ದೇವರ ದಾಸಿಮಯ್ಯರ ಸರಳತೆ ನಮ್ಮದಾಗಲಿ

| Published : Apr 03 2025, 12:33 AM IST

ಸಾರಾಂಶ

ಶಿವನಲ್ಲಿ ಅಪಾರ ಭಕ್ತಿ ಉಳ್ಳವರಾಗಿದ್ದ ಶಿವಶರಣ ದೇವರ ದಾಸಿಮಯ್ಯ ಅವರು ಸಾರಿದ ಸರಳ ಮತ್ತು ಪಾರದರ್ಶಕ ಜೀವನ ನಮ್ಮದಾಗಬೇಕು ಎಂದು ತುಮಕೂರು ತಾಲೂಕು ತಹಸೀಲ್ದಾರ್ ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಶಿವನಲ್ಲಿ ಅಪಾರ ಭಕ್ತಿ ಉಳ್ಳವರಾಗಿದ್ದ ಶಿವಶರಣ ದೇವರ ದಾಸಿಮಯ್ಯ ಅವರು ಸಾರಿದ ಸರಳ ಮತ್ತು ಪಾರದರ್ಶಕ ಜೀವನ ನಮ್ಮದಾಗಬೇಕು ಎಂದು ತುಮಕೂರು ತಾಲೂಕು ತಹಸೀಲ್ದಾರ್ ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ,ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ನೇಕಾರ ಸಮುದಾಯಗಳಾದ ದೇವಾಂಗ, ಕುರುಹೀನಶೆಟ್ಟಿ, ತೊಗಟವೀರ, ಪದ್ಮಶಾಲಿ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ದೈನಂದಿಕ ಚಟುವಟಿಕೆಗಳಲ್ಲಿ ಹೇಗೆ ವರ್ತಿಸಬೇಕು.ಜನಸಾಮಾನ್ಯರನ್ನು ಹೇಗೆ ಕಾಣಬೇಕು ಎಂಬುದನ್ನು ತಮ್ಮ 150ಕ್ಕೂ ಹೆಚ್ಚು ವಚನಗಳ ಮೂಲಕ ಇಡೀ ನಾಡಿಗೆ ಮಾರ್ಗದರ್ಶನ ಮಾಡಿದ್ದಾರೆ. ಅಂತಹವರ ನಡೆ, ನುಡಿಯನ್ನು ನಾವುಗಳು ಅನುಸರಿಸುವ ಮೂಲಕ ಅವರ ಕನಸನ್ನು ನನಸು ಮಾಡುವತ್ತಾ ಗಮನಹರಿಸೋಣ. ಆ ಮೂಲಕ ಸುಂದರ ಸಮಾಜವೊಂದನ್ನು ಕಟ್ಟೋಣ ಎಂದರು.

ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, 2015 ರಿಂದಲೂ ಸರಕಾರ ಅದ್ಯ ವಚನಕಾರರಾದ ದೇವರದಾಸಿಮಯ್ಯ ಅವರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಇದು ಸರಕಾರಿ ಕಾರ್ಯಕ್ರಮವಾದ ಕಾರಣ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳ ಹೆಸರಿದೆ. ಆದರೆ ಒಬ್ಬರು ಕಾರ್ಯಕ್ರಮಕ್ಕೆ ಬಂದಿಲ್ಲ.ಇದಕ್ಕೆ ಕಾರಣ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ.ರಾಜ್ಯದಲ್ಲಿ ಸುಮಾರು 27 ನೇಕಾರರ ವಿವಿಧ ಸಮುದಾಯಗಳಿವೆ. ತುಮಕೂರು ಜಿಲ್ಲೆಯಲ್ಲಿ ದೇವಾಂಗ, ಕುರುಹೀನಶೆಟ್ಟಿ,ಪದ್ಮಶಾಲಿ, ತೊಗಟವೀರ ನಾಲ್ಕು ಸಮುದಾಯಗಳಿದ್ದು,ನಮ್ಮ ನಡುವೆಯೇ ಒಗ್ಗಟ್ಟು ಕಾಣದಾಗಿದೆ ಎಂದರು.

