ಸಾರಾಂಶ
ಸೆ. 4ರಂದು ನೆಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರದ ಒಳಮೀಸಲಾತಿಯ ವರ್ಗೀಕರಣ ಸೂತ್ರವನ್ನು ದೋಷಮುಕ್ತಗೊಳಿಸಬೇಕು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಸೆ. 4ರಂದು ನೆಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರದ ಒಳಮೀಸಲಾತಿಯ ವರ್ಗೀಕರಣ ಸೂತ್ರವನ್ನು ದೋಷಮುಕ್ತಗೊಳಿಸಬೇಕು ಎಂದು ಕರ್ನಾಟಕ ಮಾದಿಗ ಹಾಗೂ ಉಪ ಜಾತಿಗಳ ಸಂಘಟನೆಗಳ ಒಕ್ಕೂಟದ ರಾಜ್ಯ ಮುಖಂಡ ಹಾಗೂ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಒತ್ತಾಯಿಸಿದ್ದಾರೆ.ರಾಜ್ಯ ಸರ್ಕಾರ ತೆಗೆದುಕೊಂಡ 6, 6, 5 ಮೀಸಲಾತಿ ವರ್ಗೀಕರಣದ ಸೂತ್ರ ಸುಪ್ರೀಂಕೋರ್ಟ್ ತೀರ್ಪಿನ ನಿರ್ದೇಶನ ಪಾಲಿಸಿಲ್ಲ. ನಿಖರ ದತ್ತಾಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಬೇಕು.ಅಂತರ್ ಹಿಂದುಳಿದಿರುವಿಕೆ ಆಧಾರದಲ್ಲಿ ವರ್ಗೀಕರಣ ಮಾಡಬೇಕು. ಸಮಾನರು ಅಸಮಾನರು ಒಂದೆ ಪ್ರವರ್ಗದಲ್ಲಿ ಸೇರದಂತೆ ಎಚ್ಚರ ವಹಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ನ್ಯಾ ನಾಗಮೋಹನ್ ದಾಸ್ ಅವರು ಸಮೀಕ್ಷೆಯ ದತ್ತಾಂಶಗಳನ್ನು ಬಳಸಿ ವರ್ಗೀಕರಣದ ಸೂತ್ರ ರೂಪಿಸಿದ್ದರು.
ಆದರೆ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ನಿರ್ಣಯ ಒಳಮೀಸಲಾತಿ ಕುರಿತಾದ ಸುಪ್ರೀಂಕೋರ್ಟ್ ಆದೇಶದ ಮೂಲ ಆಶಯವನ್ನು ಮಣ್ಣುಪಾಲು ಮಾಡಿದೆ. ಸಚಿವ ಸಂಪುಟ ರಾಜಕೀಯ ಪ್ರೇರಿತ ನಿರ್ಧಾರ ಕೈಗೊಂಡಿದೆ. ಸಾಮಾಜಿಕ ನ್ಯಾಯದ ಆಶಯವನ್ನು ಮೂಲೆಗುಂಪು ಮಾಡಿದೆ. ಅತ್ಯಂತ ಹಿಂದುಳಿದ ಎಂದು ಗುರುತಿಸಲಾದ 59 ಸಣ್ಣ ಜಾತಿಗಳ ಎ ಪ್ರವರ್ಗವನ್ನು ಅತಿ ಕಡಿಮೆ ಹಿಂದುಳಿದ ಡಿ ಗುಂಪಿಗೆ ಸೇರಿಸಿರುವ ನಿರ್ಣಯದಲ್ಲಿ ಸುಪ್ರೀಂಕೋರ್ಟ್ ಆಶಯ ಕಣ್ಮರೆಯಾಗಿದೆ. ಈ ಗೊಂದಲ ಪರಿಹಾರ ಆಗುವ ಮೊದಲೇ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ದುರ್ಬಲ ಜಾತಿಗಳ ಅವಕಾಶ ಕಿತ್ತಿಕೊಂಡಾಗುತ್ತದೆ.ಪರಿಶಿಷ್ಟ ಜಾತಿಗಳ ವರ್ಗೀಕರಣ ಶಿಕ್ಷಣ, ಉದ್ಯೋಗದ ಜೊತೆಗೆ ಪರಿಶಿಷ್ಟ ಜಾತಿಗಳ ಮೀಸಲು ನಿಧಿ ಅನುದಾನಕ್ಕೂ ಅನ್ವಯ ಆಗಬೇಕು. ಆ ಮೂಲಕ ಅತ್ಯಂತ ಹಿಂದುಳಿದ ಅವಕಾಶ ವಂಚಿತ ಮಾದಿಗ ಮತ್ತು ಅದರ ಉಪಜಾತಿಗಳಿಗೆ ನ್ಯಾಯ ಸಿಗಲೇಬೇಕು.
ಈ ಹಿನ್ನೆಲೆ ಇದೇ ಸೆ. 4 ರಂದು ನೆಡೆಯುವ ಸಚಿವ ಸಂಪುಟ ಸಭೆಯಲ್ಲಿ 6, 6, 5 ರ ವರ್ಗೀಕರಣದ ಸೂತ್ರವನ್ನು ಮರು ಪರಿಶೀಲನೆ ಮಾಡಬೇಕು. ಎಲ್ಲ 101 ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು. ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.