ಕನ್ನಡಪ್ರಭ ವಾರ್ತೆ ಅಥಣಿ ಕ್ರೀಡೆ ಯಾವುದೇ ಆಗಿರಲಿ, ಸೋಲು ಮತ್ತು ಗೆಲುವಿನಲ್ಲಿ ಸಿಗುವ ಅನುಭವ ಮುಂದಿನ ಕ್ರೀಡಾಕೂಟಕ್ಕೆ ಸ್ಪೂರ್ತಿಯಾಗಲಿದೆ. ಆಟಗಾರರ ಕ್ರೀಡಾಸ್ಪೂರ್ತಿ ಎಂದಿಗೂ ಬತ್ತದಿರಲಿ ಎಂದು ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕ್ರೀಡೆ ಯಾವುದೇ ಆಗಿರಲಿ, ಸೋಲು ಮತ್ತು ಗೆಲುವಿನಲ್ಲಿ ಸಿಗುವ ಅನುಭವ ಮುಂದಿನ ಕ್ರೀಡಾಕೂಟಕ್ಕೆ ಸ್ಪೂರ್ತಿಯಾಗಲಿದೆ. ಆಟಗಾರರ ಕ್ರೀಡಾಸ್ಪೂರ್ತಿ ಎಂದಿಗೂ ಬತ್ತದಿರಲಿ ಎಂದು ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಹೇಳಿದರು.

ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಹ್ಯಾಂಡಬಾಲ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕ್ರೀಡಾಪಟುಗಳು ಕ್ರೀಡಾ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಗುರಿ ಸಾಧಿಸುವ ಛಲ ಮುಖ್ಯ. ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಿದಾಗ ದೇಶ ಮತ್ತು ಸಮಾಜ ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆಪಡುತ್ತದೆ. ಅಂತಹ ಸಾಧಕರಾಗಿ ಹೊರ ಹೊಮ್ಮಬೇಕು ಎಂದು ಶುಭ ಹಾರೈಸಿದರು.

ವಕೀಲ ಎ.ಎಂ.ಖೋಬ್ರಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆರೋಗ್ಯ ಮತ್ತು ದೈಹಿಕ ಸದೃಢತೆಗಾಗಿ ಕ್ರೀಡೆಗಳು ಬಹಳಷ್ಟು ಸಹಕಾರಿ. ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದವರಿಗೂ ಉತ್ತಮ ಭವಿಷ್ಯವಿದ್ದು, ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಪಟುಗಳಾಗಬೇಕು ಎಂದು ಹೇಳಿದರು.

ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಂದೀಪ ಸಂಗೋರಾಮ ಮಾತನಾಡಿ, ಅಥಣಿ ತಾಲೂಕ ಕೇಂದ್ರದಲ್ಲಿ ರಾಜ್ಯಮಟ್ಟದ ಹ್ಯಾಂಡಬಾಲ್ ಪಂದ್ಯಾವಳಿಯಲ್ಲಿ ಬಹುಮಾನ ಪಡೆದ ಕ್ರೀಡಾ ತಂಡಗಳಿಗೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಚಿಕ್ಕೋಡಿ ಜಿಲ್ಲಾ ಉಪ ನಿರ್ದೇಶಕ ಪಾಂಡುರಂಗ ಭಂಡಾರಿ ಮಾತನಾಡಿದರು. ಈ ವೇಳೆ ವೀಕ್ಷಕರಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಗೋಪಾಲಕೃಷ್ಣ ಹಾಗೂ ಡಾ.ಆನಂದ, ಅತಿಥಿಗಳಾಗಿ ಡಾ.ರಾಹುಲ್ ಬೋಸಲೆ, ಸಂಸ್ಥೆಯ ಕಾರ್ಯದರ್ಶಿ ರವಿ ಕುಲಕರ್ಣಿ, ತಾಲೂಕ ಕ್ರೀಡಾ ಸಂಯೋಜಕ ಚನಗೌಡರ, ಪ್ರಾಚಾರ್ಯ ಎಂ.ಪಿ.ಮೇತ್ರಿ, ಬಣಜವಾಡ ಪದವಿ ಪೂರ್ವ ಮಹಾವಿದ್ಯಾಲಯದ ಲಕ್ಷ್ಮಣ ಬಣಜವಾಡ ಸೇರಿ ಇನ್ನಿತರರು ಉಪಸ್ಥಿತರಿದ್ದರು. ಎಸ್.ವಿ.ದಾಸರೆಡ್ಡಿ ಸ್ವಾಗತಿಸಿದರು. ಪೂಜಾ ಬಿಳಿಕುರಿ ನಿರೂಪಿಸಿದರು. ಬಿ.ಎಸ್.ಲೋಕುರ ವಂದಿಸಿದರು.

ಪಂದ್ಯಾವಳಿಯಲ್ಲಿ 66 ತಂಡಗಳಿ ಭಾಗಿ

ಪಂದ್ಯಾವಳಿಯಲ್ಲಿ 33 ಜಿಲ್ಲೆಗಳ 66 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಬಾಲಕಿಯರ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಯ ತಂಡ ಪ್ರಥಮ, ತುಮಕೂರು ಜಿಲ್ಲೆಯ ದ್ವಿತೀಯ ಸ್ಥಾನ ಪಡೆದವು. ಇನ್ನು ಬಾಲಕರ ವಿಭಾಗದಲ್ಲಿ ಹಾವೇರಿ ಜಿಲ್ಲೆಯ ತಂಡ ಪ್ರಥಮ ಬಹುಮಾನ ಪಡೆದುಕೊಂಡರೆ, ಹಾಸನ ಜಿಲ್ಲೆಯ ತಂಡ ದ್ವಿತೀಯ ಬಹುಮಾನ ಪಡೆಯಿತು. ವಿಜೇತ ತಂಡಗಳಿಗೆ ಹಾಗೂ ವೈಯಕ್ತಿಕ ಸಾಧನೆಗೆ ಬೆಸ್ಟ್ ಗೋಲ್ ಮತ್ತು ಬೆಸ್ಟ್ ಆಲ್ ರೌಂಡರ್ ಕ್ರೀಡಾಪಟುಗಳಿಗೆ ಪದಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಪದಕ ಪಡೆದ ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಸಂಭ್ರಮಿಸಿದರು.