ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಸವಣ್ಣ, ನಾಡಪ್ರಭು ಕೆಂಪೇಗೌಡರು, ವಾಲ್ಮೀಕಿ ಜಯಂತಿ ಸೇರಿದಂತೆ ಅನೇಕ ಮಹನೀಯರ ಜಯಂತಿಗಳು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸಲಹೆ ನೀಡಿದರು.ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರ್ಯ ಈಡಿಗ ಜಿಲ್ಲಾ ಸಂಘದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯದಲ್ಲಿ 50ಕ್ಕೂ ಹೆಚ್ಚು ದಾರ್ಶನಿಕರ ಜಯಂತಿ ಆಚರಿಸಲಾಗುತ್ತದೆ. ಆದರೆ, ಜಯಂತಿ ಆಚರಣೆ ಆಯಾ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲ ವರ್ಗದ ಹಬ್ಬಗಳಾಗಬೇಕು. ಆಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಸಿಗುತ್ತದೆ. ಜಯಂತಿ ಕಾರ್ಯಕ್ರಮಗಳನ್ನು ಭಾಷಣಕ್ಕೆ ಸೀಮಿತಗೊಳಿಸಲಾಗಿದ್ದು, ಇಲ್ಲಿ ನಡೆ ಹಾಗೂ ನುಡಿಗೆ ವ್ಯತ್ಯಾಸವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಶಾಲೆಗಳಲ್ಲಿ ಒಂದು ಗಂಟೆಯಾದರೂ ಇವರ ಇತಿಹಾಸ ಮಕ್ಕಳಿಗೆ ತಿಳಿಸಬೇಕು. ಇತಿಹಾಸದ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಆಗಬೇಕು. ಸಂಸ್ಕಾರದ ಶಿಕ್ಷಣದಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಆದ್ದರಿಂದ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸಮಾಜ ಸುಧಾರಕರು, ದಾರ್ಶನಿಕರ ಇತಿಹಾಸ ಬೋಧಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದರು.ನೈತಿಕತೆ ಹಾಗೂ ಮಾನವೀಯತೆ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ನೀತಿ ಪಾಠ ಎಂಬುದು ನಿರ್ಲ್ಯಕ್ಷಕ್ಕೆ ಒಳಗಾಗಿದೆ. ಮುಂದಿನ ಪೀಳಿಗೆಗೆ ತಿಳುವಳಿಕೆ ನೀಡುವ ಕಾರ್ಯ ಆಗಬೇಕು. ನಾರಾಯಣಗುರು ಅವರು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಧಾರಣೆ ತರುವಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಮಾಜದ ನೆಮ್ಮದಿಯನ್ನು ಕಾಡುತ್ತಿದ್ದ ಕೆಲವೊಂದು ಅನಿಷ್ಠ ಪದ್ಧತಿಗಳು ತಾಂಡವವಾಡುತ್ತಿದ್ದಾಗ ಜನಿಸಿದ್ದ ಶ್ರೀ ನಾರಾಯಣ ಗುರುಗಳು, ಜಾತಿ-ವೈಷಮ್ಯ ಎಂಬ ಅಜ್ಞಾನವನ್ನು ತೊಡೆಯಲು ಶಿಕ್ಷಣದ ಮೂಲಕ ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಸಾರಿದ್ದರು ಎಂದರು.ಅವರು ಶೋಷಿತ ಮತ್ತು ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಸಮಾನತೆಯನ್ನು ದೊರಕಿಸಿಕೊಟ್ಟ ಮಹಾನ್ ಸಂತರು. ಇಂದಿನ ಯುವ ಪೀಳಿಗೆಗೆ ನಾರಾಯಣ ಗುರುಗಳ ಮಾರ್ಗದರ್ಶನ ಅತ್ಯಗತ್ಯ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿ ಆಗಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಸಮಾಜ ಸುಧಾರಕರ ತತ್ವ ಸಿದ್ಧಾಂತಗಳು ಯುವ ಪೀಳಿಗೆಗೆ ತಲುಪಬೇಕು. ಶತಮಾನದ ಹಿಂದೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಜನರಿಗೆ ನ್ಯಾಯ ಒದಗಿಸಿಕೊಟ್ಟವರು ನಾರಾಯಣ ಗುರುಗಳು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಶಿಕ್ಷಕರಾದ ಚನ್ನಬಸಪ್ಪ, ಪ್ರಮುಖರಾದ ಡಾ. ಜಿ.ಡಿ.ನಾರಾಯಣಪ್ಪ, ಸುರೇಶ್ ಬಾಳೆಗುಂಡಿ, ಪ್ರೊ.ಕಲ್ಲನ ಇದ್ದರು.
ಕೆಳಸ್ತರದವರ ಏಳಿಗೆಗೆ ಶ್ರಮಿಸಿದ ಗುರುದೇವ: ಜಿ.ಕೆ.ಸತೀಶ್ಒಂದೇ ಕುಲ, ಮನುಜರೆಲ್ಲ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಜೀವನವನ್ನು ನಾವೆಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಜಿ.ಕೆ.ಸತೀಶ್ ಹೇಳಿದರು. ತಳಸ್ತರದವರನ್ನು ಹೀನವಾಗಿ ನೋಡುತ್ತಿದ್ದ ಅಂದಿನ ಕಾಲಘಟ್ಟದಲ್ಲಿ ಜಾತಿಯ ಶ್ರೇಷ್ಠತೆ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದವರ ವಿರುದ್ಧ ಹೋರಾಟ ನಡೆಸಿ ಶಿಕ್ಷಣದ ಮೂಲಕ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆದು ಸಮಾನತೆಯ ಜೀವನ ನಡೆಸಲು ಕಾರಣಕರ್ತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
------ಸಮಾಜದಲ್ಲಿ ಬೇರು ಬಿಟ್ಟಿದ್ದ ಅಸ್ಪೃಶ್ಯತೆ, ಶೋಷಣೆ, ಮೂಢನಂಬಿಕೆಯಂತಹ ಅನಿಷ್ಠ ಪದ್ಧತಿಯ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು, ಸಮಾಜದ ಅನೇಕ ತೊಡಕುಗಳನ್ನು ಹೋಗಲಾಡಿಸಿ, ಸಮಾಜದ ಸುಧಾರಣೆಗಾಗಿ ಶ್ರಮಿಸಿದ್ದಾರೆ.
- ಆರ್. ಶ್ರೀಧರ ಹುಲ್ತಿಕೊಪ್ಪ, ಆರ್ಯ ಈಡಿಗ ಸಂಘ ಜಿಲ್ಲಾ ಘಟಕ ಅಧ್ಯಕ್ಷ.