ಸಾರಾಂಶ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಷಗಾಳಿ ಹಬ್ಬುವ ಆತಂಕ । ಸಂಘಟಿತ ಹೋರಾಟಕ್ಕೆ ರೂಪುರೇಷೆಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಷಗಾಳಿಯ ದುರ್ನಾತದಿಂದಾಗಿ ತಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ ಎಂದು ಆತಂಕಗೊಂಡ ಈ ಭಾಗದ ಹತ್ತಾರು ಹಳ್ಳಿಗಳ ಜನರು ಸಂಘಟಿತ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.ಪರಿಸರ ಹಾಗೂ ಜನರ ಆರೋಗ್ಯಕ್ಕೆ ಮಾರಕವಾಗದ ಕಾರ್ಖಾನೆಗಳ ಸ್ಥಾಪಿಸುವುದಾಗಿ ಹೇಳಿದ್ದ ಸರ್ಕಾರಗಳು, ಈಗ ಅಪಾಯಕಾರಿ ಕಾರ್ಖಾನೆಗಳ ಸ್ಥಾಪಿಸುವ ಮೂಲಕ ಜನಜೀವನಕ್ಕೆ ಕುತ್ತು ತಂದಿಟ್ಟಿದ್ದಾರೆ. ತಮ್ಮದೇನೋ ಆಯ್ತು, ಇನ್ನು ಮುಂದಿನ ಪೀಳಿಗೆಗಾದರೂ ಒಳಿತಾಗಲಿ ಎಂಬ ಸದುದ್ದೇಶದಿಂದ ಮಠಾಧೀಶರು, ಪಕ್ಷಾತೀತ ರಾಜಕಾರಣಿಗಳು, ಪರಿಸರವಾದಿಗಳು, ಪ್ರಜ್ಞಾವಂತರು, ಯುವಕರ ತಂಡಗಳು ಕೆಮಿಕಲ್ ಕಂಪನಿಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ರೂಪುರೇಷೆ ಹೆಣೆಯುತ್ತಿವೆ. ಜನಜಾಗೃತಿ ಹಾಗೂ ಕಾನೂನಾತ್ಮಕವಾಗಿ ಹೋರಾಟದ ಮೂಲಕ ಕೆಮಿಕಲ್ ತ್ಯಾಜ್ಯ ಕಂಪನಿಗಳ ವಿರುದ್ಧ ಜನರ ಚಳವಳಿಯ ಕೂಗು ಪ್ರತಿಧ್ವನಿಸುತ್ತಿದೆ.
ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದ ಭೂಸ್ವಾಧಿನ ವೇಳೆಯಲ್ಲಿ ನಾನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷನಾಗಿದ್ದೆ. ಈ ಪ್ರದೇಶದಲ್ಲಿ ಕೈಗಾರಿಕೆಗಳು ಬಂದರೆ ನಮ್ಮ ಭಾಗದ ಜನರಿಗೆ ಉತ್ತಮ ಭವಿಷ್ಯವಿರುತ್ತದೆ ಎಂಬ ಸದುದ್ದೇಶದಿಂದ ಕೆಲ ರೈತರಿಗೆ ಮನವೊಲಿಸಿದ್ದು ಉಂಟು. ಉದ್ಯೋಗಾವಕಾಶ ಹೆಚ್ಚಿರುವ ಜವಳಿ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಸ್ಥಾಪಿಸಿ ಎಂದು ಹೇಳಿದ್ದೆವು. ಆದರೆ, ಅವುಗಳ ಬದಲು ಜನರ ಉದ್ಯೋಗಾವಕಾಶವಿಲ್ಲದ ಮತ್ತು ಆರೋಗ್ಯ ಮೇಲೆ ಅಡ್ಡಪರಿಣಾಮ ಬೀರುವ ಕೈಗಾರಿಕೆಗಳು ಸ್ಥಾಪಿಸಿ, ಇಲ್ಲಿನ ರೈತರಿಗೆ ಮತ್ತು ಜನರಿಗೆ ಮೋಸ ಮಾಡಿದ್ದಂತೂ ಸುಳ್ಳಲ್ಲ. ಇದರ ವಿರುದ್ಧ ಜಿಲ್ಲೆಯ ಮತ್ತು ತೆಲಂಗಾಣ ರಾಜ್ಯದ ಸ್ವಾಮೀಜಿಗಳು, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ವ ಪಕ್ಷದ ಮುಖಂಡರು ಪಕ್ಷಾತೀತವಾದ ಹೋರಾಟಕ್ಕೆ ಸಿದ್ಧರಾಗುತ್ತಿದ್ದೇವೆ.ಶ್ರೇರಣಿಕಕುಮಾರ ದೋಕಾ, ಅಧ್ಯಕ್ಷ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಯಾದಗಿರಿ.
