ಸಾರಾಂಶ
ಹಾವೇರಿ: ಅಜ್ಞಾನವೆಂಬ ಕತ್ತಲಲ್ಲಿ ಜ್ಯೋತಿ ಬೆಳಗಿಸಿ ಸುಜ್ಞಾನದ ಕಡೆಗೆ ಭಕ್ತರನ್ನು ಕರೆದುಕೊಂಡು ಹೋಗುವುದೇ ಕಾರ್ತಿಕೋತ್ಸವ. ಕಾರ್ತಿಕೋತ್ಸವ ಜತೆಗೆ ಭಕ್ತರಿಗೆ ಧರ್ಮೋಪದೇಶ ಕೊಡಿಸಲು ಮುಂದಾಗಿರುವ ಶ್ರೀಮಠದ ಗುರುಗಳನ್ನು ಪಡೆದಿರುವ ಭಕ್ತವೃಂದ ನಿಜಕ್ಕೂ ಧನ್ಯರು ಎಂದು ರಾಂಪೂರ, ಬಸವಾಪಟ್ಟಣ ಹಾಲಸ್ವಾಮಿಮಠದ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಹೇಳಿದರು.
ಹಾವೇರಿ ತಾಲೂಕು ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಏರ್ಪಡಿಸಿದ್ದ ಹಾಲೇಶ್ವರರ ಮಹಾಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ, ಗೋಪುರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದರು.ನಿತ್ಯ ಜೀವನದ ಬದುಕಿನ ಜಂಜಾಟದಲ್ಲಿ ಭಕ್ತರ ಮನಸ್ಸು ಉಲ್ಲಾಸಗೊಳಿಸಿ, ಬೇಸರ ಕಳೆದು ಗುರುವಿನ ಉಪದೇಶವನ್ನು ಭಕ್ತರಿಗೆ ಕೊಡಿಸಲು ಶ್ರೀಮಠದ ಗುರುಗಳು ಮುಂದಾಗಿದ್ದಾರೆ. ವಿಶ್ವಾರಾಧ್ಯ ಹಾಲಸ್ವಾಮಿಗಳು ಮಠಕ್ಕಾಗಿ ಆಸ್ತಿ ಮಾಡುವುದು ಬೇಕಿಲ್ಲ, ಶ್ರೀ ಮಠದ ಭಕ್ತರೇ ಮಠದ ಆಸ್ತಿ ಎಂಬ ಮನೋಭಾವ ಹೊಂದಿ ಭಕ್ತಿಯ ಪರಾಕಾಷ್ಠೆಯನ್ನು ಹೊಂದಿದ್ದರು. ಅಂತಹ ಪೂಜ್ಯರ ಗರಡಿಯಲ್ಲಿ ಬೆಳೆದ ಶ್ರೀಗಳು ಇಂತಹ ಮಹತ್ಕಾರ್ಯವನ್ನು ಮಾಡುತ್ತಿರುವುದು ಮೆಚ್ಚುಗೆ ಕಾರ್ಯವಾಗಿದೆ ಎಂದರು.
ಗಡಿ ಕಾಯುವ ಯೋಧ, ದೇಶಕ್ಕೆ ಅನ್ನ ನೀಡುವ ರೈತರನ್ನು ಸದಾಕಾಲ ಸ್ಮರಿಸಬೇಕು. ತಾಯಿಯನ್ನು ಭೂಮಿಗೆ ಹೋಲಿಸುತ್ತಾರೆ. ಜನನಿ ತಾನೇ ಮೊದಲ ಗುರು ಎಂಬಂತೆ ಗ್ರಾಮಸ್ಥರು ಗುರುವಿನ ಸೇವೆಯಲ್ಲಿ ತಲ್ಲೀನರಾಗಿದ್ದಾರೆ. ಗುರುವಿನ ಉಪದೇಶ ಸಿಕ್ಕಾಗ ಸದ್ಬಳಕೆ ಮಾಡಿಕೊಂಡರೆ ಭಕ್ತರ ಜೀವನ ಪಾವನವಾಗುತ್ತದೆ. ಗ್ರಾಮದ ಮಹಿಳೆಯರೂ ಸೊಸೆಯನ್ನು ಮಗಳಂತೆ ಕಾಣಬೇಕು. ಸೊಸೆಯೂ ಕೂಡ ಅತ್ತೆ, ಮಾವರನ್ನು ತಂದೆ-ತಾಯಿಯಂತೆ ಕಂಡಾಗ ಜೀವನದ ಹಾದಿ ಸುಗಮವಾಗುತ್ತದೆ. ಬಹಳಷ್ಟು ಜನ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ. ಇಂತಹ ಕೆಲಸ ಯಾರೂ ಮಾಡಬಾರದು ಎಂದರು.ಹಿರೇಹಡಗಲಿ ಹಾಲಸ್ವಾಮಿಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಗಂಜಿಗಟ್ಟಿ ಚರಮೂರ್ತೇಶ್ವರಮಠದ ವೈಜನಾಥ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗದಗನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ. ಉಮೇಶ ಪುರದ ಅವರಿಗೆ ಗುರುರಕ್ಷೆ ನೀಡಲಾಯಿತು. ನಾಗತಿಬಸಾಪೂರ ಹಾಲಸ್ವಾಮಿಮಠದ ಗಿರಿರಾಜ ಹಾಲಸ್ವಾಮೀಜಿ ನೇತೃತ್ವ ವಹಿಸಿದ್ದರು.
