ಕನ್ನಡಪ್ರಭ ವಾರ್ತೆ ರಾಮದುರ್ಗಲಿಂಗಾಯತ ಸಮಾಜದ ವಿವಿಧ ಒಳಪಂಗಡಗಳು ಪ್ರತ್ಯೇಕವಾಗಿ ಸಂಘಟಿತರಾಗುವ ಬದಲು ಎಲ್ಲರೂ ಒಂದಾಗಿ ಸಂಘಟಿತರಾದರೆ ರಾಜ್ಯದಲ್ಲಿ ಸಮಾಜದ ಪ್ರಭಾವ ಹೆಚ್ಚಾಗಲಿದೆ. ಇಂದಿನ ಪರಿಸ್ಥಿತಿಯಲ್ಲಿ ಲಿಂಗಾಯತ ಸಮಾಜದ ಒಳಪಂಗಡಗಳೆಲ್ಲ ಒಂದಾಗುವ ಅಗತ್ಯವಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಲಿಂಗಾಯತ ಸಮಾಜದ ವಿವಿಧ ಒಳಪಂಗಡಗಳು ಪ್ರತ್ಯೇಕವಾಗಿ ಸಂಘಟಿತರಾಗುವ ಬದಲು ಎಲ್ಲರೂ ಒಂದಾಗಿ ಸಂಘಟಿತರಾದರೆ ರಾಜ್ಯದಲ್ಲಿ ಸಮಾಜದ ಪ್ರಭಾವ ಹೆಚ್ಚಾಗಲಿದೆ. ಇಂದಿನ ಪರಿಸ್ಥಿತಿಯಲ್ಲಿ ಲಿಂಗಾಯತ ಸಮಾಜದ ಒಳಪಂಗಡಗಳೆಲ್ಲ ಒಂದಾಗುವ ಅಗತ್ಯವಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದಲ್ಲಿ ಭಾನುವಾರ ತಾಲೂಕು ಗಾಣಿಗ ಸಂಘದ ಉದ್ಘಾಟನೆ, ಸಾಧಕರಿಗೆ ಸನ್ಮಾನ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ರಾಮದುರ್ಗದ ಗಾಣಿಗ ಸಮಾಜದ ಸಂಘಟನೆ ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆ ಹಾಗೂ ವಸತಿ ನಿಲಯ ಸ್ಥಾಪನೆಗೆ ಮುಂದಾದರೆ ವೈಯಕ್ತಿಕವಾಗಿ ₹25 ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಗಾಣಿಗ ಸಮಾಜ ಒಗ್ಗಟ್ಟಾಗಿ ಶೈಕ್ಷಣಿಕ ಪ್ರಗತಿ ಸಾಧಿಸಿದರೆ ರಾಜಕೀಯ ನಾಯಕರನ್ನು ಪ್ರಶ್ನಿಸುವ ಶಕ್ತಿ ಬರುತ್ತದೆ. ಸಮಾಜದ ಪ್ರತಿಯೊಬ್ಬರೂ ಸಂಘಟಿತರಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಪ್ರಗತಿ ಸಾಧಿಸಬೇಕು. ಗಾಣಿಗ ಸಮಾಜ ವಿಶ್ವಾಸಕ್ಕೆ ಅರ್ಹವಾದ ಸಮಾಜವಾಗಿದ್ದು, ಒಮ್ಮೆ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುವ ಗುಣ ಹೊಂದಿದೆ. ಇಂತಹ ಸಮಾಜಕ್ಕೆ ಚುನಾಯಿತ ಪ್ರತಿನಿಧಿಗಳು ಆದ್ಯತೆ ನೀಡಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದರು.ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, ಗಾಣಿಗ ಸಮಾಜ ಸಂಘಟಿತವಾಗಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು.
ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ರಮೇಶ ಉಟಗಿ ಮಾತನಾಡಿ, ರಾಮದುರ್ಗ ತಾಲೂಕಿನಲ್ಲಿ ಗಾಣಿಗ ಸಮಾಜವನ್ನು ಸಂಘಟಿಸಲು ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಬಾಬುರಾವ್ ರಾಜನಾಳ ಮಾತನಾಡಿ, ಸಂಘಟಿತವಾಗಿರುವ ಗಾಣಿಗ ಸಮಾಜ ಮುಂದಿನ ದಿನಗಳಲ್ಲಿ ನಿರಂತರ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.
ಬೇಲೂರಿನ ಪ್ರಭುಮಹಾಂತ ಸ್ವಾಮೀಜಿ, ಬಟಕುರ್ಕಿ ಚೌಕಿಮಠದ ಬಸವಲಿಂಗ ಸ್ವಾಮೀಜಿ ಹಾಗೂ ಚಿಪ್ಪಲಕಟ್ಟಿಯ ಕಲ್ಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಕ್ಷಕಿ ಉಮಾ ಮಾಚಕನೂರು ಉಪನ್ಯಾಸ ನೀಡಿದರು.ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪರಪ್ಪ ಜಂಗವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಾರುತಿ ಜಂಗವಾಡ ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ. ಪಾಟೀಲ ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸುಮಂಗಲೆಯರು ತಾಲೂಕು ಪಂಚಾಯಿತಿಯಿಂದ ವಿದ್ಯಾ ಚೇತನ ಶಾಲೆಯವರೆಗೆ ಪೂರ್ಣಕುಂಭ ಮೆರವಣಿಗೆ ನಡೆಸಿದರು.ಲಿಂಗಾಯತ ಸಮಾಜದಲ್ಲಿ ಉದ್ಯೋಗಗಳ ಆಧಾರದ ಮೇಲೆ ವಿವಿಧ ಒಳಪಂಗಡಗಳು ರೂಪುಗೊಂಡಿವೆ. ಆದರೆ ಒಳಪಂಗಡಗಳ ಭೇದ ಮರೆತು ಎಲ್ಲರೂ ಒಂದಾಗಿ ಸಂಘಟಿತರಾಗಿ ರಾಜಕೀಯ ಹಾಗೂ ಆರ್ಥಿಕವಾಗಿ ಬಲಾಢ್ಯರಾಗಬೇಕು. ಸಮಾಜದ ಸಂಘಟನೆ ಬಲಗೊಳ್ಳಲು ಪ್ರತಿಯೊಬ್ಬರೂ ದೇಣಿಗೆ ನೀಡಬೇಕು. ದೇಣಿಗೆಯಿಂದ ಕೇವಲ ಕಲ್ಯಾಣ ಮಂಟಪ ನಿರ್ಮಿಸುವುದಕ್ಕಿಂತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಹಾಗೂ ಮಕ್ಕಳಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಲು ಆದ್ಯತೆ ನೀಡಬೇಕು.
-ಲಕ್ಷ್ಮಣ ಸವದಿ, ಸಹಕಾರ ಸಚಿವ