ಕನ್ನಡಪ್ರಭ ವಾರ್ತೆ ​ಮುದ್ದೇಬಿಹಾಳ

ತಾಲೂಕಿನ ಯಾವುದೇ ಹಳ್ಳಿಗಳಲ್ಲಿ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಪಿಡಿಒಗಳು ನೋಡಿಕೊಳ್ಳಬೇಕು. ಕೆಲಸದಲ್ಲಿ ಬೇಜಾಬ್ದಾರಿತನ ತೋರಿದರೆ ಅವರ ವಿರುದ್ಧ ಶಿಸ್ತು ಕ್ರಮ ಅನಿವಾರ್ಯ ಎಂದು ಕೆಎಸ್ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಎಚ್ಚರಿಸಿದ್ದಾರೆ.

​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆಗಳ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ಪಿಡಿಒಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುದ್ದೇಬಿಹಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟಿ, ನಿಡಗುಂದಿ ಹಾಗೂ ನಾಲತವಾಡ ಪಟ್ಟಣಕ್ಕೆ ಆದ್ಯತೆ ನೀಡಿಬೇಕು. ಅಲ್ಲದೇ ಮೂಕಿಹಾಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಬರುವ ಶಿವಪುರ, ಹಗರಗೊಂಡ, ನಾಗೂರ ಗ್ರಾಮಗಳಲ್ಲಿ ಟ್ಯಾಂಕ್ ತುಂಬುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಶಾಸಕರು, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಿದರು. ಇನ್ನು ಮಿಣಜಗಿ ಗ್ರಾಮದ ಜಿಎಂಎಂ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಸೂಚಿಸಿದರು. ಜಿವಿಪಿಆರ್ ಕಂಪನಿಗೂ ಕೆಲಸದ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲು ತಿಳಿಸಿದರು.

​ಗ್ರಾಮವಾರು ಸಮಸ್ಯೆಗಳ ವಿವರ:

​ಅಡವಿ ಸೋಮನಾಳ ಗ್ರಾಪಂ: ಅಡವಿ ಹುಲಗಬಾಳ ತಾಂಡಾದಲ್ಲಿ ಕುಡಿಯುವ ನೀರು ಯೋಗ್ಯವಾಗಿಲ್ಲ. ಅಲ್ಲಿಗೆ ತಕ್ಷಣ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಲು ಕುಡಿಯುವ ಅಧಿಕಾರಿ ಆರ್.ಎಸ್.ಹಿರೇಗೌಡರ ಸೂಚಿಸಲಾಯಿತು.


ಚವನಭಾವಿ ಗ್ರಾಮದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದನ್ನು ಪಿಡಿಒ ನಿರ್ಮಲಾ ತೋಟದ ಸಭೆಯ ಗಮನಕ್ಕೆ ತಂದಾಗ, ಚವನಭಾವಿ ಗ್ರಾಮದಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲು ಶಾಸಕರು ತಾಪಂ ಇಒ, ಕುಡಿಯುವ ನೀರು ಅಧಿಕಾರಿ ಶಾಸಕ ಸೂಚಿಸಿದರು.

​ಮೂಕಿಹಾಳ ಮತ್ತು ತಂಗಡಗಿ ಯೋಜನೆ: ಮೂಕಿಹಾಳ ಬಹುಹಳ್ಳಿ ಯೋಜನೆಯ ನೀರು ವಾಸನೆ ಬರುತ್ತಿರುವ ಬಗ್ಗೆ ಪಿಡಿಒ ಸಭೆಯಲ್ಲಿ ದೂರಿದರು. ತಂಗಡಗಿ ಬಹುಹಳ್ಳಿ ನೀರು ಸರಿಯಾಗಿ ಸರಬರಾಜಾಗುತ್ತಿಲ್ಲ ಎಂದು ಪಿಡಿಒ ಮಾಲಾಶ್ರೀ ಮಾಹಿತಿ ನೀಡಿದರು. ಈ ಎಲ್ಲ ಸಮಸ್ಯೆಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಲು ಶಾಸಕರು ಆದೇಶಿಸಿದರು.

​ಬಸರಕೋಡ ಬಹುಹಳ್ಳಿ ಯೋಜನೆ: ನಿರ್ವಹಣೆ (ಮೇಂಟೆನೆನ್ಸ್) ಸರಿಯಿಲ್ಲದ ಕಾರಣ ನೀರು ಹೊಲಗಳಿಗೆ ಪೋಲಾಗುತ್ತಿದೆ. ಕೂಡಲೇ ಹೊಸ ಟೆಂಡರ್ ಕರೆದು ವ್ಯವಸ್ಥೆ ಸರಿಪಡಿಸಲು ಸೂಚಿಸಲಾಯಿತು.

​ಹರನಾಳ: ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳಿಂದ ನೀರಿನ ಸರಬರಾಜಿಗೆ ಅಡಚಣೆಯಾಗುತ್ತಿದ್ದು, ಪಿಡಿಒಗಳು ಈ ಬಗ್ಗೆ ಕೂಡಲೇ ಗಮನಹರಿಸಿ ಸರಬರಾಜು ಸುಗಮಗೊಳಿಸಬೇಕು ಸೂಚಿಸಿದರು.

