ಕುಮಟಾ: ಸಮಾಜದಲ್ಲಿ ಶಾಶ್ವತ ಸಕಾರಾತ್ಮಕ ಪರಿಣಾಮ ಉಂಟುಮಾಡುವ ಸೇವಾ ಚಟುವಟಿಕೆಯನ್ನು ಹಮ್ಮಿಕೊಳ್ಳುವ ಮೂಲಕ ರೋಟರಿಯ ಧ್ಯೇಯವನ್ನು ಸಾಕಾರಗೊಳಿಸಬೇಕು ಎಂದು ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಡಾ. ಜೋರ್ಸನ್ ಫರ್ನಾಂಡಿಸ್ ಹೇಳಿದರು.
ನಾದಶ್ರೀ ಕಲಾಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರೋಟರಿ ಕ್ಲಬ್ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಮುಖ್ಯ ಅತಿಥಿ ಕರ್ನಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ರಮೇಶ ವೈದ್ಯ ಅವರು ರೋಟರಿ ವರ್ಷದ ಧ್ಯೇಯವಾಕ್ಯ ಅನಾವರಣಗೊಳಿಸಿ ಮಾತನಾಡಿ, ಸಮಾಜ ಸೇವೆಯಲ್ಲಿ ರೋಟರಿಯ ಪಾತ್ರ ಮಾದರಿಯಾಗಿದೆ. ಕುಮಟಾ ರೋಟರಿ ಕ್ಲಬ್ ಸೇವಾ ಕಾರ್ಯಗಳಿಗೆ ಕರ್ನಾಟಕ ಬ್ಯಾಂಕ್ ಸದಾ ಬೆಂಬಲ ನೀಡಲಿದೆ. ಮಹಿಳಾ ಸಬಲೀಕರಣ ಕಾರ್ಯಕ್ಕಾಗಿ ''''''''ಪಿಂಕ್ ಆಟೋ'''''''' ಕೊಡುತ್ತೇವೆ ಎಂದರು.ರೋಟರಿ ಜಿಲ್ಲಾ ಝೋನಲ್ ಕೋ-ಆರ್ಡಿನೇಟರ್ ಜಿತೇಂದ್ರ ವಿ. ತನ್ನಾ ಮಾತನಾಡಿ, ಒಗ್ಗಟ್ಟು, ಸಮರ್ಪಣೆ ಮತ್ತು ಸೇವಾ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಿದರೆ ರೋಟರಿ ಮತ್ತಷ್ಟು ಎತ್ತರಕ್ಕೇರಲಿದೆ ಎಂದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ. ಸುಮನ್ ಹೆಗಡೆ ಮಾತನಾಡಿದರು. ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಸಿ.ಎ. ವಿನಾಯಕ ಎಸ್. ಹೆಗಡೆ, ಕಾರ್ಯದರ್ಶಿಯಾಗಿ ಗುರುರಾಜ ಶೆಟ್ಟಿ, ಖಜಾಂಚಿಯಾಗಿ ಗಣೇಶ ನಾಯ್ಕ, ಆನ್ಸ್ ತಂಡದ ಅಧ್ಯಕ್ಷೆಯಾಗಿ ಸಂಧ್ಯಾ ಹೆಗಡೆ, ಕಾರ್ಯದರ್ಶಿಯಾಗಿ ರಶ್ಮಿ ಶೆಟ್ಟಿ, ಖಜಾಂಚಿಯಾಗಿ ಉಷಾ ಗಣೇಶ ಹಾಗೂ ನೂತನ ನಿರ್ದೇಶಕರು, ಇನ್ನಿತರರು ಅಧಿಕಾರ ಸ್ವೀಕರಿಸಿದರು.ಡಿ.ಜಿ.ಎನ್. ಅಶೋಕ ನಾಯ್ಕ ಅವರು ದಿ. ವಿಷ್ಣು ಕಾಮತ ಸ್ಮರಣಾರ್ಥ ಸ್ಥಾಪಿಸಿದ ಅತ್ಯುತ್ತಮ ರೊಟೇರಿಯನ್ ಪ್ರಶಸ್ತಿಯನ್ನು ಮಂಜುನಾಥ ಅಂಬಿಗ ಅವರಿಗೆ ನೀಡಲಾಯಿತು. 30 ಪೌರಕಾರ್ಮಿಕರಿಗೆ ರೇನ್‌ಕೋಟ್ ವಿತರಿಸಲಾಯಿತು.
ಸಂಧ್ಯಾ ಹೆಗಡೆ ಪ್ರಾರ್ಥಿಸಿದರು. ಕಿರಣ ನಾಯಕ ಸ್ವಾಗತಿಸಿದರು. ನಿಖಿಲ್ ಕ್ಷೇತ್ರಪಾಲ ವಾರ್ಷಿಕ ವರದಿ ಮಂಡಿಸಿದರು. ಜೈ ವಿಠ್ಠಲ ಕುಬಾಲ, ಡಾ. ಶ್ರೀದೇವಿ ಭಟ್ ನಿರೂಪಿಸಿದರು.
ಕಾರ್ಯದರ್ಶಿ ಗುರುರಾಜ ಶೆಟ್ಟಿ ವಂದಿಸಿದರು. ವ್ಯಾಸ್ ಕಾಮತ್, ಡಾ. ವಾಗೀಶ ಭಟ್, ವಿಶಾಲ್ ಶೇಟ್, ಯೋಗೇಶ್ ಕೊಡ್ಕಣಿ ನಿರ್ವಹಿಸಿದರು.