರಣರ ಆದರ್ಶಗಳನ್ನು ಜನರಿಗೆ ತಿಳಿಸುವಂತ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶರಣರ ತತ್ವಗಳನ್ನು ತಿಳಿಸುವಂತಾಗಲಿ. ಜನರಿಗೆ ಶರಣ ಸಾಹಿತ್ಯ ಜ್ಞಾನಾಮೃತ ಲಭಿಸುವಂತಾಗಲಿ.

-ಮಹಾದೇವ ಶಾಸ್ತ್ರಿ,


ಪ್ರವಚನಕಾರರು, ಸೋಮನಾಳ.ಶರಣರ ಆದರ್ಶ ಜೀವನ ಹಾಗೂ ಮೌಢ್ಯಗಳನ್ನು ಕಳೆಯಲು ಅವರ ಅನುಸರಿಸಿದ ಮಾರ್ಗಗಳು ಪ್ರಸ್ತುತ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಅತ್ಯಂತ ಪ್ರೇರಣದಾಯ ಅನುಭವ ವಾಣಿಗಳು. ಅವುಗಳ ಜಾಗೃತಿ ಹಾಗೂ ಜ್ಞಾನ ಹರಿವು ಹೆಚ್ಚಿಸುವಲ್ಲಿ ಕದಳಿ ವೇದಿಕೆ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸರ್ವ ಸಮುದಾಯವನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕಾಗಿದೆ. ಅದರ ಪ್ರಯತ್ನವೇ ಅನುಭಾವ ಮಾಲೆ ಕಾರ್ಯಕ್ರಮ.

-ಕಾಶಿಬಾಯಿ ಶಿವಯೋಗಪ್ಪ ರಾಂಪೂರ,
ಕದಳಿ ವೇದಿಕೆ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ.