ಸಾರಾಂಶ
ಬ್ಯಾಡಗಿ: ಭಕ್ತಿಯಿಂದ ಆಚರಿಸಲಾಗುವ ಮಹರ್ಷಿ ವಾಲ್ಮೀಕಿ ಜಯಂತಿ ಭಾರತದ ಶ್ರೇಷ್ಠ ಮಹಾಕಾವ್ಯ ರಾಮಾಯಣದ ಕರ್ತೃವಿನ ಜನ್ಮದಿನ, ಬುದ್ಧಿವಂತಿಕೆ, ಸದಾಚಾರ, ಪರಿವರ್ತನೆಯ ಶಕ್ತಿಯನ್ನು ಸಂಕೇತವಾಗಿಟ್ಟುಕೊಂಡು ಬರುವ ಪೀಳಿಗೆಗೆ ಅವರ ಬೋಧನೆಗಳು ಸತ್ಯ, ಕರುಣೆ ಮತ್ತು ನೈತಿಕ ಜೀವನದ ಕಡೆಗೆ ಸ್ಫೂರ್ತಿ ನೀಡಲಿ ಎಂದು ಶಾಸಕ ಬಸವರಾಜ ಶಿವಣ್ಣನವರ ಆಶಯ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕಾಡಳಿತ, ತಾಲೂಕು ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮುದಾಯದವರ ಸಹಯೋಗದೊಂದಿಗೆ ಪಟ್ಟಣದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಾಕಾವ್ಯವಾದ ರಾಮಾಯಣ ನೀಡಿದ ಋಷಿಯನ್ನು ಸ್ಮರಿಸುವ ಕೆಲಸ ಎಲ್ಲರಿಂದಾಗಬೇಕು, ವಾಲ್ಮೀಕಿಯವರ ಜ್ಞಾನದ ಬೆಳಕು ಪ್ರತಿಯೊಬ್ಬರನ್ನೂ ಸತ್ಯ ಮತ್ತು ಸದಾಚಾರದ ಕಡೆಗೆ ಮಾರ್ಗದರ್ಶನ ಮಾಡುವುದು ಸೇರಿದಂತೆ ಸದ್ಗುಣದ ಹಾದಿಯಲ್ಲಿ ನಡೆಯಲು ಪ್ರೇರೇಪಿಸುವಂತಾಗಲಿ ಎಂದರು.
ಬದುಕನ್ನೇ ಬದಲಿಸಿಕೊಂಡು ಮಹರ್ಷಿಯಾದ ವಾಲ್ಮೀಕಿ:ಬದಲಾವಣೆ ಜಗದ ನಿಯಮ ಎಂಬುದು ಸಾರ್ವಕಾಲಿಕ ಸತ್ಯ. ದಟ್ಟವಾದ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿ ವಿಷಜಂತುಗಳಿಗೂ ಅಂಜದೇ ಬೇಟೆಯಾಡುತ್ತಾ ಸಾಗುತ್ತಿದ್ದ ವ್ಯಕ್ತಿಯೊಬ್ಬ ತನ್ನ ಬದುಕನ್ನೇ ಬದಲಾಯಿಸಿಕೊಂಡು ರಾಮಾಯಣವನ್ನೇ ರಚಿಸುವ ಮೂಲಕ ಮಹರ್ಷಿಯಾದ, ಇದರಿಂದ ನಾವೆಲ್ಲಾ ತಿಳಿದುಕೊಳ್ಳಬೇಕಾದ್ದು ಇಷ್ಟೇ ಬದಲಾವಣೆಗೆ ಯಾರೂ ಸಹ ಮೀರಿಲ್ಲ ಎಂಬ ಸಮೀಕರಣ ಅರ್ಥವಾಗುತ್ತದೆ, ಸ್ವಯಂ-ಸಾಕ್ಷಾತ್ಕಾರದಿಂದ ರೂಪಾಂತರ ಸಾಧ್ಯ ಎಂಬುದನ್ನು ಮಹರ್ಷಿ ವಾಲ್ಮೀಕಿ ಸಾಧಿಸಿ ತೋರಿಸಿದ್ದಾರೆ ಎಂದರು.ಜೀವನಚರಿತ್ರೆ ಅನುಕರಣೀಯ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕೃತಿ ಬಿಂಬಿಸುವ ರಾಮಾಯಣ ಎಂಬ ಮಹಾಗ್ರಂಥ ಅಖಂಡ ಭಾರತ ನಿರ್ಮಾಣಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ, ಮಾನವೀಯತೆ ಇಲ್ಲದೇ ಧರ್ಮವಿಲ್ಲ ಎಂಬದನ್ನು ಪ್ರತಿಪಾದಿಸಿದ ದಾರ್ಶನಿಕರಾಗಿದ್ದು ವಾಲ್ಮೀಕಿ ಅವರ ಜೀವನಚರಿತ್ರೆ ಅನುಕರಣೀಯ, ಮಹರ್ಷಿ ವಾಲ್ಮೀಕಿ ಸರ್ವಕಾಲಕ್ಕೂ ಸಲ್ಲುವ ಪೂಜ್ಯನೀಯ ವ್ಯಕ್ತಿ ಎಂದರು.
ಅಹಿಂಸೆ ಪ್ರತಿಪಾದಿಸಿದ ವಾಲ್ಮೀಕಿ: ಮುಖಂಡ ಎಂ.ಎಸ್. ಪಾಟೀಲ ಮಾತನಾಡಿ, ವಾಲ್ಮೀಕಿ ರಾಮಾಯಣವೊಂದು ನಿತ್ಯ ಬದುಕಿಗೆ ಅವಶ್ಯವಿರುವ ಕಥೆಯಾಗಿದೆ, ಶಾಂತಿ, ಸಹಬಾಳ್ವೆ, ಅಹಿಂಸೆ ಪ್ರತಿಪಾದಿಸಿದ್ದ ವಾಲ್ಮೀಕಿಯವರ ಆದರ್ಶದ ನುಡಿಗಳಿಂದ ಪಂಪ, ರನ್ನ, ಪೊನ್ನ, ಹರಿಹರ, ರಾಘವಾಂಕ ಮತ್ತಿತರ ಮಹಾನ್ ಕವಿಗಳು ಪ್ರೇರಣೆಗೊಂಡು ಬೆಳಕಿಗೆ ಬರಲು ಕಾರಣವಾಯಿತು ಎಂದರು.ಇದಕ್ಕೂ ಮುನ್ನ ಪಟ್ಟಣದ ವಾಲ್ಮೀಕಿ ಸಂಘದ ಆವರಣದಲ್ಲಿ ಮೆರವಣಿಗೆಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಹನುಮಂತ ಮ್ಯಾಗೇರಿ, ಮಂಗಳ ಗೆಜ್ಜಳ್ಳಿ, ಮುಖಂಡರಾದ ಹೊನ್ನೂರಪ್ಪ ಕಾಡಸಾಲಿ, ಮಲ್ಲೇಶಪ್ಪ ಒಳಗುಂದಿ, ಬಸವರಾಜ ಭೀಮನಾಯ್ಕರ, ಶಿವಣ್ಣ ಅಂಬಲಿ, ಸೋಮು ಕರ್ಚಡ, ದಾನಪ್ಪ ಚೂರಿ, ದುರ್ಗೇಶ ಗೋಣೆಮ್ಮನವರ, ರಾಜು ಹುಲ್ಲತ್ತಿ, ಹನುಮಂತ ಬೊಮ್ಮಲಾಪುರ, ತಹಸೀಲ್ದಾರ್ ಚಂದ್ರಶೇಖರ ನಾಯಕ, ಟಿಇಓ ಕೆ.ಎಂ.ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ, ಸಮಾಜ ಕಲ್ಯಾಣಾಧಿಕಾರಿ, ಶರಣಯ್ಯ ಕಲ್ಯಾಣಮಠ, ಸುರೇಶ ಬೇಡರ, ಪುರಸಭೆ ಸದಸ್ಯರು ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಆನಂದ ಮುದುಕಮ್ಮನವರ ಸ್ವಾಗತಿಸಿದರು. ಶಿವಾನಂದ ಯಮನಕ್ಕವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಕೋಡಿಹಳ್ಳಿ ವಂದಿಸಿದರು.
ವಾಲ್ಮೀಕಿ ಜಯಂತಿ ಅಂಗವಾಗಿ ಮಾರಿಕಾಂಬ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಸಕಲ ವಾದ್ಯ ವೈಭವಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.