ಜಿಲ್ಲೆಯಲ್ಲಿ ಕೃಷಿ ಆಧರಿತ ಒಂದೇ ಒಂದು ಬೃಹತ್ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಕೆಐಎಡಿಬಿ ಇದ್ದೂ ಇಲ್ಲದಂತಿದೆ. ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೂ ಚಾಲನೆ ದೊರೆತಿಲ್ಲ.

ಶಿವಕುಮಾರ ಕುಷ್ಟಗಿ

ಗದಗ: 2025ಕ್ಕೆ ವಿದಾಯ ಹೇಳಿ 2026ರ ಹೊಸ ವರ್ಷದಲ್ಲಾದರೂ ಸಮಗ್ರ ಅಭಿವೃದ್ಧಿ ಕನಸು ಸಾಕಾರವಾಗಲಿ ಎಂಬ ನಿರೀಕ್ಷೆಯೊಂದಿಗೆ ನೂತನ ವರ್ಷಕ್ಕೆ ಪದಾರ್ಪಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೃಷಿ ಆಧರಿತ ಒಂದೇ ಒಂದು ಬೃಹತ್ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಕೆಐಎಡಿಬಿ ಇದ್ದೂ ಇಲ್ಲದಂತಿದೆ. ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೂ ಚಾಲನೆ ದೊರೆತಿಲ್ಲ. ಉದ್ಯಮಿಗಳ ನಿರುತ್ಸಾಹ, ಭೂಮೌಲ್ಯ ದ್ವಿಗುಣ ಮತ್ತು ನಾನಾ ಕಾನೂನು ಸಮರದಿಂದ ಉದ್ಯಮಿಗಳು ಬೇಸತ್ತಿದ್ದರು. ಕಿರು ಮತ್ತು ಮಧ್ಯಮ ಕೈಗಾರಿಕೆ ಉತ್ತೇಜನಕ್ಕೆ ನಿವೇಶನ ನೀಡಿದರೂ ಉದ್ಯಮಿಗಳು ಉದ್ಯಮ ಆರಂಭಕ್ಕೆ ನಿರುತ್ಸಾಹ ತೋರಿದ್ದಾರೆ.

20 ವರ್ಷದ ಹಿಂದೆ ನರಸಾಪುರ ಕೈಗಾರಿಕಾ ವಲಯದಲ್ಲಿ ಒಂದು ಎಕರೆಗೆ ಲೀಸ್ ಕಮ್ ಸೇಲ್ ಡೀಡ್ ಸರ್ಕಾರಿ ಮೌಲ್ಯ 2 ಲಕ್ಷ ಇತ್ತು. 2020ರ ನಂತರ ಹೊಸ ಕೈಗಾರಿಕಾ ನೀತಿಯ ಪ್ರಕಾರ ಒಂದು ಎಕರೆಗೆ ₹20 ಲಕ್ಷಕ್ಕೆ ಲೀಸ್ ಕಮ್ ಸೇಲ್ ಡಿಡ್ ಮೌಲ್ಯ ನಿಗದಿ ಆಗಿದ್ದು, ಕೈಗಾರಿಕೆಗಳ ಸ್ಥಾಪನೆಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. 2026 ರಲ್ಲಿ ಈ ಸಮಸ್ಯೆಗೆ ತಿಲಾಂಜಲಿ ಹಾಡಬೇಕಿದೆ.

ಕುಡಿಯುವ ನೀರು: ಗದಗ- ಬೆಟಗೇರಿ ಅವಳಿ ನಗರದ ಜನತೆಗೆ ನಿರಂತರ ಕುಡಿಯುವ ನೀರು ಇಂದಿಗೂ ಕನಸಾಗಿಯೇ ಉಳಿದಿದೆ. ಇದಕ್ಕಾಗಿ ಹಲವಾರು ಯೋಜನೆಗಳು ರೂಪುಗೊಂಡು ಅನುಷ್ಠಾನವಾದರೂ ಅವುಗಳ ಸರಿಯಾದ ನಿರ್ವಹಣೆ ಇಲ್ಲದೇ ದಿನೇ ದಿನೇ ಸಮಸ್ಯೆ ಉಲ್ಬಣವಾಗುತ್ತಿದೆ. ಮಳೆಗಾಲದಲ್ಲಿಯೇ ಅವಳಿ ನಗರದ ಜನರು ನೀರಿನ ಸಮಸ್ಯೆಯಿಂದಾಗಿ ತತ್ತರಿಸಿದ್ದರು. ಇದಕ್ಕೆ ಕೊನೆ ಹಾಡಬೇಕಿದೆ.

ಕಳೆದ 9 ವರ್ಷಗಳಿಂದಲೂ ನಿರ್ವಹಣೆಗೆ ನೀರಿನಂತೆ ಹಣ ರ್ಖಚಾಗುತ್ತಿದೆ ವಿನಃ ನೀರು ಪೂರೈಕೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಗದಗ- ಬೆಟಗೇರಿ ನಗರಕ್ಕೆ ಪ್ರತಿನಿತ್ಯ ಸರಾಸರಿ 45 ಎಂಎಲ್ ಡಿ ನೀರು ಪೂರೈಕೆಗೆ ಅಗತ್ಯವಿದೆ. ವಾಸ್ತವದಲ್ಲಿ ಸರಾಸರಿ 15 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಮುಖ್ಯ ಕೊಳವೆ ಮಾರ್ಗ ಸೋರಿಕೆ ಜತೆಗೆ ಅವಳಿ ನಗರದಲ್ಲಿ ನೀರಿನ ಪೈಪ್‌ಗಳು ಸೋರಿಕೆಯಾಗುತ್ತಿವೆ. ಮುಖ್ಯ ಲೈನ್ ಕಾಮಗಾರಿ ಕಳಪೆ ಆಗಿದ್ದರಿಂದ ಈ ಸಮಸ್ಯೆ ಮುಗಿಯದ ಕಥೆ ಆಗಿದೆ. ₹150 ಕೋಟಿ ವೆಚ್ಚದ ನೀರು ಸರಬರಾಜು ಯೋಜನೆ ಇದಾಗಿದೆ.

ಕೇಂದ್ರೀಯ ವಿದ್ಯಾಲಯ: ಈ ವರ್ಷವಾದರೂ ಕೇಂದ್ರೀಯ ವಿದ್ಯಾಲಯ ಪ್ರಾರಂಭಗಬೇಕಿದೆ. 15 ವರ್ಷಗಳ ಹಿಂದೆಯೇ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರಾದರೂ ಇಲ್ಲಿನ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇದುವೆರಗೂ ಪ್ರಾರಂಭ‍ವಾಗಿಲ್ಲ. ಗದಗ ಮತ್ತು ಹಾವೇರಿಗೆ ಕೇಂದ್ರಿಯ ವಿದ್ಯಾಲಯ ಮಂಜೂರಾತಿ ದೊರೆತಿತ್ತು. ಹಾವೇರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯಾಲಯ ಆರಂಭವಾಗಿ ಕಾರ್ಯ ನಿರ್ವಹಿಸುತ್ತಿದೆ. ಗದಗದಲ್ಲಿ ಮಾತ್ರ ಶಾಲೆಯ ಆರಂಭಕ್ಕೆ ಅಗತ್ಯವಾದ ಜಾಗವೇ ಇನ್ನೂ ಅಂತಿಮಗೊಂಡಿಲ್ಲ.

ಗದಗ- ಲಕ್ಷ್ಮೇಶ್ವರ ರಸ್ತೆ: ಗದಗನಿಂದ ಲಕ್ಷ್ಮೇಶ್ವರ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿ ಕಿತ್ತು ಹೋಗಿ ಎರಡೂವರೆ ವರ್ಷಗಳೇ ಕಳೆದಿದ್ದರೂ ಅದರ ಅಭಿವೃದ್ದಿ ಮಾಡುವತ್ತ ಗದಗ ಶಾಸಕರೂ ಆಗಿರುವ ಸಚಿವ ಎಚ್.ಕೆ.ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಗಮನ ನೀಡದಿರುವುದು ಜಿಲ್ಲೆಯ ಜನರ ಅತೀವ ಬೇಸರಕ್ಕೆ ಕಾರಣವಾಗಿದೆ.

ಶಿಕ್ಷಣ ಮಟ್ಟ ಸುಧಾರಣೆ: ಜಿಲ್ಲೆಯ ಶೈಕ್ಷಣಿಕ ಮಟ್ಟ ರಾಜ್ಯದ ಇನ್ನುಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದಲ್ಲಿ ತೀರಾ ಕೆಳಮಟ್ಟದಲ್ಲಿದ್ದು, ಇದನ್ನು ಸುಧಾರಿಸಲು ಶಿಕ್ಷಣ ಇಲಾಖೆ ಮತ್ತು ಸರ್ಕಾರ ವಿಶೇಷ ಗಮನ ನೀಡಬೇಕಿದೆ. ಪ್ರಸಕ್ತ ಸಾಲಿನಲ್ಲಾದರೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆ ರಾಜ್ಯದ ಮೊದಲ 10 ಸ್ಥಾನಗಳಲ್ಲಿ ಬರಬೇಕು ಎನ್ನುವ ಜಿಲ್ಲೆಯ ಪಾಲಕರು ಕನಸು ನನಸು ಮಾಡುವತ್ತ ಅಧಿಕಾರಿಗಳು ಶ್ರಮಿಸಬೇಕಿದೆ. ಇದಕ್ಕೆ ವಿದ್ಯಾರ್ಥಿಗಳು ಮತ್ತು ಪಾಲಕರು ಗಮನ ಹರಿಸಬೇಕಿದೆ.

ಸಿಬ್ಬಂದಿ ನೇಮಿಸಿ: ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇಲ್ಲದ ಏಕೈಕ ವಿಶ್ವವಿದ್ಯಾಲಯ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. 9 ವರ್ಷಗಳ ಹಿಂದೆ ಆರಂಭಗೊಂಡ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು 175 ಹುದ್ದೆಗಳ ನೇಮಕಾತಿಗೆ ಮಂಜೂರಾತಿ ದೊರೆತಿದ್ದರೂ ಈವರೆಗೂ ಕಾಯಂ ಹುದ್ದೆ ಭರ್ತಿ ನಡೆದಿಲ್ಲ. ಅತಿಥಿ ಉಪನ್ಯಾಸಕರೇ ಇಲ್ಲಿ ಆಪತ್ಬಾಂಧವರಾಗಿದ್ದು, ಕುಲಪತಿಗಳ ಹುದ್ದೆಯೇ ಖಾಲಿ ಇದೆ. ಅದನ್ನು ಪ್ರಭಾರ ಇರುವವರೇ ನಡೆಸುತ್ತಿದ್ದಾರೆ.

ನೀರಾವರಿ ಯೋಜನೆ: ಜಿಲ್ಲೆಯ ಮಹತ್ವದ ಜಾಲವಾಡಗಿ ಏತ ನೀರಾವರಿ ಯೋಜನೆ ಆರಂಭ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದರೂ ಯೋಜನೆ ಆರಂಭವಾಗಿಲ್ಲ. ಹೀಗಾಗಿ 29 ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರಿಗೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಕೆರೆ ತುಂಬಿಸುವ ಯೋಜನೆಗಳಿಗಾಗಿ ನೀಡಿದ್ದ ₹197.55 ಕೋಟಿ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಇದರೊಟ್ಟಿಗೆ ಜಿಲ್ಲೆಯ ನೀರಾವರಿ ಕಾಲುವೆಗಳ ದುರಸ್ತಿ ಸೇರಿದಂತೆ ಅಗತ್ಯ ನೀರಾವರಿ ಯೋಜನೆಗಳು ಪ್ರಾರಂಭವಾಗಲಿ, ಪೂರ್ಣಗೊಳ್ಳಲಿ ಎನ್ನುವ ಸದಾಶಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ

ಗದಗ ಜಿಲ್ಲೆಯಾಗಿ ರೂಪಗೊಂಡು 25 ವಸಂತ ಪೂರ್ಣಗೊಂಡಿವೆ. ಆದರೆ ಇದುವರೆಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಹಿಂದುಳಿದಿದೆ. ಪಕ್ಕದ ಕೊಪ್ಪಳ ಕೈಗಾರಿಕೆಗಳ ಸ್ಥಾಪನೆಯಲ್ಲಿ ಕರ್ನಾಟಕದ ಜೆಮ್‌ಶೆಡ್‌ಪುರ ಎಂದು ಕರೆಸಿಕೊಳ್ಳುತ್ತದೆ. ಪಕ್ಕದ ಹುಬ್ಬಳ್ಳಿ- ಧಾರವಾಡ ಬೆಂಗಳೂರು ಹೊರತುಪಡಿಸಿದರೆ ಎರಡನೇ ದೊಡ್ಡ ನಗರ ಎನ್ನುವ ಹಗ್ಗಳಿಕೆಗೆ ಪಾತ್ರವಾಗುವಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿ ಔದ್ಯೋಗಿಕವಾಗಿ ಅಭಿವೃದ್ಧಿಯಾಗಿದೆ. ಆದರೆ ಗದಗ ಜಿಲ್ಲೆಯಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆಯೇ ಗಂಭೀರವಾಗಿದೆ. 2026ರಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿ ಎನ್ನುವುದೇ ಎಲ್ಲರ ಮಹದಾಸೆಯಾಗಿದೆ.