ಇದೇ ಕಾರಣಕ್ಕೆ ರಾಜಕಾರಣಿಗಳು ನಮ್ಮನ್ನು ನಿರ್ಲಕ್ಷಿಸುತಿ ದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳು, ಈಗ ಬರುವುದಿಲ್ಲ ಎಂದರೆ ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಒಗ್ಗೂಡಿದರೆ,ರಾಜಕಾರಣಿಗಳು ತಾವಾಗಿಯೇ ಹುಡುಕಿಕೊಂಡು ಬರುತ್ತಾರೆ. ಮುಂಬರುವ ಜಿ.ಪಂ.,ತಾ.ಪಂ. ಹಾಗು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಮುದಾಯಗಳ ಯುವಕರು ತಯಾರಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ನೇಕಾರರ ಸಮುದಾಯಗಳ ಒಕ್ಕೂಟದ ಉಪಾಧ್ಯಕ್ಷ ಎನ್.ವೆಂಕಟೇಶ ಮಾತನಾಡಿ, ನಾವು ಸಂಘಟನೆ ಮಾಡುವುದರಲ್ಲಿ ಹಿಂದೆ ಉಳಿದಿದ್ದೇವೆ. ಉಪಪಂಗಡಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಈ ಹಿಂದೆ ಒಂದು ಕಾರ್ಯಕ್ರಮ ಮಾಡಿದರೆ 500 ಜನರ ಸೇರುತಿದ್ದ ಜಾಗದಲ್ಲಿ ಇಂದು 50 ಜನ ಸೇರುತಿದ್ದಾರೆ. ಒಂದು ಕಾಲದಲ್ಲಿ ಗುಬ್ಬಿ ತಾಲೂಕು ಪಂಚಾಯಿತಿಯಲ್ಲಿ 7 ಜನ ನೇಕಾರರ ಸಮುದಾಯದ ಸದಸ್ಯರಿದ್ದರು. ನಮ್ಮ ದ್ವನಿ ದೊಡ್ಡದಾಗಬೇಕು.ಅಗ ಮಾತ್ರ ಸರಕಾರವನ್ನು ಎಚ್ಚರಿಸಲು ಸಾಧ್ಯ ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ಅನಿಲ್‌ಕುಮಾರ್ ಮಾತನಾಡಿ,ವಾರಣಾಸಿಯಿಂದ ಸ್ಪರ್ಧಿಸುವ ಪ್ರಧಾನಿ ಮೋದಿ, ನೇಕಾರರ ದಿವಸ್ ಘೋಷಣೆ ಮಾಡಲು ಅದರ ಹಿಂದೆ ಇರುವುದು ನೇಕಾರರ ಒಗ್ಗಟ್ಟು.ಆ ಕ್ಷೇತ್ರದಲ್ಲಿ ಸುಮಾರು 7 ಲಕ್ಷ ನೇಕಾರರ ಮತಗಳಿವೆ.ಇಲ್ಲಿಯೂ ಕೂಡ ನಮ್ಮ ಸಂಖ್ಯಾಬಲ ಹೆಚ್ಚಬೇಕು.ಇದಕ್ಕೆ ಸಂಘಟನೆಯೊಂದೇ ದಾರಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಅದ್ಯ ವಚನಕಾರ ದೇವರ ದಾಸಿಮಯ್ಯ ಬರೆದಿದ್ದು ಕಡಿಮೆ, ಆದರೆ ಎಲ್ಲವೂ ಮೌಲ್ಯಯುತವಾದವು.ದೇಹವೆಂಬ ರಥಕ್ಕೆ ಭಕ್ತಿ ಎಂಬ ಕಡಾಣಿ ಇರಬೇಕು.ಆಗ ಮಾತ್ರ ನಿಗಧಿತ ದೂರ ತಲುಪಲು ಸಾಧ್ಯ ಎಂಬುದನ್ನು ತಮ್ಮ ಹಲವು ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ.ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಅವರ ಬಗ್ಗೆ ಗೊಂದಲಗಳಿದ್ದು, ಅನೇಕ ಸಂಶೋಧನೆಗಳ ಮೂಲಕ ಇಬ್ಬರು ಒಬ್ಬರೇ ಎಂಬ ಅಂಶ ಸಾಭೀತಾಗಿದೆ ಎಂದರು.