ಈ ಕೈಗಾರಿಕೆ ಪ್ರದೇಶವು ನಮ್ಮ ಗ್ರಾಮದಿಂದ 5 ಕಿ.ಮೀ ಅಂತರದಲ್ಲಿದೆ. ಇಲ್ಲಿನ ರಾಸಾಯನಿಕ ಕಂಪನಿಗಳು ಹೊರ ಹಾಕುವ ವಿಷಗಾಳಿಯು ಗ್ರಾಮಸ್ಥರಿಗೆ ಅನೇಕ ರೋಗಗಳನ್ನು ತಂದೊಡ್ಡಿದೆ. ನಿತ್ಯ ರಾತ್ರಿ ವೇಳೆ ಬರುವ ಈ ಕೆಟ್ಟ ವಾಸನೆಯಿಂದಾಗಿ ನಮ್ಮೂರಿನ ಮಕ್ಕಳಿಗೆ ಮತ್ತು ವೃದ್ಧರಿಗೆ ಉಸಿರಾಟ ತೊಂದರೆಯಾಗುತ್ತಿದೆ. ಇಲ್ಲಿನ ಕೈಗಾರಿಕೆಗಳು ಇಲ್ಲಿನ ಜನರಿಗೆ ಉದ್ಯೋಗವು ನೀಡದಿದ್ದರೂ ಪರವಾಗಿಲ್ಲ. ವಿಷಗಾಳಿ ನೀಡುತ್ತಿರುವ ಕೈಗಾರಿಕೆಗಳನ್ನು ಇಲ್ಲಿಂದ ತೆಗೆಯುವ ಕಾರ್ಯ ಸರಕಾರವು ಅತಿ ತುರ್ತುತಾಗಿ ಮಾಡಬೇಕಾಗಿದೆ.
ಶರಣಬಸವಸ್ವಾಮಿ ಹಿರೇಮಠ, ಬದ್ದೇಪಲ್ಲಿ.ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿರುವ ರಾಸಾಯನಿಕ ಕಂಪನಿಗಳು ಪರಿಸರಕ್ಕೆ ಹಾನಿಯಾಗವ ವಿಷ ಅನಿಲವನ್ನು ಮತ್ತು ಘನ ತ್ಯಾಜ್ಯವು ಮಣ್ಣಿಗೆ ಮತ್ತು ನೀರಿಗೆ ನೇರವಾಗಿ ಬಿಡುತ್ತಿರುವುದರಿಂದ ಗಾಳಿಯ ನೀರಿನ ಜೊತೆ ಭೂಮಾಲಿನ್ಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಮತ್ತು ಪರಿಸರ ಮಾಲಿನ್ಯ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೂ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ, ಜಿಲ್ಲೆಯ ಪರಿಸರವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಕೈಗೊಳ್ಳುವ ಹೋರಾಟಕ್ಕೆ ನಮ್ಮ ವರ್ತಕರು ಬೆಂಬಲ ನೀಡುವುದರ ಜತೆಗೆ ಹೋರಾಟಕ್ಕೆ ಇಳಿಯುತ್ತೇವೆ.
ವೆಂಕಟೇಶ ಪುರಿ, ವರ್ತಕ, ಸೈದಾಪುರ.