ಸಾರಾಂಶ
ದಾಬಸ್‍ಪೇಟೆ/ ನೆಲಮಂಗಲ: ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಶಕ್ತಿ ನೀಡಿದ ಶ್ರೇಷ್ಠ ಧರ್ಮ ಭೂಮಿ ನೆಲಮಂಗಲ, ಈ ನೆಲದ ಕಣ್ಣು ಗಂಗರ ಎರಡನೇ ರಾಜಧಾನಿ ಮಣ್ಣೆ ರಕ್ಷಣೆ ಮಾಡಬೇಕಾಗಿದೆ ಎಂದು ಸಮ್ಮೇಳನಾಧ್ಯಕ್ಷ ಶ್ರೀ ರಮಣಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕನ್ನಡ ನಾಡುನುಡಿ ಅಭಿವೃದ್ಧಿ ಬಗ್ಗೆ ಗಂಭೀರ ಚಿಂತನೆ ನಡೆಸುವ ಅನಿವಾರ್ಯತೆ ಇದೆ. ಈ ನಾಡನ್ನು ಕದಂಬರು, ಶಾತವಾಹನರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಇತರರು ಅಳ್ವಿಕೆ ಮಾಡಿದ್ದಾರೆ. ಇವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಮರೆಯುವಂತಿಲ್ಲ, ನೆಲಮಂಗಲ ಕೂಡ ಗಂಗರು, ಚೋಳರು ಸೇರಿದಂತೆ ಅನೇಕ ರಾಜಮನೆತನಗಳು ಆಳ್ವಿಕೆ ಮಾಡಿ ಕನ್ನಡ ನೆಲಕ್ಕೆ ಹಾಗೂ ಕನ್ನಡ ಭಾಷೆಗೆ ವಿಶೇಷ ಶಕ್ತಿ ನೀಡಿದ್ದಾರೆ. ಗಂಗರ ರಾಜಧಾನಿ ಮಣ್ಣೆ. ಭೂಕಂಪ ಶಾಸನವಿರುವ ಮುಕ್ತಿನಾಥೇಶ್ವರ, ಹೊಯ್ಸಳರ ರಾಜಧಾನಿ ಶಿವಗಂಗೆ ಸೇರಿದಂತೆ ಇತಿಹಾಸದ ಕುರುಹುಗಳು ಹಾಗೂ ಕನ್ನಡದ ಶ್ರೇಷ್ಠತೆಗೆ ಶಕ್ತಿಯಾಗಿರುವ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕು ಎಂದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಕನ್ನಡ ನಾಡು ನುಡಿ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ. ಆ ಅವಕಾಶ ನಮಗೆ ಸಿಕ್ಕಿದ್ದು ಸದ್ಬಳಕೆ ಮಾಡಬೇಕು. ಕನ್ನಡ ಭವನಕ್ಕೆ ಜಾಗ ಗುರುತಿಸಿದ್ದು, ನಿರ್ಮಾಣಕ್ಕೆ ಮುಂದಾಗುತ್ತೇನೆ. ನೆಲಮಂಗಲ ಐತಿಹಾಸಿಕ ಕುರುಹುಗಳನ್ನು ರಕ್ಷಣೆ ಮಾಡಬೇಕಿದೆ. ನಮ್ಮ ಸರ್ಕಾರ ಕನ್ನಡದ ಉಳಿವಿಗಾಗಿ ಅನೇಕ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.
ಸರ್ಕಾರಕ್ಕೆ ಅಭಿನಂದನೆ: ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಕೈಗಾರಿಕೆ ಹಾಗೂ ಎಲ್ಲಾ ಅಂಗಡಿಗಳ ಮೇಲೆ ಕಡ್ಡಾಯ ಶೇ.60ರಷ್ಟು ನಾಮಫಲಕ ಹಾಕುವುದು, ಕೈಗಾರಿಕಾ ಉತ್ಪನ್ನಗಳ ಮೇಲೆ ಕಡ್ಡಾಯ ಕನ್ನಡದಲ್ಲಿ ಮುದ್ರಣ ಮಾಡಬೇಕೆಂಬ ಆದೇಶ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿರುವುದು ಸಂತೋಷ. ನೆಲಮಂಗಲದಲ್ಲಿ ಕ್ರಿಯಾಶೀಲ ಶಾಸಕರಿದ್ದು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿ ಅದ್ಧೂರಿಯಾಗಿ ನಡೆಸಿರುವುದು ಶ್ಲಾಘನೀಯ ಎಂದರು.ಮಳಿಗೆಗಳಿಗೆ ಚಾಲನೆ:
