ಅಟ್ರಾಸಿಟಿ ಕಾನೂನು ಎನ್ನುವುದು ನಮ್ಮ ಸಮಾಜದ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವ ಮಹತ್ವದ ಕಾನೂನು ಆಗಿದ್ದು, ವಿನಾಕಾರಣ ದುರುಪಯೋಗ ಆಗಬಾರದು. ಮಾದಿಗ ಸಮಾಜದವರು ಇತರ ಸಮಾಜದವರಿಗೆ ಮಾದರಿಯಾಗಿ ಬದುಕು ನಡೆಸಬೇಕು ಎಂದು ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರುದ್ರಪ್ಪ ಮರಕಟ್ ಅವರು ಮಾದಿಗ ಸಮಾಜಕ್ಕೆ ಮನವಿ ಮಾಡಿದ್ದಾರೆ.
ಯಲಬುರ್ಗಾ: ಅಟ್ರಾಸಿಟಿ ಕಾನೂನು ಎನ್ನುವುದು ನಮ್ಮ ಸಮಾಜದ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವ ಮಹತ್ವದ ಕಾನೂನು ಆಗಿದ್ದು, ವಿನಾಕಾರಣ ದುರುಪಯೋಗ ಆಗಬಾರದು. ಮಾದಿಗ ಸಮಾಜದವರು ಇತರ ಸಮಾಜದವರಿಗೆ ಮಾದರಿಯಾಗಿ ಬದುಕು ನಡೆಸಬೇಕು ಎಂದು ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರುದ್ರಪ್ಪ ಮರಕಟ್ ಅವರು ಮಾದಿಗ ಸಮಾಜಕ್ಕೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಟ್ರಾಸಿಟಿ - ಇದು ಎಸ್‌ಸಿ ಮತ್ತು ಎಸ್‌ಟಿ ಜನಾಂಗದ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಇರುವ ವಿಶೇಷ ಕಾನೂನು. ಅಟ್ರಾಸಿಟಿ ಕೇಸ್ ದಾಖಲಾಗಲು ನಮ್ಮವರು ಪ್ರಚೋದನೆ ನೀಡಬಾರದು. ಇದರಿಂದ ಸಮಾಜಕ್ಕೆ ಮಾರಕವಾಗುತ್ತಿದ್ದು, ಉಳಿದ ಸಮಾಜದವರು ವಿಶ್ವಾಸ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಸಮಾಜದ ಬಾಂಧವರು ಜಾಗ್ರತರಾಗಬೇಕು. ಹೀಗಾಗಿ ಇದು ಮಾದಿಗ ಸಮಾಜದ ಎಲ್ಲ ಬಾಂಧವರಲ್ಲಿ ಹಾಗೂ ಸಮಾಜದ ಮುಖಂಡರಲ್ಲಿ ನನ್ನ ವಿನಮ್ರ ಮನವಿ ಎಂದರು.ಕಾನೂನುಗಳು ನಮ್ಮ ರಕ್ಷಣೆಗೆ ಇದ್ದು, ದುರುಪಯೋಗಕ್ಕೆ ಅಲ್ಲ. ನಿಜವಾಗಿ ಅನ್ಯಾಯ, ಜಾತಿ ಆಧಾರಿತ ಅವಮಾನ, ದೌರ್ಜನ್ಯ ಅಥವಾ ಹಕ್ಕುಗಳ ಉಲ್ಲಂಘನೆ ನಡೆದ ಸಂದರ್ಭದಲ್ಲಿ ಈ ಕಾನೂನಿನ ನೆರವನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬರ ಕಾನೂನುಬದ್ಧ ಹಕ್ಕಾಗಿದೆ. ಆದರೆ ವೈಯಕ್ತಿಕ ದ್ವೇಷ, ಜಗಳ, ಆಸ್ತಿ ಅಥವಾ ಹಣಕಾಸಿನ ವಿವಾದ, ಪ್ರತೀಕಾರ ಅಥವಾ ಇತರ ವೈಯಕ್ತಿಕ ಕಾರಣಗಳಿಗೆ ಸುಳ್ಳು ಆರೋಪಗಳನ್ನು ಮಾಡುವುದು ಅಥವಾ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದು ಸಮಾಜದ ಹಿತಕ್ಕೆ ಧಕ್ಕೆಯುಂಟುಮಾಡಬಹುದು. ಆದ್ದರಿಂದ, ಮಾದಿಗ ಸಮಾಜದ ಬಾಂಧವರು ಯಾವುದೇ ಪ್ರಕರಣ ದಾಖಲಿಸುವ ಮೊದಲು ನಿಜವಾದ ಘಟನೆ, ಲಭ್ಯವಿರುವ ಸಾಕ್ಷ್ಯ ಮತ್ತು ಕಾನೂನಿನ ಅಂಶಗಳನ್ನು ಪರಿಗಣಿಸಿ, ಅಗತ್ಯವಿದ್ದರೆ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯುವಂತೆ ಸಮಾಜದ ಮುಖಂಡರು ಮನವಿ ಮಾಡುತ್ತಾರೆ. ನಿಜವಾದ ಸಂತ್ರಸ್ತರಿಗೆ ನ್ಯಾಯ ದೊರಕಬೇಕು; ನಿರಪರಾಧಿಗಳಿಗೆ ಅನ್ಯಾಯವಾಗಬಾರದು. ನಮ್ಮ ಹಕ್ಕುಗಳನ್ನು ರಕ್ಷಿಸುವ ಕಾನೂನಿನ ಮೇಲಿನ ಗೌರವವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅನ್ಯಾಯದ ವಿರುದ್ಧ ಕಾನೂನು ಬಳಸೋಣ. ಆದರೆ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಸತ್ಯ, ನ್ಯಾಯ ಮತ್ತು ಸಮಾನತೆಯ ಸಮಾಜ ನಿರ್ಮಿಸೋಣ ಎಂದರು.
ಮುಖಂಡರಾದ ಶಿವರಾಜ ದೊಡ್ಮನಿ, ಪರಶುರಾಮ ಕಂಕಿ, ನಾಗರಾಜ ದೊಡ್ಮನಿ, ಹನುಮಂತಪ್ಪ ದೊಡ್ಮನಿ, ಹುಚ್ಚಪ್ಪ ದೊಡ್ಮನಿ, ದೇವರಾಜ ಕುದ್ರಿಮೋತಿ ಇದ್ದರು.