ಸಾರಾಂಶ
ದೊಡವಾಡ ಹಾಗೂ ಸುತ್ತಲಿನ ಗ್ರಾಮಗಳ ಹೊಲಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಯಲಾಗಿರುವ ಕಡಲೆ ಕಾಳು ಬೆಳೆಗೆ ತಗುಲಿರುವ ಬೇರುಕೊಳೆ ರೋಗ ಪರಿಶೀಲನೆಗೆ ಗುರುವಾರ ಆಗಮಿಸಿದ ವೇಳೆ ರೈತರಿಗೆ ಈ ಕುರಿತು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ದಳವಾಯಿ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪ್ರತಿ ವರ್ಷದ ಹಂಗಾಮಿನಲ್ಲಿ ಒಂದೇ ಬೆಳೆ ಬೆಳೆಯುವುದರಿಂದ ಅಲ್ಲಿನ ಮಣ್ಣು ರೋಗಗ್ರಸ್ತವಾಗುತ್ತದೆ. ಅಂಥ ಮಣ್ಣಿನಲ್ಲಿ ಬೆಳೆದ ಬೆಳೆಗೆ ಬೇರು ಕೊಳೆ ರೋಗ ಹೆಚ್ಚಿನ ಪ್ರಮಾಣದಲ್ಲಿ ತಗುಲುತ್ತದೆ ಮತ್ತು ಉತ್ತಮ ಬೀಜ ಬಿತ್ತದೇ ಇರುವುದು ಇದಕ್ಕೆ ಕಾರಣ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ದಳವಾಯಿ ಹೇಳಿದರು.ದೊಡವಾಡ ಹಾಗೂ ಸುತ್ತಲಿನ ಗ್ರಾಮಗಳ ಹೊಲಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಯಲಾಗಿರುವ ಕಡಲೆ ಕಾಳು ಬೆಳೆಗೆ ತಗುಲಿರುವ ಬೇರುಕೊಳೆ ರೋಗ ಪರಿಶೀಲನೆಗೆ ಗುರುವಾರ ಆಗಮಿಸಿದ ವೇಳೆ ರೈತರಿಗೆ ಈ ಕುರಿತು ಮಾಹಿತಿ ನೀಡಿದ ಅವರು, ಬೈಲಹೊಂಗಲ ಹಾಗೂ ಕಿತ್ತೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಸಂಜಿವಿನಿ ಹೆಸರಿನ ವಾಹನ ಸೌಲಭ್ಯವಿದ್ದು, ಇದರ ಮೂಲಕ ರೈತರ ಹೊಲಗಳಲ್ಲಿನ ವಿವಿಧ ಬೆಳೆಗಳಿಗೆ ತಗುಲುವ ರೋಗ ರುಜಿನ ಮತ್ತು ಇನ್ನಿತರ ಸಮಸ್ಯೆಗಳನ್ನು ವಿಜ್ಞಾನಿಗಳ ತಂಡದ ಜತೆ ಸ್ಥಳಕ್ಕೆ ತೆರಳಿ ಪ್ರಾತ್ಯಕ್ಷಿಕೆ ಮೂಲಕ ಪರಿಹಾರ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಗ್ರಾಮದ ಶೇ.80 ರಷ್ಟು ಹೊಲಗಳಲ್ಲಿ ಬೆಳೆದ ಕಡಲೆ ಬೆಳೆ ಬೇರು ಕೊಳೆ ರೋಗದಿಂದ ನಾಶವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಸ್ಥಳದಲ್ಲೇ ಇದ್ದ ರೈತರು ಅಧಿಕಾರಿಗಳಿಗೆ ತಿಳಿಸಿದರು.ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ವೀರೇಂದ್ರ ಸಂಗೊಳ್ಳಿ, ನಿರ್ದೇಶಕರಾದ ನಿಂಗಪ್ಪ ಚೌಡಣ್ಣವರ, ಗಿರೀಶ ಧಾರವಾಡ, ಶಾಂತಪ್ಪ ಜೈನರ, ರವಿ ದಾಸನಕೊಪ್ಪ. ಸತೀಶ ಧಾರವಾಡ ಹಾಗೂ ಕೃಷಿ ಅಧಿಕಾರಿ ಎಸ್.ಎಸ್.ಪೂಜೇರ, ಸಿಬ್ಬಂದಿ ಗಂಗಾಧರ ಬಸರಕೋಡ, ಬಸವರಾಜ ಪಾಶ್ಚಾಪೂರ ಉಪಸ್ಥಿತರಿದ್ದರು.