ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಪ್ರೇರಕ ಶಕ್ತಿಯಾಗಿದೆ. ಸಂವಿಧಾನದ ಆಶಯಗಳು ಈಡೇರಿಕೆಗಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ರಥ ಸಂಚರಿಸಿದ ವೇಳೆ ತಾಲೂಕು ಆಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಸಂವಿಧಾನದ ಆಶಯಗಳು ಇಂದಿಗೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಅಕಾಶ ಭೂಮಿಯಷ್ಟು ಹೆಚ್ಚಾಗಿದೆ. ಬಾಬಾ ಸಾಹೇಬರು ನೀಡಿರುವ ಸಂದೇಶಗಳನ್ನು ನಾವು ಪಾಲಿಸದಿದ್ದರೆ ನಿಜವಾದ ಸ್ವಾತಂತ್ರ್ಯವು ನಮಗೆ ಎಂದಿಗೂ ಸಿಗುವುದಿಲ್ಲ. ಆದ್ದರಿಂದ ನಾವೆಲ್ಲರೂ ಸಂಘಟಿತರಾಗಿ ನಮಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಸೌಲಭ್ಯ ಕೇಳಿ ಪಡೆದುಕೊಳ್ಳಬೇಕು ಎಂದರು.ಸಮಾಜದಲ್ಲಿ ತುಳಿತಕ್ಕೊಳಗಾಗಿ ಸಂಕಷ್ಟದಲ್ಲಿರುವ ಜನರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಅನ್ಯಾಯ, ಅಕ್ರಮಗಳನ್ನು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಂಡು ಬದಲಾವಣೆಯ ದಿಕ್ಕಿನತ್ತ ಸಾಗಬೇಕು ಎಂದರು.
ತಹಸೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ನಾಗರೀಕ ಸಮಾಜದಲ್ಲಿ ಧನಿಯಿಲ್ಲದ ತುಳಿತಕ್ಕೊಳಗಾದ ಜನರಿಗೆ ಸಂವಿಧಾನವೇ ದಾರಿಮಾರ್ಗವಾಗಿದೆ. ಸಂವಿಧಾನದ ಬಗ್ಗೆ ತಿಳಿದು ಆಶಯಗಳು ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕಾದರೆ ನಮ್ಮ ಮಕ್ಕಳು ಕಡ್ಡಾಯವಾಗಿ ವಿದ್ಯಾವಂತರಾಗಬೇಕು ಎಂದರು.ಸಂವಿಧಾನ ಜಾಗೃತಿ ರಥದ ಆಗಮನದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬೈಕ್ ರ್‍ಯಾಲಿ ನಡೆಸಲಾಯಿತು. ಶಾಸಕ ಎಚ್.ಟಿ. ಮಂಜು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಸಿಡಿಪಿಒ ಅರುಣಕುಮಾರ್, ಬಿಇಒ ಆರ್.ಎಸ್.ಸೀತಾರಾಮ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ತಾಪಂ ಇಒ ಬಿ.ಎಸ್.ಸತೀಶ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ದಲಿತ ಸಂಘಟನೆಗಳ ಪ್ರಮುಖರಾದ ಬಸ್ತಿ ರಂಗಪ್ಪ, ಜಿಪಂ ಮಾಜಿ ಸದಸ್ಯ ರಾಮದಾಸ್, ಪುರಸಭಾ ಸದಸ್ಯರಾದ ಡಿ.ಪ್ರೇಂಕುಮಾರ್, ಕೆ.ಆರ್.ರವೀಂದ್ರ ಬಾಬು ಸೇರಿದಂತೆ ಹಲವರು ಇದ್ದರು.