ಸಾರಾಂಶ
ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳು ಮತ್ತು ಷಡ್ಯಂತ್ರದ ವಿರುದ್ಧ ಇಲ್ಲಿನ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಷಡ್ಯಂತ್ರ, ಪಾವಿತ್ರ್ಯ ಹಾಳು ಮಾಡಲು ಹೊರಟಿರುವುದು ತೀವ್ರ ಖಂಡನೀಯ. ಬೇರೆ ರಾಜ್ಯದಿಂದಲೂ ಧರ್ಮಸ್ಥಳದ ಹೆಸರು ಹಾಳು ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.ಎಸ್‌ಐಟಿ ತನಿಖೆಯ ನೆಪದಲ್ಲಿ ಧರ್ಮಸ್ಥಳದಲ್ಲಿ ಗುಂಡಿ ತೋಡಲಾಗಿದೆ. ಧರ್ಮಸ್ಥಳ ಕ್ಷೇತ್ರದಿಂದ ಹಲವಾರು ಅಭಿವೃದ್ಧಿ ಕೆಲಸ ಆಗುತ್ತಿದೆ. ಧರ್ಮಸ್ಥಳದ ಹೆಸರನ್ನು ಹಾಳು ಮಾಡುವ ಕೆಲಸ ಮಾಡಬಾರದು. ಕೊಲೆಯಾದ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಆಗ್ರಹವೂ ಆಗಿದೆ. ಆದರೆ ಹೋರಾಟದ ಸಂದರ್ಭದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರವಾದ ಧರ್ಮಸ್ಥಳದ ಪಾವಿತ್ರ್ಯತೆಗೆ ಯಾವುದೇ ರೀತಿಯ ಧಕ್ಕೆ, ಷಡ್ಯಂತ್ರ ಮತ್ತು ಅಪಪ್ರಚಾರ ಆಗಬಾರದು ಎನ್ನುವುದು ನಮ್ಮ ಪಕ್ಷದ ಒತ್ತಾಯವಾಗಿದೆ ಎಂದರು.
ವಕೀಲ ಮತ್ತು ಬಿಜೆಪಿ ಮುಖಂಡ ಧನ್ಯಕುಮಾರ ಜೈನ್ ಮಾತನಾಡಿ, ಹನ್ನೆರಡು ವರ್ಷಗಳಿಂದ ಧರ್ಮಸ್ಥಳದಲ್ಲಿ ನಾನಾ ರೀತಿಯ ಅಪಪ್ರಚಾರ, ಷಡ್ಯಂತ್ರ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಶ್ರೀ ಕ್ಷೇತ್ರ, ಧರ್ಮಾಧಿಕಾರಿ ಅವರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಪುಣ್ಯಕ್ಷೇತ್ರದ ಪಾವಿತ್ರ್ಯತೆಗೆ ಯಾವುದೇ ಕಾರಣಕ್ಕೂ ಧಕ್ಕೆ ಆಗಲು ಬಿಡಬಾರದು. ಧರ್ಮಸ್ಥಳದ ಬಗ್ಗೆ ಏನು ಸುಳ್ಳು ಪ್ರಚಾರ ಮಾಡಲಾಗುತ್ತಿದೆಯೋ ಅದರ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ ಮಾತನಾಡಿ, ಧರ್ಮಸ್ಥಳದಲ್ಲಿನ ಬುರುಡೆ ಪುರಾಣ ಠುಸ್ ಆಗಿದೆ. ಶ್ರೀಕ್ಷೇತ್ರದ ಬಗ್ಗೆ ಸುಳ್ಳು ಪ್ರಚಾರ, ಷಡ್ಯಂತ್ರ ಮಾಡುವ ಜನರ ಬಗ್ಗೆ ಗೊತ್ತಾದಂತಾಗಿದೆ. ಜನರೂ ಜಾಗೃತಿಗೊಂಡಿದ್ದಾರೆ. ಎಸ್‌ಐಟಿ ತನಿಖೆ ಮತ್ತಷ್ಟು ಚುರುಕುಗೊಳಿಸಬೇಕು. ಸುಳ್ಳು ಜಾಸ್ತಿ ದಿನ ಇರುವುದಿಲ್ಲ ಎನ್ನುವುದು ಧರ್ಮಸ್ಥಳ ಪ್ರಕರಣದಿಂದ ಜಗಜ್ಜಾಹೀರವಾಗಿದೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮನವಿ ಓದಿದರು. ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ಸುನೀಲ ಕಾಮತ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಪ್ರಮುಖರಾದ ಕುಮಾರ ಹೆಬಳೆ, ನಾರಾಯಣ ಭಟ್ಟ, ಬಿಜೆಪಿ ಗಣಪತಿ, ಗೋವಿಂದ ಖಾರ್ವಿ, ಮೋಹನ ಶಿರಾಲಿಕರ್, ಮೋಹನ ನಾಯ್ಕ, ಹನುಮಂತ ನಾಯ್ಕ, ರಾಮನಾಥ ಬಳೇಗಾರ, ನಾಗೇಶ ನಾಯ್ಕ, ನಾಗೇಂದ್ರ ನಾಯ್ಕ, ಕೇಶವ ನಾಯ್ಕ ಇದ್ದರು.