ಕವಿ ಸಮಾಜದ ನೋವುಗಳಿಗೆ ಕವಿತೆಗಳು ಮೂಲಕ ಸ್ಪಂದಿಸಬೇಕು. ಬದುಕಿನ ಸೌಂದರ್ಯ ಮತ್ತು ಜೀವನ ಮೌಲ್ಯಗಳನ್ನು ಪ್ರತಿಪಾದಿಸಬೇಕು.

ದಸರಾ ಕವಿಗೋಷ್ಠಿ ಉದ್ಘಾಟಿಸಿದ ಸಾಹಿತಿ

ಕನ್ನಡಪ್ರಭ ವಾರ್ತೆ ಗದಗ

ಕವಿ ಸಮಾಜದ ನೋವುಗಳಿಗೆ ಕವಿತೆಗಳು ಮೂಲಕ ಸ್ಪಂದಿಸಬೇಕು. ಬದುಕಿನ ಸೌಂದರ್ಯ ಮತ್ತು ಜೀವನ ಮೌಲ್ಯಗಳನ್ನು ಪ್ರತಿಪಾದಿಸಬೇಕು. ಕವಿ ಹೃದಯದಲ್ಲಿ ಸಂವೇದನೆ ಇರಬೇಕು. ಕವಿತೆ ಬದುಕಿನ ಸತ್ಯವನ್ನು ಪ್ರತಿಪಾದಿಸಬೇಕು ಎಂದು ಸಾಹಿತಿ ಡಾ. ಕಲ್ಲೇಶ ಮೂರಶಿಳ್ಳಿನ ತಿಳಿಸಿದರು.

ನಗರದ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕವಿಗೋಷ್ಠಿ ಕವಿಗಳ ಪ್ರದರ್ಶನವಲ್ಲ. ಭಾವನೆಗಳ ಕೊಡುಕೊಳ್ಳುವಿಕೆ. ಸಹೃದಯನಲ್ಲಿ ಹೊಸ ಅನುಭವವನ್ನು, ಚಿಂತನೆಯನ್ನು ಹುಟ್ಟುಹಾಕಿದರೆ ಕವಿಯ ಶ್ರಮ ಸಾರ್ಥಕವಾಗುತ್ತದೆ ಎಂದರು.

ಸಾಹಿತಿ ಭಾರತಿ ಮೋಹನ ಕೋಟಿ ಮಾತನಾಡಿ, ಅನುಭವ ಮತ್ತು ಅನುಭಾವದಿಂದ ರಚಿಸಿದ ಕವಿತೆಗಳನ್ನು ಜನರ ಮುಂದಿಡಲು ಕವಿಗೋಷ್ಠಿ ಅಗತ್ಯ. ಒಳಗಿನ ಅರಿವು ಮತ್ತು ಹೊರಗಿನ ವಾಸ್ತವವನ್ನು ಮಿಳಿತ ಮಾಡಿಕೊಂಡು ಕಾವ್ಯ ರಚನೆಯಾಗುತ್ತದೆ. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಲು ಕವಿ ಕವಿತೆಯನ್ನು ಮಾಧ್ಯಮವಾಗಿ ಬಳಸಬೇಕು. ಸಕಾರಾತ್ಮಕ ಮನೋಭಾವ ಕವಿಗಿರಬೇಕು. ಕವಿ ಮತ್ತು ಕವಿತೆ ಸಮಾಜಮುಖಿಯಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಧಾವಂತದಲ್ಲಿ ಕವಿತೆ ಹುಟ್ಟುವುದಿಲ್ಲ. ದೀರ್ಘ ಅವಧಿಯ ಚಿಂತನೆ ಮತ್ತು ತಾಳ್ಮೆ ಇದ್ದಾಗ ಉತ್ತಮ ಕವಿತೆ ರಚನೆಯಾಗಲು ಸಾಧ್ಯ. ಕವಿಗೋಷ್ಠಿ ಕವಿಗಳಿಗೆ ಕಾರ್ಯಾಗಾರ ಇದ್ದ ಹಾಗೆ. ಇತರರ ಕವಿತೆಗಳನ್ನು ಗಮನಿಸಿಬೇಕು. ಓದುವ ಶೈಲಿ, ಬಳಸಿದ ಪದಗಳು, ರೂಪಕಗಳು, ಭಾವನೆಗಳನ್ನು ಅರಿಯಬೇಕು. ಇದು ಹೊಸ ಕವಿತೆಗಳ ಉಗಮಕ್ಕೆ ಬುನಾದಿಯನ್ನು ಒದಗಿಸುತ್ತದೆ ಎಂದರು.

ಕವಿಗೋಷ್ಠಿಯಲ್ಲಿ ಮಂಜುಳಾ ವೆಂಕಟೇಶಯ್ಯ, ಅನಸೂಯಾ ಮಿಟ್ಟಿ, ಮಮತಾ ದೊಡ್ಡಮನಿ, ನೀಲಮ್ಮ ಅಂಗಡಿ, ಶಕುಂತಲಾ ಗಿಡ್ನಂದಿ, ಅಕ್ಕಮಹಾದೇವಿ ಹಾರೋಗೇರಿ, ಕಾವ್ಯ ಅಂಗಡಿ, ಬಸವರಾಜ ವಾರಿ, ಜಯಶ್ರೀ ಅಂಗಡಿ, ಶಿಲ್ಪಾ ಮ್ಯಾಗೇರಿ, ಚಂದ್ರಕಲಾ ಇಟಗಿಮಠ, ಬಸವರಾಜ ನೆಲಜೇರಿ, ಭಾಗ್ಯಶ್ರೀ ಹುರಕಡ್ಲಿ, ರೇಣುಕಾ ಪೂಜಾರ, ಸೌಮ್ಯ ಹಿರೇಮಠ, ಬೂದೇಶ ಮಜ್ಜಿಗುಡ್ಡ, ಮಹೇಶ ಕರಿ, ಶಾಂತಾ ಅಂಗಡಿ, ಜೆ.ಎ. ಪಾಟೀಲ, ಜಯಶ್ರೀ ಅಂಗಡಿ ಮೊದಲಾದ ಕವಿಗಳು ಕವನ ವಾಚಿಸಿದರು.

ಅಜಿತ ಘೋರ್ಪಡೆ, ಸುರೇಶ ಕುಂಬಾರ, ಮೋಹನ ಕೋಟಿ, ಡಿ.ಜಿ. ಕುಲಕರ್ಣಿ, ದೇವರಾಜ ಹಿರೇಮಠ, ಸಿ.ಎಂ. ಮಾರನಬಸರಿ, ಯು.ಎಸ್. ಕಣವಿ, ರತ್ನಾ ಪುರಂತರ, ಪಿ.ವಿ. ಇನಾಮದಾರ, ಶಶಿಕಾಂತ ಕೊರ್ಲಹಳ್ಳಿ, ಬಿ.ಬಿ. ಹೊಳಗುಂದಿ, ಪ್ರ.ತೋ. ನಾರಾಯಣಪೂರ, ಕೆ.ಎಸ್. ಗುಗ್ಗರಿ, ರಮೇಶ ಹಂಚಿನಾಳ ಮೊದಲಾದವರು ಇದ್ದರು. ಜಯಶ್ರೀ ಅಂಗಡಿ ನಿರೂಪಿಸಿದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.