ಕೊಟ್ಟೂರಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಅದ್ಧೂರಿಯಾಗಿರಲಿ

| Published : Aug 06 2024, 12:41 AM IST

ಕೊಟ್ಟೂರಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಅದ್ಧೂರಿಯಾಗಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸೈನಿಕರು ಮತ್ತು ಹಿರಿಯ ನಾಗರಿಕರಿಗೆ ಆಸೀನರಾಗಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಕೊಟ್ಟೂರು: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರೀಯ ಕಾರ್ಯಕ್ರಮವನ್ನು ಕೊಟ್ಟೂರು ತಾಲೂಕು ಆಡಳಿತದಿಂದ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಒಟ್ಟಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮಕ್ಕೆ ಮೆರಗು ತರಬೇಕೆಂದು ಶಾಸಕ ಕೆ.ನೇಮಿರಾಜ ನಾಯ್ಕ ಸೂಚಿಸಿದರು.ಪಟ್ಟಣದ ತಾಲೂಕು ಕಾರ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸೈನಿಕರು ಮತ್ತು ಹಿರಿಯ ನಾಗರಿಕರಿಗೆ ಆಸೀನರಾಗಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮ ಯಾವುದೇ ಪಕ್ಷದ ಮುಖಂಡರನ್ನು ವಿಜೃಂಭಿಸಲು ಆಸ್ಪದ ಮಾಡಿಕೊಡಬಾರದು. ಎಲ್ಲ ಪಕ್ಷದ ಹಿರಿಯರನ್ನು ವೇದಿಕೆಗೆ ಆಹ್ವಾನಿಸಬೇಕು. ಸರ್ಕಾರಿ ಶಿಷ್ಟಾಚಾರಕ್ಕೆ ಗೌರವ ನೀಡಿ ಅದು ಎಲ್ಲೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ತಾಲೂಕು ಆಡಳಿತಕ್ಕೆ ಸೂಚಿಸಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಕೊಟ್ಟೂರು ತಾಲೂಕಿನಲ್ಲಿರುವ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಮಂಜೂರಾತಿಯ ಪತ್ರಗಳನ್ನು ಶಾಸಕನಾಗಿ ವಿತರಿಸುವ ಕಾರ್ಯಕ್ರಮ ಸಹ ವಿಜೃಂಭಣೆಯಿಂದ ಜರುಗಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಲ್ಲದೆ, ಫಲಾನುಭವಿಗಳನ್ನು ಕರೆದುಕೊಂಡು ಬರುವುದು ಮತ್ತು ಕಾರ್ಯಕ್ರಮ ಮುಗಿದ ನಂತರ ಅವರನ್ನು ಸುರಕ್ಷಿತವಾಗಿ ವಾಪಸ್‌ ಕರೆದುಕೊಂಡು ಹೋಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕೊಟ್ಟೂರು ವಿದ್ಯುತ್ ಉಪ ವಿಭಾಗದ ಕಾರ್ಯಾರಂಭ ಸಹ ಇದೇ ವೇದಿಕೆಯಲ್ಲಿ ಉದ್ಘಾಟನೆಯನ್ನು ಇದೇ ಸಂದರ್ಭದಲ್ಲಿ ನೆರವೇರಿಸುವೆ ಎಂದ ಶಾಸಕರು ಹೊಸ ಕಚೇರಿಗೆ ಬೇಕಾದ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಜೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿರುವೆ ಎಂದರು.

ತಹಶೀಲ್ದಾರ ಅಮರೇಶ್ ಜಿ.ಕೆ. ಸ್ವಾಗತಿಸಿ, ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನದಿಂದ ಎಲ್ಲ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು ಎಂದರು. ಅಲ್ಲದೇ ಒಂದರಿಂದ 5ನೇ ತರಗತಿಯ ಮಕ್ಕಳನ್ನು ಬಿಟ್ಟು 6ನೇ ತರಗತಿಯಿಂದ ನಂತರದ ತರಗತಿಗಳ ಮಕ್ಕಳನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಎಲ್ಲ ಶಾಲಾ ಮುಖ್ಯಸ್ಥರು ಕರೆದುಕೊಂಡು ಬರಬೇಕು ಎಂದರು.

ಬಿಇಒ ಪದ್ಮನಾಮ ಕರಣಂ, ಸಿಡಿಪಿಒ ಸಿಂಧೂ ಅಂಗಡಿ, ಡಾ.ಪ್ರದೀಪ ವೇದಿಕೆಯಲ್ಲಿದ್ದರು.

ಜೆಸ್ಕಾಂ ಎ.ಇ ಚೇತನ್, ಪಿಎಂಸಿ ಕಾರ್ಯದರ್ಶಿ ವೀರಣ್ಣ, ಎಇಗಳಾದ ಕೆ.ನಾಗನಗೌಡ, ಮಲ್ಲಿಕಾರ್ಜುನ, ಡಾ.ಗಂಗಾ, ಇಸಿಒ ನಿಂಗಪ್ಪ, ಡಾ.ಜಿ. ಸೋಮಶೇಖರ, ನಾಗೇಶ, ಆನಂದ ಹಳ್ಳಿ, ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಗುರುಬಸವರಾಜ ನಿರೂಪಿಸಿದರು.