ಮೇದಾರ ಸಮುದಾಯ ಆರ್ಥಿಕವಾಗಿ ಸಬಲರಾಗಲಿ: ಸಿ.ಪಿ. ಪಾಟೀಲ

| Published : Sep 14 2024, 01:45 AM IST

ಸಾರಾಂಶ

ಮಳಗಿ ಸಮುದಾಯ ಭವನದಲ್ಲಿ ಮೇದಾರ ಕುಶಲಕರ್ಮಿಕರಿಗೆ ಪೆಹಚಾನ್ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು.

ಮುಂಡಗೋಡ: ಮೇದಾರ ಸಮುದಾಯ ತಲೆ ತಲಾಂತರದಿಂದ ಮುನ್ನಡೆಸಿಕೊಂಡು ಬಂದ ‘ಕೈಕೆಲಸ’ದ ಮಹತ್ವವನ್ನು ಕೇಂದ್ರ ಸರ್ಕಾರದ ಜವಳಿ ಇಲಾಖೆ(ಹ್ಯಾಂಡಿಕ್ರಾಪ್ಟ್) ಪೆಹಚಾನ್ ಕಾರ್ಡ್ ಮೂಲಕ ಗುರುತಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಚಿತ್ರದುರ್ಗ ಕೇತೆಶ್ವರ ಮಹಾಮಠದ ರಾಜ್ಯಾಧ್ಯಕ್ಷ ಸಿ.ಪಿ. ಪಾಟೀಲ ತಿಳಿಸಿದರು.

ತಾಲೂಕಿನ ಮಳಗಿ ಸಮುದಾಯ ಭವನದಲ್ಲಿ ನಡೆದ ಮೇದಾರ ಕುಶಲಕರ್ಮಿಕರಿಗೆ ಪೆಹಚಾನ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕುಟುಂಬದ ಪ್ರತಿ ಸದಸ್ಯರು ಗುರುತಿನ ಚೀಟಿ ಪಡೆಯುವ ಮೂಲಕ ಇಲಾಖೆಯ ಸೌಲಭ್ಯ ಪಡೆದು ಮೇದಾರ ಸಮುದಾಯ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಕೋರಿದರು.

ಇಲಾಖೆಯ ನೆರವಿನ ಮೂಲಕ ನಡೆಯುವ ಕರಕುಶಲ ವಸ್ತು ಪ್ರದರ್ಶನ, ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಶಲಕರ್ಮಿ ಪ್ರಶಸ್ತಿ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಲು ಯುವ ಮೇದಾರರಿಗೆ ತಿಳಿಸಿದರು.

ಮಂಗಳೂರು ಹ್ಯಾಂಡಿಕ್ರಾಪ್ಟ್ ಸೇವಾ ಕೇಂದ್ರದ ಸಹಾಯಕ ನಿರ್ದೇಶಕರಾದ ವೀಣಾ ಎಸ್. ಮಾತನಾಡಿ, ಪೆಹಚಾನ್ ಕಾರ್ಡ್‌ನಿಂದ ಮುದ್ರಾ ಯೋಜನೆ ಅಡಿ ಸಾಲ, ಮಾರುಕಟ್ಟೆ, ಉತ್ಪನ್ನಗಳ ಮೌಲ್ಯವರ್ಧನೆ, ಸಬ್ಸಿಡಿ, ಪೆನ್ಷನ್ ಇತ್ಯಾದಿ ಸೌಲಭ್ಯ ಪಡೆಯಲು ಸೂಚಿಸಿದರು.

ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಳಗಿ ಶಾಖೆಯ ವ್ಯವಸ್ಥಾಪಕ ವೆಂಕಟೇಶ ಮಾತನಾಡಿ, ಪೆಹಚಾನ್ ಕಾರ್ಡದಾರರಿಗೆ ಬ್ಯಾಂಕ್ ನಿಯಮಾವಳಿ ಅಡಿ ಅರ್ಹತೆ ಮೇರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.

ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕ ಅನಿಲ್ ಡಿ’ಸೋಜಾ ಪ್ರ‍್ರಾಸ್ತಾವಿಕವಾಗಿ ಮಾತನಾಡಿ, ಕೊರವ ಹಾಗೂ ಮೇದಾರ ಸಮುದಾಯಗಳ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಸರ್ಕಾರದ ಹಲವು ಇಲಾಖೆಗಳ ಜತೆಗೆ ಎಲ್‌ವಿಕೆ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಅವಕಾಶ ವಂಚಿತ ಸಮುದಾಯಗಳಿಗೆ ಆರ್ಥಿಕ ಬೆಳವಣಿಗೆಗೆ ಸಹಾಯವಾಗಿದೆ ಎಂದರು.

ಮಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ಪ್ರಕಾಶ ತಳವಾರ ಅಧ್ಯಕ್ಷತೆ ವಹಿಸಿದ್ದರು. ಪರಮೇಶ್ವರ ಇಡಗೋಡ, ಮರಿಯಪ್ಪ ಮೇದಾರ, ರಾಘವೇಂದ್ರ ಟಿ. ಪಾಟೀಲ್, ಮಂಜಪ್ಪ ಇಡಗೋಡ, ಸುರೇಶ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು. ಮಲ್ಲಮ್ಮ ನೀರಲಗಿ ಸ್ವಾಗತಿಸಿದರು. ದೀಪಾ ಹುನಗುಂದ, ಸಂವಿಧಾನದ ಪ್ರಸ್ತಾವನೆ ವಾಚಿಸಿದರು. ನಾಗರಾಜ ಕಟ್ಟಿಮನಿ ನಿರೂಪಿಸಿ, ವಂದಿಸಿದರು.