​ಕವಡಿಮಟ್ಟಿ ಮತ್ತು ಸರೂರ ತಾಂಡಾ: ಕವಡಿಮಟ್ಟಿ ಗ್ರಾಪಂ ವ್ಯಾಪ್ತಿಯ ಸರೂರ ತಾಂಡಾದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಹೊಸ ಕೊಳವೆ ಬಾವಿ ಕೊರೆಯಿಸುವ ಅಗತ್ಯವಿದೆ ಎಂದು ಪಿಡಿಒ ಕೆ.ಎಚ್.ಕುಂಬಾರ ತಿಳಿಸಿದರು. ಸರೂರ ತಾಂಡದ ನೀರಿನ ಸಮಸ್ಯೆಗೆ ಇದಕ್ಕೆ ಶಾಸಕರು ತಕ್ಷಣ ಸ್ಪಂದಿಸಿ ಕ್ರಮಕ್ಕೆ ಸೂಚಿಸಿದರು.

​ಬಹುಹಳ್ಳಿ ಯೋಜನೆಗಳ ಅಡಚಣೆ: ರಕ್ಕಸಗಿ, ಬಂಗಾರಗುಂಡ, ಕಪನೂರ, ಬಲದಿನ್ನಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹಾಗೂ ನಾಗಬೇನಾಳ ಮತ್ತು ವಿರೇಶನಗರ ಗ್ರಾಮಗಳಿಗೆ ನೀರು ಸರಿಯಾಗಿ ತಲುಪದ ಬಗ್ಗೆ ಚರ್ಚಿಸಲಾಯಿತು. ಹಿರೇಮುರಾಳ ಗ್ರಾಪಂ ವ್ಯಾಪ್ತಿಯ ಜಲಪೂರದಲ್ಲಿ ವಾಟರ್ ಟ್ಯಾಂಕ್ ರಿಪೇರಿ ಹಾಗೂ ಗೋನಾಳ ಗ್ರಾಮದ ಓವರ್ ಹೆಡ್ ಟ್ಯಾಂಕ್ ಆಸ್ತಿ ನೀಡಿ ಸಮಸ್ಯೆ ಸರಿಪಡಿಸಲು ಸೂಚಿಸಿದರು.

ಮುದೂರ ಗ್ರಾಮದಲ್ಲಿ ನೀರಿನ ಟ್ಯಾಂಕ್ ಬಿರುಕು ಬಿಟ್ಟಿದ್ದು ಪಿಡಿಒ ಸಭೆಗೆ ತಿಳಿಸಿ ತಕ್ಷಣವೇ ಅನಾಹುತವಾಗುವ ಮೊದಲು ಕ್ರಮ ಕೈಗೊಳ್ಳಲು ತಿಳಿಸಿದರು.

​ಸ್ವಚ್ಛತೆ ಮತ್ತು ಆಡಳಿತ ವೈಖರಿ: ನಮ್ಮ ತಾಲೂಕಿನ ಹಳ್ಳಿಗಳು ಮೈಸೂರು ನಗರದಂತೆ ಸ್ವಚ್ಛವಾಗಿರಬೇಕು. ಬಳಬಟ್ಟಿ, ವಡವಡಗಿ, ದೇವೂರ ಹಾಗೂ ಯರಝರಿ ಗ್ರಾಮಗಳಲ್ಲಿ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಳ್ಳಿ ಎಂದ ಶಾಸಕರು, ಗ್ರಾಪಂ ಆಸ್ತಿಗಳನ್ನು ಸ್ವಂತ ಆಸ್ತಿಯಂತೆ ರಕ್ಷಿಸಬೇಕು ಎಂದು ಪಿಡಿಒಗಳಿಗೆ ಕಿವಿಮಾತು ಹೇಳಿದರು. ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಅಧಿಕಾರಿಗಳು ಪತ್ರ ಬರೆಯುವವರೆಗೆ ಕಾಯಬೇಡಿ, ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಛಾಟಿ ಬೀಸಿದರು. ಆಲೂರು ಮತ್ತು ಯರಗಲ್ಲ ಗ್ರಾಮಗಳ ಆರ್‌ಒ ಪ್ಲಾಂಟ್ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಲು ತಿಳಿಸಿದರು.

​ಕೃಷಿ ಮತ್ತು ಇತರೆ ವಿಷಯಗಳು:

ಮಳೆ ಕೊರತೆಯಿರುವ ಕಾರಣ ರೈತರಿಗೆ ಬೀಜ ಮತ್ತು ಗೊಬ್ಬರದ ಸಮಸ್ಯೆಯಾಗದಂತೆ ಕೃಷಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಇ-ಸ್ವತ್ತು ವಿಳಂಬದ ಬಗ್ಗೆ ಸಾರ್ವಜನಿಕರ ಆಗ್ರಹವಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು. ಹುಲ್ಲೂರ-ಜಟ್ಟಗಿ ತಾಂಡಾದಲ್ಲಿನ ಸರಕಾರಿ ಜಾಗದ ಅತಿಕ್ರಮಣ ತೆರವಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದರು.

ಮೈಸೂರು ಸೋಪ್ಸ್ ಸಂಸ್ಥೆ 580 ಕೋಟಿ ರೂ. ಲಾಭದಲ್ಲಿದೆ ಎಂಬ ಹೆಮ್ಮೆಯ ವಿಷಯವನ್ನು ಶಾಸಕ ಹಂಚಿಕೊಂಡರು.

ಸಭೆಯಲ್ಲಿ ತಹಸೀಲ್ದಾರ್ ಕೀರ್ತಿ ಚಾಲಕ, ತಾಪಂ ಇಒ ಸಂಗನಗೌಡ ಬಿರಾದಾರ, ತಾಳಿಕೋಟಿ ಇಒ ಅನಸೂಯಾ ಚಲವಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಆರ್.ಎಸ್.ಹಿರೇಗೌಡರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ಗಳು ಹಾಗೂ ತಾಲೂಕಿನ ವಿವಿಧ ಪಂಚಾಯತಿ ಪಿಡಿಒಗಳು ಹಾಜರಿದ್ದರು.