ಸಹಾಯ, ಸಹಕಾರ ನೀಡಿದವರ ಸ್ಮರಣೆ ಸದಾಕಾಲವಿರಲಿ: ಬಸವರಾಜ ಹೊರಟ್ಟಿ

| Published : Jul 02 2024, 01:37 AM IST

ಸಹಾಯ, ಸಹಕಾರ ನೀಡಿದವರ ಸ್ಮರಣೆ ಸದಾಕಾಲವಿರಲಿ: ಬಸವರಾಜ ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಧೋಳ : ಜನ್ಮ ನೀಡಿದ ತಾಯಿ-ತಂದೆ, ಪಾಠ ಮಾಡಿದ ಶಿಕ್ಷಕರನ್ನು, ಕಷ್ಟದಲ್ಲಿ ಸಹಾಯ, ಸಹಕಾರ ನೀಡಿದವರನ್ನು ನಾವು ಸದಾಕಾಲ ಸ್ಮರಣೆ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಜನ್ಮ ನೀಡಿದ ತಾಯಿ-ತಂದೆ, ಪಾಠ ಮಾಡಿದ ಶಿಕ್ಷಕರನ್ನು, ಕಷ್ಟದಲ್ಲಿ ಸಹಾಯ, ಸಹಕಾರ ನೀಡಿದವರನ್ನು ನಾವು ಸದಾಕಾಲ ಸ್ಮರಣೆ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸ್ಥಳೀಯ ರನ್ನ ಗ್ರಂಥಾಲಯದಲ್ಲಿ ಜಿ.ಆರ್.ಕಾಳಗಿ ಪ್ರತಿಷ್ಠಾನದಡಿ ಹಮ್ಮಿಕೊಂಡಿದ್ದ ಆದರ್ಶ ಶಿಕ್ಷಕ ದಿ.ಜಿ.ಆರ್.ಕಾಳಗಿ ಅವರ ನಿರಾಡಂಬರ ಹೆಸರಿನ ಸಂಸ್ಮರಣೆ ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ನಮಗೆ ಸಾಕಷ್ಟು ಶಿಕ್ಷಕರು, ಉಪನ್ಯಾಸಕರು ಪಾಠ ಬೋಧನೆ ಮಾಡಿ, ಮಾರ್ಗದರ್ಶನ ಮಾಡಿರುತ್ತಾರೆ. ಆದರೆ, ಅವರೆಲ್ಲರೂ ನಮ್ಮ ಮನಸ್ಸಿನಲ್ಲಿ ಉಳಿಯುವುದಿಲ್ಲ ಎಂದರು.

ಪಾಠದ ಜೊತೆ ಜೊತೆಗೆ ನಡೆ, ನುಡಿ, ಸಂಸ್ಕಾರವನ್ನು ಬೋಧಿಸುವ, ಬದುಕು ಸರಳ, ಸುಂದರವಾಗಿ ಸಾಗಿಸುವ ಸನ್ಮಾರ್ಗ ತೋರಿಸುವ ಶಿಕ್ಷಕರು ಆದರ್ಶ ಶಿಕ್ಷಕರಾಗಿರುತ್ತಾರೆ. ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದು. ಅಕ್ಷರ ಕಲಿಸಿದ ಗುರುವಿಗೆ ಋಣಿಗಳಾಗಿರಬೇಕು ಎಂದು ಸಲಹೆ ನೀಡಿದರು.

ತಮ್ಮ ತಾಯಿಯ ಹೆಸರಿನಲ್ಲಿ ಆರಂಭಿಸಿದ ಅವ್ವಾ ಸೇವಾ ಟ್ರಸ್ಟ್ ವತಿಯಿಂದ ಜಿ.ಆರ್.ಕಾಳಗಿ ಪ್ರತಿಷ್ಠಾನಕ್ಕೆ ₹1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ ಸಭಾಪತಿಗಳು, ಪ್ರತಿಷ್ಠಾನದ ವತಿಯಿಂದ ಹತ್ತು ಹಲವಾರು ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಬಾಗಲಕೋಟೆಯ ನರರೋಗ ತಜ್ಞ ವೈದ್ಯ ಡಾ.ಶಿವಕುಮಾರ ಕೆ.ಮಾಸರಡ್ಡಿ ಮಾತನಾಡಿ, ನನಗೂ ಜಿ.ಆರ್.ಕಾಳಗಿ ಅವರು ಶಿಕ್ಷಕರಾಗಿದ್ದರು. ಅವರ ಮಾರ್ಗದರ್ಶನ ಪಡೆದ ನಾನು ಈ ಸ್ಥಾನಕ್ಕೆ ಬಂದಿರುವುದಾಗಿ ಹೇಳಿದ ಅವರು, ಪ್ರತಿಷ್ಠಾನಕ್ಕೆ ತಾವು ₹10 ಸಾವಿರ ದೇಣಿಗೆ ನೀಡುವುದಾಗಿ ಘೋಷಿಸಿದರು.

ಯಡಹಳ್ಳಿ-ಇಂಗಳಗಿ ಅಡವಿಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ತಾವು ಕೂಡಾ ಜಿ.ಆರ್.ಕಾಳಗಿ ಗುರುಗಳ ಶಿಷ್ಯರಾಗಿರುವುದಾಗಿ ಹೇಳಿ ಅಂದಿನ ಶಿಕ್ಷಣ ಪದ್ಧತಿಯನ್ನು ಸ್ಮರಿಸಿದರು.

ಜಿ.ಆರ್.ಕಾಳಗಿ ಪ್ರತಿಷ್ಠಾನದ ಅಧ್ಯಕ್ಷ ಸುರೇಶ ಚಿಪ್ಪಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಸಂಶೋಧಕ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಮೋಡಿ ಲಿಪಿ ಗೌರವ ಉಪನ್ಯಾಸಕ ಡಾ.ಸಂಗಮೇಶ ಕಲ್ಯಾಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಆಶಯ ನುಡಿ ಹೇಳಿದರು. ರಾಮಕೃಷ್ಣ ಬುದ್ನಿ ವಂದಿಸಿದರು. ಪ್ರತಿಷ್ಠಾನದ ಸಿದ್ದು ಕಾಳಗಿ, ಉಪಾಧ್ಯಕ್ಷ ಡಾ.ಸಿದ್ದು ದಿವಾನ, ಖಜಾಂಚಿ ರುದ್ರಪ್ಪ ಜಾಡರ, ಕಾರ್ಯದರ್ಶಿ ಟಿ.ಕೆ.ಹಂಚಾಟೆ ಸೇರಿದಂತೆ ಅಪಾರ ಶಿಷ್ಯ ಬಳಗ, ಅಭಿಮಾನಿಗಳು ಉಪಸ್ಥಿತರಿದ್ದರು.