ಸಾರಾಂಶ
ಶಿರಹಟ್ಟಿ: ದ್ವೇಷ ಬಿಡು ಪ್ರೀತಿ ಮಾಡು ಎನ್ನುವ ಸಂದೇಶ ನೀಡಿರುವ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರರು ನೀಡಿದ್ದಾರೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ೧೩ನೇ ಪೀಠಾಧಿಪತಿ ಜಗದ್ಗುರು ಫಕೀರ ಸಿದ್ದರಾಮ ಶ್ರೀಗಳು ಹೇಳಿದರು.
ಶನಿವಾರ ಹುಬ್ಬಳ್ಳಿಯಲ್ಲಿ ಜರುಗಲಿರುವ ಸೂಫಿ ಸಂತರ ಸಮಾವೇಶದ ಹಿನ್ನೆಲೆಯಲ್ಲಿ ಕಲಬುರಗಿಯ ಖ್ವಾಜಾ ಬಂದೇನವಾಜ ದರ್ಗಾದ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್- ಹುಸೈನಿ ಸಜ್ಜಾದಾ ನಶೀನ್ ಮತ್ತು ಮುತವಲ್ಲಿ ಹಾಗೂ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ ಅವರು ಮಠಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಶ್ರೀಗಳು ಮಾತನಾಡಿದರು. ಯಾರನ್ನು ದ್ವೇಷಿಸಬೇಡ, ಯಾರನ್ನು ತಿರಸ್ಕರಿಸಬೇಡ. ಎಲ್ಲರನ್ನು ಪ್ರೀತಿಯಿಂದ ನೋಡು, ನಾವೆಲ್ಲರೂ ಒಂದು ನಾವೆಲ್ಲರೂ ಬಂಧುಗಳು ಎನ್ನುವಂತಹ ಭಾವನೆ ಬಂದರೆ ಭೂಲೋಕವೇ ಸ್ವರ್ಗವಾಗುವುದು ಎಂದು ಫಕೀರ ಸ್ವಾಮಿಗಳು ಹೇಳಿದ್ದಾರೆ ಎಂದರು. ಹಿಂದೂ ಮುಸ್ಲಿಂ ಭಾವೈಕ್ಯತಾ ಮಠಕ್ಕೆ ಶಾಖಾ ಮಠಗಳು, ಶಾಖಾ ಮಸೀದಿಗಳು ಇವೆ. ಮಸೀದಿಯಲ್ಲಿ ಮೊಹರಂ ಹಬ್ಬವನ್ನು ಶಿರಹಟ್ಟಿಯ ಫಕೀರೇಶ್ವರ ಮಠದ ವತಿಯಿಂದ ನಡೆಸುತ್ತಿದ್ದು, ಧಾರವಾಡದಲ್ಲಿಯೂ ಫಕೀರೇಶ್ವರ ಮಠ, ಮಸೀದಿ ಇದೆ. ಅಲ್ಲಿಯೂ ಹಿಂದೂ ಮುಸ್ಲಿಮರು ಪೂಜೆ ಮಾಡುವ ವಿಧಾನ ಇಂದಿಗೂ ಇದೆ. ಇದು ಭಾವೈಕ್ಯತಾ ಸಂಕೇತವಾಗಿದೆ. ಭಾವೈಕ್ಯತೆ ಜಗತ್ತಿನ ತುಂಬ ಹಬ್ಬಲಿ ಎಂದರು.ಸಾವಳಗಿ ಶಿವಲಿಂಗೇಶ್ವರರು, ಶಿಶುನಾಳದ ಶರೀಫರು, ಶಿರಹಟ್ಟಿ ಫಕೀರೇಶ್ವರರು, ವಿಜಯಪುರ ದರ್ಗಾದ ಖ್ವಾಜಾ ಅಮೀನರು, ಕಲಬುರಗಿಯ ಬಂದೇನವಾಜ್, ಅಜ್ಮೀರದ ಫೀರಾಗಳೆಲ್ಲರೂ ಜಾತಿ ಹೇಳುವವರಲ್ಲ, ಪ್ರೀತಿಯಿಂದ ಇರಿ ಎಂದು ಜಗತ್ತಿಗೆ ಸಾರಿದವರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ ಮಾತನಾಡಿ, ಶಿರಹಟ್ಟಿಯ ಫಕೀರೇಶ್ವರ ಮಠ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ. ಭಾವೈಕ್ಯತೆಯ ಸಂಕೇತವಾಗಿ ಬೆಳೆದು ನಾಡಿಗೆ ಮಹತ್ತರವಾದ ಸಂದೇಶ ನೀಡುತ್ತಾ ಬಂದಿದೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಮಠವಾಗಿದೆ. ದೇಶದಲ್ಲಿ ಭಾವೈಕ್ಯತೆ ಕೋಮು ಸೌಹಾರ್ದ, ಸಾಮರಸ್ಯ ನೀಡುವ ಮಠವಾಗಿದೆ ಎಂದು ಹೇಳಿದರು.ಕಲಬುರಗಿಯ ಖ್ವಾಜಾ ಬಂದೇನವಾಜ ದರ್ಗಾದ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್- ಹುಸೈನಿ ಸಜ್ಜಾದಾ ನಶೀನ್ ಮತ್ತು ಮುತವಲ್ಲಿ ಮಾತನಾಡಿ, ಈ ಮಠಕ್ಕೆ ಕಲಬುರಗಿಯ ದರ್ಗಾಕ್ಕೆ ಅವಿನಾಭಾವ ಸಂಬಂಧವಿದೆ. ಇಲ್ಲಿ ನಡೆಯುವ ಎಲ್ಲ ಸಂಪ್ರದಾಯಗಳು ಮುಸ್ಲಿಂ ಸಂಪ್ರದಾಯವಾಗಿವೆ. ಏಷ್ಯಾ ಖಂಡದಲ್ಲಿಯೇ ಖ್ವಾಜಾ ಬಂದೇನವಾಜ ದರ್ಗಾ ಹೆಸರು ಪಡೆದಿದೆ ಎಂದರು.
ಈ ನಾಡಿನ ಎಲ್ಲ ಸೂಫೀ ಸಂತರು ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆ. ಎಲ್ಲರೂ ಸಹೋದರರಂತೆ ಬಾಳಬೇಕು ಎಂಬ ಸಂದೇಶ ನೀಡಿದ್ದಾರೆ. ಅದರಂತೆ ಮಠವೂ ಭಾವೈಕ್ಯತೆಯ ಸಂದೇಶ ಸಾರುತ್ತಾ ಸಾಗಿದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಹುಮಾಯೂನ್ ಮಾಗಡಿ, ಹಮೀದ ಸನದಿ, ಚಾಂದಸಾಬ ಮುಳಗುಂದ, ಡಿ.ಕೆ. ಹೊನ್ನಪ್ಪನವರ, ಮುತ್ತು ಭಾವಿಮನಿ, ಅಜ್ಜು ಪಾಟೀಲ, ಎಂ.ಕೆ. ಲಮಾಣಿ, ಹೊನ್ನಪ್ಪ ಶಿರಹಟ್ಟಿ, ಬುಡನಶ್ಯಾ ಮಕಾನದಾರ, ಮಾಬೂಸಾಬ ಲಕ್ಷ್ಮೇಶ್ವರ, ಮಂಜುನಾಥ ಘಂಟಿ, ಹಸರತ ಢಾಲಾಯತ, ಅನೀಲ ಪಾಟೀಲ, ಹೈದರ್ ಬಾಷಾ, ದಾದಾಫೀರ ಮುಚ್ಚಾಲೆ ಇತರರು ಇದ್ದರು.