ಸಮ್ಮೇಳನದ ವೇದಿಕೆಗೆ ಪ್ರವೇಶ ಮಾಡುವ ಮೊದಲೇ ಅನೇಕ ಪುಸ್ತಕ ಮಳಿಗೆ ದಿನೋಪಯೋಗಿ ವಸ್ತುಗಳ ಮಳಿಗೆ, ಬಿಜಿಎಸ್ ಕಾಲೇಜಿಂದ ಆರೋಗ್ಯ ತಪಾಸಣೆ ಶಿಬಿರಕ್ಕೆ ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಚಾಲನೆ ನೀಡಿದರು.ಮೆರವಣಿಗೆ:
ಗೂಬೆಕಲ್ಲಮ್ಮ ದೇವಾಲಯದಿಂದ ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆವರೆಗೂ ಬೆಳ್ಳಿ ರಥದಲ್ಲಿ ವೀರಗಾಸೆ ಕಂಸಾಳೆ, ಕಲಾವಿದರ ತಂಡದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಜಾನಪದ ಮತ್ತು ಕನ್ನಡ ಸಾಹಿತ್ಯ ವಿಚಾರವಾಗಿ ಪ್ರಾಚಾರ್ಯ ಶಾಂತಕುಮಾರ್, ಸಾವಯವ ಕೃಷಿ ಮತ್ತು ರೈತ ವಿಚಾರವಾಗಿ ಭವಾನಿ ಶಂಕರ್ ಬೈರೇಗೌಡ, ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಪಾತ್ರದ ಬಗ್ಗೆ ಸುಚಿತ್ರ ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿದರು.ಭರ್ಜರಿ ಭೋಜನ: ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯದ ಜಾತ್ರೆಗೆ ಬಂದ ಸಾಹಿತಿಗಳು, ಕವಿಗಳು ರೈತರು, ರೈತ ಮಹಿಳೆಯರು, ವಿದ್ಯಾರ್ಥಿಗಳು, ಅಧಿಕಾರಿಗಳು ಸೇರಿದಂತೆ 170 ಕ್ಕೂ ಹೆಚ್ಚು ಜನರಿಗೆ ಶಾಮಿಯಾನ, ಊಟವನ್ನು ಶಾಸಕ ಶ್ರೀನಿವಾಸ್ ವ್ಯವಸ್ಥೆ ಮಾಡಿದ್ದರು. ಮುದ್ದೆ, ಹಿತಿಕಿದ ಬೇಳೆ ಸಾರು, ಜಿಲೇಬಿ ಸೇರಿದಂತೆ ಭರ್ಜರಿ ಊಟ ಸವಿದರು.
ಸಮ್ಮೇಳನದಲ್ಲಿ ಶ್ರೀ ಮಧುಮಯಾನಂದ ಸ್ವಾಮೀಜಿ, ಕಸಾಪ ತಾಲೂಕು ಅಧ್ಯಕ್ಷ ಪ್ರಕಾಶ್‍ಮೂರ್ತಿ, ಯಂಟಗಾನಹಳ್ಳಿ ಗ್ರಾಪಂ ಅಧ್ಯಕ್ಷ ರಾಹುಲ್‍ಗೌಡ, ಎನ್‍ಪಿಎ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ಸಮಾಜ ಸೇವಕ ಚಿಕ್ಕಹನುಮೇಗೌಡ, ಉಪನ್ಯಾಸಕ ಡಾ.ಗಂಗರಾಜು, ಕೋಟ್ರೇಶ್, ಕಸಾಪ ಜಿಲ್ಲಾ ಪ್ರತಿನಿಧಿ ವಿಜಯ್, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್, ನಗರಾಧ್ಯಕ್ಷ ಮಲ್ಲೇಶ್, ಜಾನಪದ ಗಾಯಕ ನಾಗರತ್ನಮ್ಮ, ಗೌರವ ಕಾರ್ಯದರ್ಶಿ ಭಾನುಪ್ರಕಾಶ್, ಸದಾನಂದ ಆರಾಧ್ಯ ಸಂಘ ಸಂಸ್ಥೆ ಪ್ರತಿನಿಧಿ ವಿಜಯ್ ಹೊಸಪಾಳ್ಯ, ಜಾನಪದ ಕಲಾವಿದ ಸಿದ್ದಯ್ಯ, ಮುಖಂಡರಾದ ಎಂ.ಕೆ ನಾಗರಾಜು, ಟಿ.ನಾಗರಾಜು, ಜಯರಾಮಯ್ಯ ಮತ್ತಿತರಿದ್ದರು.ಪೋಟೋ 9 :
ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 13ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳಾಧ್ಯಕ್ಷರಾದ ಶ್ರೀ ರಮಣಾನಂದನಾಥ ಸ್ವಾಮೀಜಿ, ಶಾಸಕ ಶ್ರೀನಿವಾಸ್ ಉದ್ಘಾಟಿಸಿದರು.ಪೋಟೋ 10 :
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸಮ್ಮೇಳಾಧ್ಯಕ್ಷರಾದ ಶ್ರೀ ರಮಣಾನಂದನಾಥ ಸ್ವಾಮೀಜಿ, ಶಾಸಕ ಶ್ರೀನಿವಾಸ್ ಸನ್ಮಾನಿಸಿದರು.