ಧರ್ಮಸಭೆಯಲ್ಲಿ ಹಿರೇಹಡಗಲಿ ಹಾಲಸ್ವಾಮಿಮಠದ ಹಾಲಸೋಮೇಶ್ವರ ಶ್ರೀಗಳು, ಶ್ರೀಮಠದ ಹಾಲಮುದುಕೇಶ್ವರ ಶ್ರೀಗಳು, ವಾಗೀಶ ಪಂಡಿತಾರಾಧ್ಯ ಹಾಲಸ್ವಾಮಿಗಳು, ಸಣ್ಣ ಹಾಲಸ್ವಾಮಿಗಳು, ಹುಬ್ಬಳ್ಳಿಯ ಆಯುರ್ವೇದ ಆಸ್ಪತ್ರೆಯ ಡಾ. ಮಿಲಿಂದ್ ಹುಕ್ಕೇರಿ ಉಪಸ್ಥಿತರಿದ್ದರು.ಶಿವಾನಂದಯ್ಯ ಚರಂತಿಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಕೊಡಬಾಳ ನಿರೂಪಿಸಿದರು. ದೇವರಾಜ ಕೋಡಿಹಳ್ಳಿ ಸ್ವಾಗತಿಸಿದರು. ಕನಕಪ್ಪ ದಾಸಣ್ಣವರ ವಂದಿಸಿದರು.
ಪೂರ್ಣ ಕುಂಭ ಮೆರವಣಿಗೆಹಾಲೇಶ್ವರರ ಕಾರ್ತಿಕೋತ್ಸವ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ ರಾಂಪುರ ಹಾಲಸ್ವಾಮಿಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳನ್ನು ಮಹಿಳೆಯರ ಪೂರ್ಣ ಕುಂಭ ಮೆರವಣಿಗೆ ನಡೆಸುವ ಮೂಲಕ ಸ್ವಾಗತಿಸಲಾಯಿತು. ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಕಾರ್ತಿಕ ದೀಪವನ್ನು ಹಚ್ಚಿಡಲಾಯಿತು. ಮೆರವಣಿಗೆಯಲ್ಲಿ ಭಜನಾ ಮಂಡಳದವರು, ಡೊಳ್ಳು ವಾದ್ಯ, ಗೊಂಬೆ ಕುಣಿತದವರು ಪಾಲ್ಗೊಂಡು ಮೆರಗು ಹೆಚ್ಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವೇದಿಕೆ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಖಾಸಗಿ ವಾಹಿನಿಯ ಕಲಾವಿದೆ ಮಹನ್ಯಾ ಪಾಟೀಲ, ಯಲಗಚ್ಚನ ಅಪ್ಪ್ಪು ಡ್ಯಾನ್ಸ್ ಅಕಾಡೆಮಿ ತಂಡ, ಹಾವೇರಿಯ ಎಸ್‌ಆರ್‌ಎಸ್ ಕರೋಕೆ ಸ್ಟುಡಿಯೋ, ಹನುಮನಹಳ್ಳಿ ಸ.ಹಿ.ಪ್ರಾ. ಶಾಲಾ ಮಕ್ಕಳು, ನೂಕಾಪುರ ಗ್ರಾಮದ ಲಂಬಾಣಿ ಭಕ್ತರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.