ದೇವರ ದಾಸಿಮಯ್ಯ ನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ ಚಿ.ನಾ.ಹಳ್ಳಿ ತಾ.ಘಟಕದ ಅಧ್ಯಕ್ಷ ಪ್ರೊ.ಬಸವರಾಜು ಹೊನ್ನೇಬಾಗಿ, ಮೂಢನಂಬಿಕೆ, ಕಂದಾಚಾರ, ಗೊಡ್ಡ ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿದ್ದ ಅತ್ಯಾಚಾರ, ಆನಾಚಾರಗಳ ವಿರುದ್ದ ತಮ್ಮ ವಚನಗಳಲ್ಲಿ ಕಿಡಿಕಾರಿರುವ ದೇವರದಾಸಿಮಯ್ಯ, ಪಂಡಿತರು-ಪಾಮರರು ಒಂದೇ ಎಂದು ಸಾರಿದವರು. ದೇವರ ಅಸ್ಥಿತ್ವವನ್ನೇ ಪ್ರಶ್ನಿಸುವ ದಾಸಿಮಯ್ಯ, ಈ ದೇಶದ ಮೊದಲ ಸ್ತ್ರೀ ಸಮಾನತೆಯ ಪ್ರತಿಪಾದಕ. ಪಂಡಿತರು, ಮಹಾರಾಜುಗಳೇ ಮಾತನಾಡುವ ಕಾಲದಲ್ಲಿ, ತಮ್ಮ ಸರಳ ವಚನಗಳ ಮೂಲಕ ಪಾಮರರಿಗು ದ್ವನಿ ನೀಡಿದರು.ದೇವರದಾಸಿಮಯ್ಯನ ವಚನಗಳು, ಕನ್ನಡ ಸಾಹಿತ್ಯಕ್ಕೆ ಕಿರೀಟವಿದ್ದಂತೆ. ದಯೆ ಇಲ್ಲದ ಧರ್ಮ ಇರಲು ಸಾಧ್ಯವೇ ಇಲ್ಲ ಎಂಬುದನ್ನು ತೋರಿಸಿಕೊಟ್ಟವರು. ಇಂತಹವರ ಜಯಂತಿ ಆಚರಣೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ಎಂದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಸುರೇಶಕುಮಾರ್,ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಮಾಜಿ ಅಧ್ಯಕ್ಷ ಗಂಗಪ್ಪ, ಜಿಲ್ಲಾ ದೇವಾಂಗ ಸಂಘದ ಗೌರವ ಅಧ್ಯಕ್ಷ ಡಾ.ಎಸ್.ಹೆಚ್.ಕೇಶವಮೂರ್ತಿ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ರಾಮಕೃಷ್ಣಯ್ಯ, ಕುರುಹೀನ ಶೆಟ್ಟಿ ಸಂಘದ ಟಿ.ಹೆಚ್.ಯೋಗಾನಂದ್, ತೊಗಟವೀರರ ಸಂಘದ ಕಾರ್ಯಾಧ್ಯಕ್ಷ ಕರಿಯಪ್ಪ, ಜಿಲ್ಲಾ ಮಹಿಳಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವ ಅಧ್ಯಕ್ಷ ಕಮಲಮ್ಮ, ದೇವಾಂಗ ಸಂಘದ ರೇವಣ್ಣಕುಮಾರ್, ಆರ್.ಚಂದ್ರಪ್ಪ, ಹೆಚ್.ಶಂಕರಪ್ಪ, ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಉಪಾಧ್ಯಕ್ಷ ಎನ್.ವೆಂಕಟೇಶ್, ಸಂಚಾಲಕ ಎಸ್.ವಿರೂಪಾಕ್ಷ, ಸಂಘಟನಾ ಕಾರ್ಯದರ್ಶಿ ಅನಿಲ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.