ಕನ್ನಡಕ್ಕಾಗಿ ನಡೆಯುತ್ತಿರುವ ಓಟ ಯಶಸ್ವಿಯಾಗಲಿ: ಚುಂಚನಗಿರಿ ಶ್ರೀ

| Published : Dec 18 2024, 12:49 AM IST

ಕನ್ನಡಕ್ಕಾಗಿ ನಡೆಯುತ್ತಿರುವ ಓಟ ಯಶಸ್ವಿಯಾಗಲಿ: ಚುಂಚನಗಿರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ಸಕ್ಕರೆ ನಗರಿ ಮಂಡ್ಯ ಸಜ್ಜಾಗುತ್ತಿದೆ. ಸಮ್ಮೇಳನದ ಪ್ರಚಾರಕ್ಕಾಗಿ ಮ್ಯಾರಥಾನ್ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿ ನೆರೆದಿರುವ ಜನತೆ ನೋಡಿದರೆ ಖುಷಿ ಆಗುತ್ತಿದೆ. ಇಡೀ ರಾಜ್ಯದ ಜನ ಮಂಡ್ಯದ ಕಡೆ ತಿರುಗಿ ನೋಡುವಂತೆ ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಸಮ್ಮೇಳನವನ್ನು ಯಶಸ್ವಿಗೆ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವಕ್ಷವಾಗುತ್ತದೆ ಎಂಬಂತೆ ಕನ್ನಡಕ್ಕಾಗಿ ನಡೆಯುತ್ತಿರುವ ಓಟ ಯಶಸ್ವಿಯಾಗಲಿ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾರೈಸಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯತ್ತಿರುವ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆಯು ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷವಾದ ಕಾರ್ಯಕ್ರಮವಾಗಿದೆ. ಈ ಮೂಲಕ ಎಲ್ಲಾ ಕನ್ನಡಿಗರು ಒಂದಾಗಬೇಕು ಎಂದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ಸಕ್ಕರೆ ನಗರಿ ಮಂಡ್ಯ ಸಜ್ಜಾಗುತ್ತಿದೆ. ಸಮ್ಮೇಳನದ ಪ್ರಚಾರಕ್ಕಾಗಿ ಮ್ಯಾರಥಾನ್ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿ ನೆರೆದಿರುವ ಜನತೆ ನೋಡಿದರೆ ಖುಷಿ ಆಗುತ್ತಿದೆ. ಇಡೀ ರಾಜ್ಯದ ಜನ ಮಂಡ್ಯದ ಕಡೆ ತಿರುಗಿ ನೋಡುವಂತೆ ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಸಮ್ಮೇಳನವನ್ನು ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಶ್ರೀವಿನಯ್ ಗುರೂಜಿ ಮಾತನಾಡಿ, ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಮಂಡ್ಯ ಜಿಲ್ಲೆಯು ಕನ್ನಡದ ಉಳಿವಿಗೆ ಸಾಕ್ಷಿಯಾಗಲಿ. ಕನ್ನಡ ನೆಲ, ಜಲ, ಭಾಷೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕಲೆಯೊಂದಿಗೆ ಕನ್ನಡವನ್ನು ಬೆಳೆಸಿ ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಮಾತನಾಡಿ, 3 ದಿನಗಳ ಕಾಲ ಕನ್ನಡ ಸಮ್ಮೇಳನಕ್ಕೆ ಇವತ್ತಿನ ಕನ್ನಡದ ಓಟ ಸಮ್ಮೇಳನದ ಯಶಸ್ವಿ ಓಟವಾಗಿದೆ. ಎಲ್ಲರೂ ಮಂಡ್ಯದ ಕನ್ನಡ ಹಿರಿಮೆ ಹಾಗೂ ಕನ್ನಡದ ಅಭಿಮಾನ ತೋರ್ಪಡಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಗಣ್ಯರನ್ನು ಸ್ವಾಗತಿಸಿದರು. ಈ ವೇಳೆ ಚಿತ್ರ ನಟರಾದ ಡಾಲಿ ಧನಂಜಯ್, ನೀನಾಸಂ ಸತೀಶ್, ನಟಿ ಸಪ್ತಮಿಗೌಡ, ಬಿಜಿಎಸ್ ಮಠದ ಪುರುಷೋತ್ತಮ ಗುರೂಜಿ, ಶಾಸಕರಾದ ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ರವಿಕಾಂತೆಗೌಡ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಶಿವಾನಂದಮೂರ್ತಿ, ನಗರಸಭೆ ಅಧ್ಯಕ್ಷ ಎಂ.ಬಿ.ಪ್ರಕಾಶ್, ಉಪಾಧ್ಯಕ್ಷ ಅರುಣ್ ಕುಮಾರ್, ಮೈಸೂರು ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಡಾ ಅಧ್ಯಕ್ಷ ನಯೀಮ್, ಡಾ. ಕೃಷ್ಣ, ಮುಖಂಡ ವೆಂಕಟರಮಣೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.